






ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು, ಕೆಮ್ಮಿಂಜೆ ವಲಯದ ವೀರಮಂಗಲ ಕಾರ್ಯಕ್ಷೇತ್ರದ ಶುಭೋದಯ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನವಿಕಾಸ ಕೇಂದ್ರದ ಸದಸ್ಯೆ ಹೇಮಾವತಿ ವಹಿಸಿದ್ದರು. ಕೆಮ್ಮಿಂಜೆ ವಲಯದ ವಲಯಾಧ್ಯಕ್ಷ ಸುಂದರ ಬಲ್ಯಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಅನೇಕ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿದ್ದು, ಮಹಿಳೆಯರಲ್ಲಿ ಜಾಗೃತಿ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು. ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.



ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಶಶಿಧರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಜೊತೆಗೆ ಸಂಘಟನಾ ಶಕ್ತಿಯನ್ನು ವೃದ್ಧಿಸಿ ಧೈರ್ಯ, ಸಹಬಾಳ್ವೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತಿದೆ ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುನೀತಾ ಅವರು ಪೌಷ್ಠಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿ, ಪೌಷ್ಠಿಕಾಂಶಗಳ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ಮಕ್ಕಳ ಬೆಳವಣಿಗೆಯ ಮೇಲೆ ಬೀರುವ ಪರಿಣಾಮಗಳು ಹಾಗೂ ಸಮತೋಲಿತ ಆಹಾರದ ಅಗತ್ಯತೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಗ್ರಾಮ ಸಮಿತಿಯ ಸದಸ್ಯ ಗೋಪಾಲಕೃಷ್ಣ, ವಲಯ ಮೇಲ್ವಿಚಾರಕ ಗಿರೀಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಸೇವಾಪ್ರತಿನಿಧಿ ಯಮುನಾ, ಶುಭೋದಯ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಮಹಿಳೆಯರಲ್ಲಿ ಆರೋಗ್ಯಕರ ಆಹಾರ ಪದ್ಧತಿ ಹಾಗೂ ಪೌಷ್ಠಿಕಾಂಶಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ನೆರವಾಯಿತು










