







ಪುತ್ತೂರು: ನೀಟ್ ಹಗರಣ ಮತ್ತು ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಪುತ್ತೂರು ವಿದ್ಯಾರ್ಥಿ ಹಿತರಕ್ಷಣ ಸಮಿತಿ ವತಿಯಿಂದ ಮಿನಿ ವಿಧಾನ ಸೌಧ ಎದುರುಗಡೆಯ ಅಮರ್ ಜವಾನ್ ಜ್ಯೋತಿ ಸ್ಮಾರಕ ಬಳಿಯಲ್ಲಿ ಜು.25ರಂದು ಪ್ರತಿಭಟನೆ ನಡೆಯಿತು. ಆರಂಭದಲ್ಲಿ ಪುತ್ತೂರು ಗಾಂಧಿಕಟ್ಟೆಯ ಗಾಂಧಿ ಪ್ರತಿಮೆಗೆ ಸಿಐಟಿ ಮುಖಂಡ ಬಿ.ಎಮ್.ಭಟ್ರವರು ಹೂ ಮಾಲೆ ಹಾಕಿ ಚಾಲನೆ ನೀಡಿದರು. ಬಳಿಕ ಗಾಂಧಿಕಟ್ಟೆ ಬಳಿಯಿಂದ ಅಮರ್ ಜವಾನ್ ಜ್ಯೋತಿ ಸ್ಮಾರಕ ಬಳಿಯವರೆಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆದು ಅಲ್ಲಿ ಸಮಾವೇಶ ನಡೆಯಿತು.


ವಿದ್ಯಾರ್ಥಿಗಳು ಹೊಸ ಸಮಾಜ ಕಟ್ಟುವ ಕೆಲಸ ಮಾಡಬೇಕು:
ಸಾಮಾಜಿಕ ಹೋರಾಟಗಾರ ರಾಘವೇಂದ್ರ ಹಾಲ್ಕೆರೆ ಮಾತನಾಡಿ, ನೀಟ್ನಿಂದ 21 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದರ ವಿರುದ್ಧ ವಿದ್ಯಾರ್ಥಿಗಳು ಶಾಂತಿಯುತವಾಗಿ ಸಿಡಿದೇಳಬೇಕು. ಇಂದು ವಿದ್ಯಾರ್ಥಿಗಳು ಮಾಡಿದ ಪ್ರತಿಭಟನೆಯ ಮಾತುಗಳು ದೆಹಲಿಗೆ ಮುಟ್ಟಬೇಕು ಎಂದರು. ಬಸವಣ್ಣ, ಗಾಂಧಿ, ಬುದ್ಧನ ಆಶಯಗಳನ್ನು ಪಾಲಿಸಬೇಕು. ಮೌನವಾಗಿರುವುದು ಪ್ರಭುತ್ವದ ಸಂಕೇತವಾಗಿದೆ. ಆದರೆ ಇಂದು ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ ಎಂದ ಅವರು ವಿದ್ಯಾರ್ಥಿಗಳು ಮುಂದಿನ ಹೊಸ ಸಮಾಜ ಕಟ್ಟಬೇಕು. ಕಟ್ಟುವ ಕೆಲಸ ಮಾಡಬೇಕು. ನಿಮ್ಮ ಹೋರಾಟ ಶಾಂತಿಯುತ ಕಿಚ್ಚಾಗಿ ಮೂಡಿಬರಲಿ ಎಂದರು.




ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕು:
ಕಾಂಗ್ರೆಸ್ ಮುಖಂಡ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ ನೀಟ್ ಹೋರಾಟದಲ್ಲಿ 21 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಐಸಿಯುನಲ್ಲಿ ಕೆಲವು ಮಕ್ಕಳು ಮಲಗಿದ್ದಾರೆ. ಅವರಿಗೆ ದೇವರು ಅನುಗ್ರಹ ಮಾಡಲಿ. ನಿಮ್ಮ ಹೋರಾಟ ನ್ಯಾಯಯುತ ಹೋರಾಟವಾಗಿದೆ. ಈ ಹೋರಾಟ ಇಲ್ಲಿಗೇ ನಿಲ್ಲಿಸದೆ ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕು ಎಂದರು.
ನ್ಯಾಯ ಕೊಡಿಸದಿದ್ದರೆ ವಿದ್ಯಾರ್ಥಿ ಶಕ್ತಿ ಎದ್ದು ಬರುತ್ತದೆ:
ಸಿಐಟಿ ಮುಖಂಡ ಬಿ.ಎಂ.ಭಟ್ ಮಾತನಾಡಿ, ಕೆಲವು ದಿನಗಳ ಹಿಂದೆ ಬಿ.ಸಿ.ರೋಡ್ನಲ್ಲಿ ಹುಡುಗಿಯನ್ನು ಕೊಲೆ ಮಾಡಿದ ಚೇತನ್ಗೂ ಕೆಂದ್ರ ಸರಕಾರದ ಶಿಕ್ಷಣ ಸಚಿವರಾದ ಧರ್ಮೇದ್ರ ಪ್ರಧಾನ್ಗೂ ವ್ಯತ್ಯಾಸ ಇಲ್ಲ. ನರೇಂದ್ರ ಮೋದಿಯವರೇ ನೀವು ಹೋರಾಟಗಾರರ ವಿರುದ್ಧ ಗೋಲಿಬಾರ್ ಮಾಡಿದಿರಿ ಎಂದರು. ಹೋರಾಟವೇ ಬದುಕು ಹೋರಾಟವಿಲ್ಲದೆ ಏನನ್ನೂ ಪಡೆಯಲು ಸಾಧ್ಯವಿಲ್ಲ. ಮೋದಿಯವರು ಹೇಳಿದ ಹಾಗೆ ಗಂಡೆ ಬಾರಿಸಿದ್ದೇವೆ. ದೀಪ ಹಚ್ಚಿದ್ದೇವೆ. ಈಗ ಧರ್ಮೇದ್ರ ಪ್ರಧಾನ್ ರಾಜೀನಾಮೆ ಕೊಡಲು ಪುನಃ ಗಂಟೆ ಬಡಿಬೇಕಾ? ದೀಪ ಹಚ್ಚಬೇಕಾ? ಎಂದ ಅವರು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸದಿದ್ದರೆ ವಿದ್ಯಾರ್ಥಿ ಶಕ್ತಿ ಎದ್ದು ಬರುತ್ತದೆ ಎಂದರು.

ಜೈನುದ್ದಿನ್ ಕೆಂಪಿ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರತಿಭಟನಾಕಾರರು ಧಿಕ್ಕಾರ, ಘೋಷಣೆ ಕೂಗಿದರು. ಬ್ಯಾಂಡ್ ವಾದ್ಯದೊಂದಿಗೆ ಪ್ರತಿಭಟನೆ ನಡೆಯಿತು. ಪುಡಾ ಅಧ್ಯಕ್ಷ ಅಮಲಾ ರಾಮಚಂದ್ರ, ಸಿಐಟಿ ಮುಖಂಡ ಸತೀಶನ್, ನಗರಸಭಾ ಮಾಜಿ ಸದಸ್ಯ ರಿಯಾಜ್ ಪರ್ಲಡ್ಕ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜ, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಂಗ್ರಸ್ ಮುಖಂಡರಾದ ಮೌರೀಸ್ ಮಸ್ಕರೇನಸ್, ಉಲ್ಲಾಸ್ ಕೋಟ್ಯಾನ್, ಶೇಷಪ್ಪ ನೆಕ್ಕಿಲು, ಕಲಮೇಶ್ ಸರ್ವೆ ಸೇರಿದಂತೆ ಹಲವರು ಭಾಗವಹಿಸಿದ್ದರು. ಭಾತೀಶ್ ಅಳಕೆಮಜಲು ಸ್ವಾಗತಿಸಿ ವಂದಿಸಿದರು.










