ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾ| ಘಟಕದಿಂದ ಪತ್ರಿಕಾ ದಿನಾಚರಣೆ : ಹಿರಿಯ ಪತ್ರಕರ್ತ ಯಶು ವಿಟ್ಲರವರಿಗೆ ಗೌರವ ಸನ್ಮಾನ

0

ಪುತ್ತೂರು:ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಹಿರಿಯ ಪತ್ರಕರ್ತ, ಸಾಹಿತಿ ಯಶವಂತ್ ವಿಟ್ಲ (ಯಶು ವಿಟ್ಲ) ಅವರಿಗೆ ಗೌರವ ಸನ್ಮಾನ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ವಿಟ್ಲದಲ್ಲಿರುವ ಅವರ ನಿವಾಸ ‘ಶ್ರವಣ‘ದಲ್ಲಿ ಜು.23 ರಂದು ನೆರವೇರಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಹಿಸಿದ್ದು ಅವರು ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಹಿರಿಯ ಪತ್ರಕರ್ತ ದಂಪತಿಗೆ ಗೌರವ ಸನ್ಮಾನ:
ಪತ್ರಿಕಾರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸುದೀರ್ಘ ಕೊಡುಗೆ ನೀಡಿದ ಹಿರಿಯ ಪತ್ರಕರ್ತ ಯಶು ವಿಟ್ಲ ದಂಪತಿಯನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷರಾದ ಸಂತೋಷ್‌ ಕುಮಾರ್‌ ಶಾಂತಿನಗರ ಅವರು ಸನ್ಮಾನಿತರಾದ ಯಶು ವಿಟ್ಲ ಅವರ ಬಗ್ಗೆ ಮಾತನಾಡಿ ಸನ್ಮಾನ ಪತ್ರ ವಾಚಿಸಿದರು.


ಎಲ್ಲರನ್ನೂ ಒಳಗೊಳ್ಳುವ ವಾತಾವರಣ ನಿರ್ಮಾಣ: ಜ್ಯೋತಿ ಪ್ರಕಾಶ್ ಪುಣಚ
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಪುಣಚ ಅವರು, ಹಿಂದೆ ಚಾಲ್ತಿಯಲ್ಲಿದ್ದ ಕಠಿಣ ನಿಯಮಗಳಿಂದಾಗಿ ಹಲವು ಸಕ್ರಿಯ ಬರಹಗಾರರು ಪತ್ರಕರ್ತರ ಸಂಘಟನೆಯ ಹಕ್ಕುಗಳಿಂದ ವಂಚಿತರಾಗುತ್ತಿದ್ದರು. ಪ್ರತಿಯೊಬ್ಬ ಸಕ್ರಿಯ ಪತ್ರಕರ್ತನಿಗೂ ಸೂಕ್ತ ಗುರುತಿಸುವಿಕೆ ಸಿಗಬೇಕೆಂಬ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಸ್ತಿತ್ವಕ್ಕೆ ಬಂದಿದೆ ಎಂದ ಅವರು ಇಂದು ನಮ್ಮ ಯೂನಿಯನ್ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಮಾತ್ರವಲ್ಲದೆ ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೂ ಮುಕ್ತ ಸದಸ್ಯತ್ವ ನೀಡುವ ಮೂಲಕ ಸೌಹಾರ್ದಯುತ ವಾತಾವರಣ ನಿರ್ಮಿಸಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕು ಘಟಕಗಳು ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗಷ್ಟೇ ಬೆಳ್ತಂಗಡಿ ತಾಲೂಕು ಸಮಿತಿ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕು ಸಮಿತಿಯನ್ನು ರಚಿಸುವ ಯೋಜನೆಯನ್ನು ಹೊಂದಿದ್ದೇವೆ. ರಾಮದಾಸ್ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲೇ 30ಕ್ಕೂ ಹೆಚ್ಚು ಹೊಸ ಸದಸ್ಯರು ನೋಂದಾವಣೆಯಾಗಿದ್ದಾರೆ. ಹಿರಿಯ ಪತ್ರಕರ್ತರ ಮನೆಗೇ ತೆರಳಿ ಗೌರವಿಸುವುದು ನಮ್ಮ ಯೂನಿಯನ್‌ನ ವಿಶೇಷ ಪರಿಪಾಠವಾಗಿದೆ ಎಂದರು.


ಪತ್ರಿಕಾ ರಂಗದಲ್ಲಿ ಯಶು ವಿಟ್ಲರವರದ್ದು ಗಟ್ಟಿಯಾದ ಹೆಸರು-ತಾರಾನಾಥ ಗಟ್ಟಿ:
ಪತ್ರಿಕಾ ದಿನಾಚರಣೆಯ ಮಹತ್ವ ಮತ್ತು ಆರಂಭದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ತಾರಾನಾಥ ಗಟ್ಟಿ ಕಾಪಿಕಾಡುರವರು, ಪತ್ರಿಕಾ ದಿನಾಚರಣೆಯ ಮಹತ್ವದ ಈ ಸಂದರ್ಭದಲ್ಲಿ ಪತ್ರಿಕಾರಂಗದಲ್ಲಿ ಅಪಾರ ಹೆಸರು ಮಾಡಿರುವ ಯಶು ವಿಟ್ಲ ಅವರನ್ನು ಸನ್ಮಾನಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಭಾಗ್ಯ ಹಾಗೂ ಕರ್ತವ್ಯವಾಗಿದೆ. ಆ ಕಾಲದಲ್ಲಿ ಗ್ರಾಮ ಪಂಚಾಯತ್‌ನಿಂದ ಹಿಡಿದು ಶಾಸಕರ ತನಕ ಪತ್ರಿಕೆಯ ಬರಹಗಳಿಗೆ ಉತ್ತಮವಾದ ಸ್ಪಂದನೆ ದೊರೆಯುತ್ತಿತ್ತು. 1978ರಿಂದ ಆ ಕಾಲದ ಪ್ರಭಾವಿ ಪತ್ರಿಕೆ ‘ನವಭಾರತ’ದ ಮೂಲಕ ಪತ್ರಿಕಾ ರಂಗಕ್ಕೆ ಬಂದ ಯಶು ವಿಟ್ಲ ಅವರು ನಂತರ ‘ಉದಯವಾಣಿ’ಯಲ್ಲಿ ಸುಮಾರು 33 ವರ್ಷಗಳ ಕಾಲ ಕ್ರಿಯಾಶೀಲ ಪತ್ರಕರ್ತರಾಗಿ ‘ಬಂಟ್ವಾಳ ಸಮಾಚಾರ’ ಮೊದಲಾದ ಅನೇಕ ಬರಹಗಳ ಮೂಲಕ ಮನೆಮಾತಾಗಿದ್ದಾರೆ. ಆ ಮೂಲಕ ಯಶು ವಿಟ್ಲ ಅವರು ವಿಟ್ಲದ ಅಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು. 


ಯಶು ವಿಟ್ಲರವರು ವಿಟ್ಲ ಭಾಗದಲ್ಲಿ ಬಹಳಷ್ಟು ಜನಪ್ರಿಯ ವ್ಯಕ್ತಿ-ಹರೀಶ್ ಬಂಟ್ವಾಳ್:
ದ.ಕ ಜಿಲ್ಲೆಯ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹರೀಶ್ ಬಂಟ್ವಾಳ್ ಮಾತನಾಡಿ,  ಗೌರವಾಧ್ಯಕ್ಷವಿಟ್ಲದ ಸಮಗ್ರ ಅಭಿವೃದ್ಧಿಯಲ್ಲಿ ಯಶು ವಿಟ್ಲ ಅವರ ಜನಪರ ಬರಹಗಳು ಪ್ರಮುಖ ಪಾತ್ರ ವಹಿಸಿವೆ. ಅಂತಹ ಹಿರಿಯರನ್ನು ಅವರ ಮನೆಯಲ್ಲೇ ಗೌರವಿಸುವ ಮೂಲಕ ಪುತ್ತೂರು ತಾಲೂಕು ಘಟಕ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದೆ. ಯಶು ವಿಟ್ಲ ಅವರು ಈ ಭಾಗದಲ್ಲಿ ಬಹಳಷ್ಟು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಬರಹಗಾರರಿಗೆ ನಿವೃತ್ತಿ ಜೀವನ ಎಂಬುವುದಿಲ್ಲ. ಪತ್ರಿಕಾ ರಂಗದಲ್ಲಿ ಕೇಳಿ ಬರುವ ಅನೇಕ ಹೆಸರುಗಳಲ್ಲಿ ಇವರು ಬಹಳ ಎತ್ತರದ ಸ್ಥಾನದಲ್ಲಿದ್ದಾರೆ. ಇಲ್ಲಿನ ಅಭಿವೃದ್ಧಿಯಲ್ಲಿ ಯಶು ವಿಟ್ಲ ಅವರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರೂ ಅವರ ಕಾರ್ಯ ಚಟುವಟಿಕೆಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಬಹಳಷ್ಟು ಲೇಖನಗಳು, ಬರಹಗಳು ಹಾಗೂ ಸಂಚಿಕೆಗಳು ಅವರ ಸಾಹಿತ್ಯ ಕ್ಷೇತ್ರದ ಆವಿಷ್ಕಾರಗಳಾಗಿವೆ. ಈಗಲೂ ಅವರು ಒಡಿಯೂರಿನಲ್ಲಿ ‘ದತ್ತಪ್ರಕಾಶ’ ಆಧ್ಯಾತ್ಮಿಕ ದ್ವೈಮಾಸಿಕ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾದ ವಿ.ಟಿ. ಪ್ರಸಾದ್, ಹೇಮಾ ಜಯರಾಮ್ ರೈ, ವಿಟ್ಲ ಅರಮನೆಯ ಜಯರಾಮ್ ಬಲ್ಲಾಳ್, ತಾಲೂಕು ಘಟಕದ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಪ್ರಜ್ವಲ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಸುಮನಾ ಕೇಪು ಸೇರಿದಂತೆ ಹಲವು ಪತ್ರಕರ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.


ಮೌಶ್ಮಿ ಶೆಟ್ಟಿ ಪ್ರಾರ್ಥಿಸಿದರು.  ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ಸ್ವಾಗತಿಸಿದರು. ಸದಸ್ಯೆ ಮಧುಶ್ರೀ ವಂದಿಸಿ, ತಾಲೂಕು ಕೋಶಾಧಿಕಾರಿ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.


ಗುರುತಿಸಿ ಸನ್ಮಾನಿಸಿದ ಪತ್ರಕರ್ತರಿಗೆ ಕೃತಜ್ಞತೆಗಳು:
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶು ವಿಟ್ಲ ಅವರು, “ಸಾಹಿತ್ಯ ಕ್ಷೇತ್ರ ಹಾಗೂ ಪತ್ರಿಕೋದ್ಯಮದಲ್ಲಿನ ನನ್ನ ಸುದೀರ್ಘ ಪಯಣವನ್ನು ಗುರುತಿಸಿ ಗೌರವಿಸಿದ ತಾಲೂಕು ಘಟಕಕ್ಕೆ ಅಭಾರಿಯಾಗಿದ್ದೇನೆ ಎಂದು ಧನ್ಯವಾದ ಅರ್ಪಿಸಿ, ಪತ್ರಕರ್ತರಿಗೆ ಶುಭ ಹಾರೈಸಿದರು.


ಸದಸ್ಯರ ಸೇರ್ಪಡೆ, ಡೈರಿ ವಿತರಣೆ..
ಇದೇ ವೇಳೆ ಯೂನಿಯನ್‌ಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ದಿವಾಕರ್ ದಾಸ್ ಅವರ ಮಾಲಕತ್ವದ ಎಸ್.ಎಲ್.ವಿ. ಬುಕ್ ಹೌಸ್ ವತಿಯಿಂದ ಯೂನಿಯನ್‌ನ ಎಲ್ಲಾ ಸದಸ್ಯರಿಗೆ ಡೈರಿಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here