ರಾಮಕುಂಜ ಕ.ಮಾ.ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್‌ರಿಂದ ವೃತ್ತಿಜೀವನದಲ್ಲಿ ಸಹಕರಿಸಿದವರಿಗೊಂದು ಕೃತಜ್ಞತಾ ನಮನ ’ಧನ್ಯೋಸ್ಮಿ’, ಗ್ರಂಥಾಲಯ ಉದ್ಘಾಟನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದು ಜು.31ರಂದು ಸೇವಾ ನಿವೃತ್ತಿಯಾಗಲಿರುವ ಸತೀಶ್ ಭಟ್ ಅವರಿಂದ ವೃತ್ತಿ ಜೀವನದಲ್ಲಿ ಸಹಕರಿಸಿದವರಿಗೊಂದು ಕೃತಜ್ಞತಾ ನಮನ ’ ಧನ್ಯೋಸ್ಮಿ’ ಹಾಗೂ ಕೊಡುಗೆಯಾಗಿ ನೀಡಿದ ಗ್ರಂಥಾಲಯದ ಉದ್ಘಾಟನೆ ಜು.26ರಂದು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸತೀಶ್ ಭಟ್‌ರಿಗೆ ಸರಿಸಾಟಿ ಯಾರೂ ಇಲ್ಲ-ಕೆ.ರಾಜೇಂದ್ರ ಭಟ್;
ದಿಕ್ಸೂಚಿ ಭಾಷಣ ಮಾಡಿದ ಜೇಸಿ ರಾಷ್ಟ್ರೀಯ ತರಬೇತುದಾರರಾದ ಕೆ.ರಾಜೇಂದ್ರ ಭಟ್ ಅವರು, ಭಾರತ ಜ್ಞಾನದಲ್ಲಿ ಮುಳುಗಿರುವ ದೇಶ. ಹಿಂದೆ ಜ್ಞಾನದ ಉದ್ದೇಶಕ್ಕೆ ಗುರುಕುಲ ಶಿಕ್ಷಣ ಸಿಗುತಿತ್ತು. ಆದರೆ ಈಗ ಶಾಲೆಗಳು ಉದ್ಯೋಗ ಸೃಷ್ಟಿ ಮಾಡುತ್ತಿವೆ. ಶಿಕ್ಷಣ ದೊಡ್ಡ ಉದ್ಯಮವಾಗಿ ಪರಿವರ್ತನೆಗೊಂಡಿದೆ. ಗುರುಗಳಿಗೆ ಹೇಗೆ ಗೌರವ ಕೊಡಬೇಕು ಎಂಬುದಕ್ಕೆ ಅಬ್ದುಲ್ ಕಲಾಂ ಮಾದರಿಯಾಗಿದ್ದಾರೆ. ಮಕ್ಕಳನ್ನು ಕೇವಲ ಅಂಕ, ರ‍್ಯಾಂಕ್‌ಗಳಿಗೆ ಸೀಮಿತಗೊಳಿಸದೆ ಬದುಕಿಗಾಗಿ ಸಿದ್ಧಗೊಳಿಸಬೇಕು. ಶಿಕ್ಷಣದಿಂದ ಬದುಕಿನ ಬದಲಾವಣೆಯಾಗಲಿದೆ ಎಂದರು. ನಿವೃತ್ತಿಯ ಸಂದರ್ಭದಲ್ಲಿ ಸತೀಶ್ ಭಟ್ ಅವರು ತಾನು ಸೇವೆ ಸಲ್ಲಿಸಿದ ಬಿಳಿನೆಲೆ ಹಾಗೂ ರಾಮಕುಂಜ ಶಾಲೆಗಳಿಗೆ ಗ್ರಂಥಾಲಯ ಕೊಡುಗೆ ನೀಡುತ್ತಿರುವುದು ಅವರ ಅದ್ಬುತ ಕಲ್ಪನೆಯಾಗಿದೆ. ಅವರು ತಾನು ಸೇವೆ ಸಲ್ಲಿಸಿದ ಶಾಲೆಗಳಿಗೆ ಸಂಪನ್ಮೂಲವನ್ನು ಕ್ರೂಢೀಕರಿಸಿದ್ದಾರೆ. ಜೇಸಿಐ ತರಬೇತುದಾರರೂ ಆಗಿರುವ ಅವರು ಹೊಸ ಹೊಸ ತಂತ್ರಜ್ಞಾನದೊಂದಿಗೆ ತರಬೇತಿ ನೀಡುತ್ತಾರೆ. ಸತೀಶ್ ಭಟ್‌ರಿಗೆ ಸರಿಸಾಟಿ ಯಾರೂ ಇಲ್ಲ. ನಿವೃತ್ತಿಯ ಬಳಿಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಅವರ ಸಂಕಲ್ಪ ಅತ್ಯುತ್ತಮವಾಗಿದೆ ಎಂದು ಹೇಳಿದರು.

ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ-ಶಶಿಧರ ಜಿ.ಎಸ್.:
ಗ್ರಂಥಾಲಯ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) ದ.ಕ.ಇಲ್ಲಿನ ಉಪನಿರ್ದೇಶಕರಾದ ಶಶಿಧರ ಜಿ.ಎಸ್.ಮಾತನಾಡಿ, ದೇವರು ಮೈ ಮರೆತರು, ಗುರು ಕೈಬಿಡುವುದಿಲ್ಲ. ಸತೀಶ್ ಭಟ್ ಅವರು ಗುರು ಸಂಸ್ಕೃತಿಯಲ್ಲಿ ತಾನು ಸೇವೆ ಮಾಡಿದ ಶಾಲೆಗಳಿಗೆ ಗ್ರಂಥಾಲಯ ಕೊಡುಗೆ ನೀಡುತ್ತಿದ್ದಾರೆ. ಸತೀಶ್ ಭಟ್ ಅವರು ಮುಖ್ಯಶಿಕ್ಷಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಬಾಳು ಬೆಳಗಿದ, ವ್ಯಕ್ತಿತ್ವ ರೂಪಿಸಿದ ಶಿಕ್ಷಕ-ಕೇಶವ ಅಮೈ ;
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರು ಮಾತನಾಡಿ, ಸತೀಶ್ ಭಟ್ ಅವರು ನನ್ನ ಬಾಳು ಬೆಳಗಿಸಿದ, ವ್ಯಕ್ತಿತ್ವ ರೂಪಿಸಿದ ಗುರು. ಅವರ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಎನ್ನುವುದು ನನಗೆ ಹೆಮ್ಮೆ. ಅವರು ನನ್ನ ಗುರು, ಮಾರ್ಗದರ್ಶಕ, ಹಿತೈಷಿ, ಸ್ನೇಹಿತನೂ ಆಗಿದ್ದಾರೆ. ಕಬ್ಬಿಣದ ಕಡಲೆಯಂತಿದ್ದ ಗಣಿತವನ್ನು ಮೋಜಿನ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ನಾನು ಇಂಜಿನಿಯರ್ ಅಲ್ಲದಿದ್ದರೂ ಸಿವಿಲ್ ಕಾಮಗಾರಿ ನಿರ್ವಹಿಸುವಲ್ಲಿ ಸತೀಶ್ ಭಟ್‌ರವರ ಕೊಡುಗೆ ಇದೆ ಎಂದು ಹೇಳಿದರು. ಸತೀಶ್ ಭಟ್ ಅವರು ಕೇವಲ ಶಿಕ್ಷಕನಾಗಿರದೆ ಕ್ರಿಕೆಟ್, ವಾಲಿಬಾಲ್ ಆಟಗಾರರೂ ಆಗಿದ್ದರು. ಅತ್ಯುತ್ತಮ ಯೋಗಪಟುವಾಗಿದ್ದು ಅವರಿಂದ ಯೋಗ ಕಲಿತ ಅನೇಕ ಮಂದಿ ದೇಶ, ವಿದೇಶಗಳಲ್ಲಿ ಯೋಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳೇ ಅವರಿಗೆ ಆಸ್ತಿ. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗೆ ಸೈನ್ಸ್ ಪಾರ್ಕ್, ಸೈನ್ಸ್ ಲ್ಯಾಬ್, ಅಟಲ್ ಟಿಂಕರಿಂಗ್ ಲ್ಯಾಬ್ ಸೇರಿದಂತೆ ಹಲವು ಸೌಲಭ್ಯಗಳನ್ನು ತಂದಿದ್ದಾರೆ. ಈ ಶಿಕ್ಷಣ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಅರ್ಹವಾಗಿಯೇ ಅವರಿಗೆ ರಾಜ್ಯಪ್ರಶಸ್ತಿ ಬಂದಿದೆ ಎಂದು ಕೇಶವ ಅಮೈ ಹೇಳಿದರು.

ಮುಂದೆಯೂ ಅವರ ಸೇವೆ ಸಿಗಬೇಕು-ಕೆ.ಎಸ್.ರಾಧಾಕೃಷ್ಣ;
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ಮಾತನಾಡಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಉತ್ತುಂಗಕ್ಕೆ ಏರಲು ಸತೀಶ್ ಭಟ್ ಅವರೂ ಕಾರಣಕರ್ತರು. ಅವರ ಸೇವಾ ಅವಧಿಯ 15 ವರ್ಷ ಸಂಸ್ಥೆ ಬಹಳಷ್ಟು ಬೆಳವಣಿಗೆ ಕಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳಗೊಂಡಿದೆ. ಅವರದ್ದು ಅರಿತು ಶಿಕ್ಷಣ ನೀಡುವ ವ್ಯಕ್ತಿತ್ವ. ಅವರಿಗೆ ರಾಷ್ಟ್ರಪ್ರಶಸ್ತಿ ಸಿಗಬೇಕಿತ್ತು. ಆದರೆ ಅವರು ಎಂದೂ ಪ್ರಶಸ್ತಿಯ ಹಿಂದೆ ಹೋಗಿಲ್ಲ. ಮುಂದೆಯೂ ಅವರ ಸೇವೆ ಈ ಶಿಕ್ಷಣ ಸಂಸ್ಥೆಗೆ ಸಿಗಬೇಕೆಂಬುದು ಪೇಜಾವರ ಶ್ರೀಗಳ ಆಶಯವೂ ಆಗಿದೆ. ಅದರಂತೆ ಅವರ ಸೇವೆ ಈ ಶಿಕ್ಷಣ ಸಂಸ್ಥೆಗೆ ಸಿಗಬೇಕೆಂದು ಹೇಳಿದರು.

ಶಿಕ್ಷಣ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು-ಕೆ.ಸೇಸಪ್ಪ ರೈ:
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳಿಗೆ ೧೦೫ ವರ್ಷ ಸಂದಿದೆ. ಈ ಅವಧಿಯಲ್ಲಿ ಹಲವು ಮಂದಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಮುಖ್ಯಗುರುಗಳಾಗಿ ಸತೀಶ್ ಭಟ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರಿಂದಾಗಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಅವರ ಪ್ರೇರಣೆಯಿಂದಲೇ ರಾಮಕುಂಜಕ್ಕೆ ಜಿಲ್ಲೆ, ರಾಜ್ಯಮಟ್ಟದಲ್ಲೂ ಹೆಸರು ಬಂದಿದೆ. ಅವರ ಶಿಷ್ಯ ಬಳಗ ಅವರಿಗೆ ದೊಡ್ಡ ಶಕ್ತಿಯಾಗಿದೆ. ಶಿಕ್ಷಣದ ಅಭಿವೃದ್ಧಿಯಲ್ಲಿ ಮುಂದೆಯೂ ಅವರು ತೊಡಗಿಕೊಳ್ಳಬೇಕೆಂದು ಹೇಳಿದರು.

ಜನರ ಹೃದಯದಲ್ಲಿ ಸ್ಥಿರವಾಗಿ ಉಳಿದಿದ್ದಾರೆ-ಟಿ.ನಾರಾಯಣ ಭಟ್;
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್ ಮಾತನಾಡಿ, ಸತೀಶ್ ಭಟ್ ಅವರು ಸೇವೆಯಿಂದ ನಿವೃತ್ತಿಯಾಗುತ್ತಿದ್ದರೂ ಅವರಲ್ಲಿ ಶೈಕ್ಷಣಿಕ ಅನುಭವ, ದುಡಿಯುವ ಶಕ್ತಿ ಕಡಿಮೆಯಾಗಿಲ್ಲ. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ 13 ವರ್ಷ ದುಡಿದರೂ ಅವರು ಇಲ್ಲಿನ ಜನರ ಹೃದಯದಲ್ಲಿ ಸ್ಥಿರವಾಗಿ ಉಳಿದಿದ್ದಾರೆ. ಪಾಠದ ಜೊತೆಗೆ ಸಂಸ್ಥೆಯ ಬೆಳವಣಿಗೆಗೆ ದುಡಿದಿದ್ದಾರೆ. ಅವರಿಂದ ಒಳ್ಳೆಯ ಸೇವೆ ಸಿಕ್ಕಿದೆ ಎಂದರು.

ಎನ್‌ಎಂಎಂಎಸ್‌ನಲ್ಲಿ ಸತೀಶ್ ಭಟ್‌ರ ಪರಿಶ್ರಮ ಇದೆ-ಭಾಸ್ಕರ್;
ಸಿಸ್ಕೋ ಸಂಸ್ಥೆಯ ಮೇನೇಜರ್ ಭಾಸ್ಕರ್ ಅವರು ಮಾತನಾಡಿ, ಸಿಸ್ಕೋ ಸಂಸ್ಥೆ ಕಳೆದ 20 ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದೆ. ೨೦೧೨-೧೩ರಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ತರಬೇತಿಗೆ ಪ್ರೋತ್ಸಾಹ ನೀಡಿದೆ. ಇದರಿಂದಾಗಿ ಎನ್‌ಎಂಎಂಎಸ್‌ನಲ್ಲಿ ತೇರ್ಗಡೆಗೊಳ್ಳುವ ಮಕ್ಕಳ ಸಂಖ್ಯೆ ಪ್ರತಿವರ್ಷವೂ ಹೆಚ್ಚುತ್ತಿದೆ. ಇದರಲ್ಲಿ ಸತೀಶ್ ಭಟ್ ಅವರ ಪರಿಶ್ರಮ ದೊಡ್ಡ ಮಟ್ಟದಲ್ಲಿ ಇದೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಸತೀಶ್ ಭಟ್ ಹೆಸರು ಶಾಶ್ವತವಾಗಿರಲಿ-ಚಂದ್ರಶೇಖರ ಕೆ.;
ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ಮಾತನಾಡಿ, ಸತೀಶ್ ಭಟ್ ಅವರು ಮುಖ್ಯಶಿಕ್ಷಕರಾಗಿ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇಲ್ಲಿನ ವಿದ್ಯಾಸಂಸ್ಥೆಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಹೆಸರು ಶಾಶ್ವತವಾಗಿರಲಿ ಎಂದರು.

ಅವಕಾಶವನ್ನು ಬಳಸಿಕೊಂಡಿದ್ದೇನೆ-ಸತೀಶ್ ಭಟ್;
ಪಾಠ ಮಾಡಲು ಹೆಚ್ಚು ಸಮಯ ಕೊಡುವಂತೆ ಒತ್ತಾಯಿಸಿ ಕೊರಿಯನ್ ಶಿಕ್ಷಕರು ನಡೆಸಿದ ಪ್ರತಿಭಟನೆಯ ವರದಿ ಆಂಗ್ಲಭಾಷೆ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಈ ವರದಿಯೇ ನನ್ನ ಸಾಧನೆಗೆ ಮೂಲ ಪ್ರೇರಣೆಯಾಗಿದೆ. ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹ, ಸಹಕಾರ ಸಿಕ್ಕಿದೆ. ಎಲ್ಲಾ ಸಂದರ್ಭದಲ್ಲೂ ಅವಕಾಶ ಸಿಕ್ಕಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ದೇನೆ ಎಂದು ಹೇಳಿದರು. ಬಿಳಿನೆಲೆ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದೆ. ಅಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ಸಿಕ್ಕಿತ್ತು. ಇದು ವಿದ್ಯಾರ್ಥಿಗಳೊಂದಿಗೆ ಬಾಂಧವ್ಯ ಬೆಳೆಯಲು ಸಹಕಾರಿಯಾಯಿತು. ಡ್ಯೂಟಿಯೊಂದಿಗೆ ಸರ್ವೀಸ್ ಸಹ ನೀಡಿದ್ದೇನೆ. ದಿನದಲ್ಲಿ ನಾಲ್ಕಾರು ಗಂಟೆ ಪುಸ್ತಕ ಓದುವ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ಆದ್ದರಿಂದಲೇ ನಾನು ಸೇವೆ ಸಲ್ಲಿಸಿದ ಬಿಳಿನೆಲೆ, ರಾಮಕುಂಜ ಶಾಲೆಗೆ ಗ್ರಂಥಾಲಯ ಕೊಡುಗೆಯಾಗಿ ನೀಡಿದ್ದೇನೆ ಎಂದರು.

ಸತೀಶ್ ಭಟ್ ಅವರ ಪತ್ನಿ ಸುಮನ ಭಟ್, ಪುತ್ರಿ ಸಹನಾ, ಅಳಿಯ ರೋಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಭಟ್ ಅವರ ವಿದ್ಯಾರ್ಥಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್‌ಕುಮಾರ್ ಕೆ.ಕೆ.ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ಶಿಕ್ಷಕ ವೆಂಕಟೇಶ್ ದಾಮ್ಲೆ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸತೀಶ್ ಭಟ್ ಅವರ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸನ್ಮಾನ:
ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಸೈನಿಕ, ಪ್ರಸ್ತುತ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಭಟ್ ಅವರ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಜಯಕುಮಾರ್ ಸಣ್ಣಾರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಜಿ.ಎಸ್., ಜೇಸಿ ರಾಷ್ಟ್ರೀಯ ತರಬೇತುದಾರ ಕೆ.ರಾಜೇಂದ್ರ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಭಿನಂದನಾ ಹೊತ್ತಗೆ ಬಿಡುಗಡೆ;
ಗುರುತ್ವಾಕರ್ಷಣಾ ಅಭಿನಂದನಾ ಹೊತ್ತಗೆಯನ್ನು ಜೇಸಿ ರಾಷ್ಟ್ರೀಯ ತರಬೇತುದಾರ ಕೆ.ರಾಜೇಂದ್ರ ಭಟ್ ಅವರು ಬಿಡುಗಡೆಗೊಳಿಸಿದರು. ಸಿಸ್ಕೋ ಕಂಪನಿ ವತಿಯಿಂದ ನೀಡಿರುವ ನೋಟ್‌ಬುಕ್‌ಗಳನ್ನು ಸಮಾರಂಭದಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸತೀಶ್ ಮರ್ಕಂಜ ಅವರ ನೇತೃತ್ವದಲ್ಲಿ ಗಾಯನ ನಡೆಯಿತು.

LEAVE A REPLY

Please enter your comment!
Please enter your name here