ಬನ್ನಂಜೆ ಗೋವಿಂದಾಚಾರ್ಯರ ಜನ್ಮದಿನದ ತೊಂಬತ್ತನೇ ವಿಶ್ವ ನಮನ ಸಮಾರೋಪ

0

ಬನ್ನಂಜೆ ಗೋವಿಂದಾಚಾರ್ಯ ವಿಶ್ವನಮನ- ಬನ್ನಂಜೆ ಅವಲೋಕನ : ಬನ್ನಂಜೆ ಅಧ್ಯಯನ ಪೀಠ ಸ್ಥಾಪನೆಗೆ ಒತ್ತಾಯ

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಶ್ರಯದಲ್ಲಿ, ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮದಿನದ ಪ್ರಯುಕ್ತ ವಿವಿಧೆಡೆ ಹಮ್ಮಿಕೊಂಡಿದ್ದ ʼವಿಶ್ವನಮನʼ ಸಮಾರೋಪದ ಎರಡನೇ ದಿನ ʼಬನ್ನಂಜೆ ಅವಲೋಕನʼ ಗೋಷ್ಠಿಯಲ್ಲಿ ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿದರು. ಸುಪ್ರೀತ ಬೆಂಗಳೂರು, ವಿದ್ವಾನ್‌ ಉಮಾಕಾಂತ ಭಟ್‌, ವಿಜಯಸಿಂಹ ಆಚಾರ್ಯ, ರೋಹಿತ್‌ ಚಕ್ರತೀರ್ಥ, ಬಿ.ಎನ್‌. ಶಶಿಕಿರಣ್‌, ಅರ್ಜುನ್‌ ಭಾರದ್ವಾಜ್‌ ಇದ್ದರು.

ಬೆಂಗಳೂರು: ʼಬನ್ನಂಜೆಯವರ ಕೃತಿಗಳ ಕುರಿತು ಅಧ್ಯಯನ ಪೀಠ ಸ್ಥಾಪನೆಯಾಗಬೇಕುʼ ಎಂದು ವಿದ್ವಾನ್‌ ಉಮಾಕಾಂತ ಭಟ್‌ ಒತ್ತಾಯಿಸಿದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಶ್ರಯದಲ್ಲಿ, ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮದಿನದ ಪ್ರಯುಕ್ತ ವಿವಿಧೆಡೆ ಹಮ್ಮಿಕೊಂಡಿದ್ದ ವಿಶ್ವನಮನ ಸಮಾರೋಪದ ʼಬನ್ನಂಜೆ ಅವಲೋಕನʼ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಭಾನುವಾರ ಅವರು ಈ ಒತ್ತಾಯ ಮಂಡಿಸಿದರು.

ʼಪುರಾಣಗಳ ಬಗ್ಗೆ ದೇಶದಲ್ಲಿ ಅಧ್ಯಯನ ನಡೆದಿರುವುದು ಸಾಲದು. ಯಾಕೆಂದರೆ ಗ್ರಂಥಗಳ ವಿಶಾಲತೆ ಅಷ್ಟು ಇದೆ. ಬನ್ನಂಜೆಯವರ ಕೆಲವು ಉಪನ್ಯಾಸಗಳನ್ನು ಸರಿಯಾಗಿ ಕೇಳಿದರೆ ಒಬ್ಬ ವಿದ್ವಾಂಸ ರೂಪುಗೊಳ್ಳಬಹುದು. ಅವರ ಉಪನ್ಯಾಸಗಳು ಅಕ್ಷರ ರೂಪ ಪಡೆದುಕೊಳ್ಳಬೇಕುʼ ಎಂದ ಅವರು, ʼಮಧ್ವಾಚಾರ್ಯರ ಮೂಲಕ ಪುರಾಣ ವಿಶ್ಲೇಷಣೆಗಳು ನಡೆದ ಬಳಿಕ ಬನ್ನಂಜೆಯವರು ಪುರಾಣಗಳನ್ನು ಆಧುನಿಕ ಕಾಲಘಟ್ಟಕ್ಕೆ ಒಪ್ಪಿತವಾಗುವ ರೀತಿಯಲ್ಲಿ ವಿಶ್ಲೇಷಿಸಿದರುʼ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಉಡುಪಿ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ, ʼಬನ್ನಂಜೆಯವರನ್ನು ಎಲ್ಲ ಮತದವರು ಒಪ್ಪಿಕೊಳ್ಳುತ್ತಾರೆ. ಆದರೆ ಬನ್ನಂಜೆಯವರು ಎಂದಿಗೂ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಟ್ಟು ಮಾತನಾಡಿದವರಲ್ಲ. ಹಾಗೆ ನೋಡಿದರೆ ಪುರಂದರದಾಸರ ಮಾದರಿಯಲ್ಲೇ ಅವರು ಬಾಳು ನಡೆಸಿದವರು. ಆಚಾರ್ಯ ಮಧ್ವರ ತತ್ವ, ಸಿದ್ಧಾಂತಗಳನ್ನು ಬರೆಯಲೆಂದೇ ಕೈಗಳನ್ನು ಹೊಂದಿದ್ದೇನೆ ಎಂಬ ಭಾವ ಮತ್ತು ಬದ್ಧತೆ ಅವರದ್ದಾಗಿತ್ತು. ಹೀಗಾಗಿ ಬನ್ನಂಜೆ ಎಂಬ ಊರು ಗೋವಿಂದಾಚಾರ್ಯ ಅವರ ಹೆಸರಿನೊಂದಿಗೆ ವಿಶ್ವದಾದ್ಯಂತ ಗುರುತಿಸಲ್ಪಟ್ಟಿದೆʼ ಎಂದರು.

ಬನ್ನಂಜೆಯವರ ಸಂಸ್ಕೃತ ಭಾಷಾ ಶೈಲಿಯ ಕುರಿತು ಮಾತನಾಡಿದ ಬಿ.ಎನ್‌. ಶಶಿಕಿರಣ್‌, ʼ ಬನ್ನಂಜೆಯವರ ಗದ್ಯ, ಕಾವ್ಯ, ನಾಟಕಗಳನ್ನು ಗಮನಿಸಿದರೆ ಬನ್ನಂಜೆಯವರು ಸ್ವತಂತ್ರವಾದ ಶೈಲಿಯನ್ನು ಅನುಸರಿಸಿದರು. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಬರೆಯುತ್ತಿದ್ದರು. ಆ ಸಾಲುಗಳಲ್ಲಿ ಪ್ರಸನ್ನತೆ ಇರುತ್ತಿತ್ತು. ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಬರೆದ ಪೀಠಿಕೆಯನ್ನು ಗಮನಿಸಿದರೆ, ಗ್ರಂಥಸ್ಥವಾಗಿರುವ ಕೃತಿಯನ್ನು ಸಾಮಾನ್ಯರಿಗೂ ತಲುಪುವ ರೀತಿಯಲ್ಲಿ ನಿರೂಪಿಸಿರುವುದನ್ನು ಕಾಣಬಹುದುʼ ಎಂದು ಹೇಳಿದರು.

ಸಂಸ್ಕೃತಕ್ಕೆ ಕನ್ನಡದ ಕನ್ನಡಿ
ಕನ್ನಡ ಅನುವಾದದ ಕುರಿತು ಮಾತನಾಡಿದ ವಿದ್ವಾನ್‌ ಅರ್ಜುನ್‌ ಭಾರದ್ವಾಜ್‌, ʼಬನ್ನಂಜೆಯವರ ಕೊಡುಗೆಯಿಂದಾಗಿ ಕನ್ನಡವೇ ಹೆಚ್ಚು ಶ್ರೀಮಂತವಾಗಿದೆ. ಜಾಗತಿಕವಾಗಿ ಕನ್ನಡ- ಸಂಸ್ಕೃತ ಎರಡಕ್ಕೂ ಗೌರವ ಸಂದಿದೆ. ಅವರು ಮಾಡಿದ ರೂಪಕ ಅನುವಾದಗಳನ್ನು ಗಮನಿಸಿದರೆ ಮೂಲಕವಿಯ ಹೃದಯವನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಕನ್ನಡದ ಕನ್ನಡಿಯ ಮೂಲಕ ಸಂಸ್ಕೃತದ ಕಡೆಗೆ ಸಾಗುವ ದಾರಿಯನ್ನು ತೋರಿಸಿದ್ದಾರೆʼ ಎಂದರು.

ಲೇಖಕ ರೋಹಿತ್‌ ಚಕ್ರತೀರ್ಥ ಮಾತನಾಡಿ, ʼಬನ್ನಂಜೆಯವರಿಗೆ ಎಷ್ಟೇ ವಿಸ್ತಾರವಾದ ಸಂಗತಿಯನ್ನು ಸಂಕ್ಷಿಪ್ತವಾಗಿ ಹೇಳುವ ಕಲೆಗಾರಿಕೆ ಇತ್ತು. ಬರಹಗಳಲ್ಲಿ ಪಾಂಡಿತ್ಯ ಪ್ರದರ್ಶನ ಇರಲಿಲ್ಲ. ಬದಲಾಗಿ ವಿಷಯಕ್ಕೆ ಪೂರಕವಾದ ಅಂಶಗಳು ಇರುತ್ತಿದ್ದವು ಅವರಿಗೆ ಯಾವುದೇ ತತ್ವ ಪಂಥಗಳು ವ್ಯರ್ಜ್ಯ ಆಗಿರಲಿಲ್ಲʼ ಎಂದರು,ಬನ್ನಂಜೆಯವರ ಕೃತಿಗಳ ಕುರಿತು ಮಾತನಾಡಿದ ವಿಜಯಸಿಂಹ ಆಚಾರ್ಯ, ʼ ಬನ್ನಂಜೆಯವರ ಕೃತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಬೇಕು. ಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಬನ್ನಂಜೆಯವರ ಅಂಥ ಕೃತಿಗಳನ್ನು ಆಸ್ವಾದಿಸಬೇಕುʼ ಎಂದರು. ಆಚಾರ್ಯರು ತೋರಿದ ಭಗವದ್ಗೀತೆ ಕುರಿತು ವಿದ್ವಾನ್‌ ಸುಪ್ರೀತ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌, ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.
ವಿದುಷಿ ರೂಪಶ್ರೀ ಮಧುಸೂದನ್‌, ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.

ಬನ್ನಂಜೆ ವಿಶ್ವನಮನದಲ್ಲಿ ಇಂದು
ಆಗಸ್ಟ್‌ 3, 2026, ಗಾಯನ ಸಮಾಜ ಬೆಂಗಳೂರು ಬೆಳಗ್ಗೆ 10 ರಿಂದ ಅನುಭವಿಗಳು ಕಂಡ ಬನ್ನಂಜೆ: ರಾಮ ವಿಟ್ಠಲ ಆಚಾರ್ಯ, ಬೆಂಗಳೂರು, ಶ್ರೀನಿವಾಸ ಸಿರನೂರಕರ್‌, ಪತ್ರಕರ್ತರು ಕಲಬುರಗಿ, ಸದಾನಂದ ಶರ್ಮಾ ಸಾಗರ, ಎನ್‌.ಆರ್‌. ದೇಶಪಾಂಡೆ ಮುದ್ಗಲ್‌, ರಾಯಚೂರು, ಪೂರ್ಣಪ್ರಸಾದ್‌ ಅಮೆರಿಕ, ಹುಸೇನಸಾಬ ಕನಕಗಿರಿ, ಬೆಂಗಳೂರು, ಡಾ.ಗಣೇಶ್‌ ಅಮೀನ್‌ ಸಂಕಮಾರು, ಡಾ.ಮಂಜುನಾಥ್‌ ಗುರುರಾಜ್‌, ಸಹಪ್ರಾಧ್ಯಾಪಕರು ಎಸ್‌. ವ್ಯಾಸ ಯೋಗ ವಿಶ್ವವಿದ್ಯಾಲಯ ಬೆಂಗಳೂರು, ಸೌಮ್ಯಾ ಗೋಟಗಾರ್‌ ಸಾಗರ, ಶ್ರೀವತ್ಸ ಬಲ್ಲಾಳ್‌, ಅಮೆರಿಕ, ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು ಯುವ ಬ್ರಿಗೇಡ್‌ ಬೆಂಗಳೂರು, ಮಂಜುನಾಥ ನಾಯಕ್‌ ಬೆಂಗಳೂರು.

ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗ್ಗೆ 9ಕ್ಕೆ ಬನ್ನಂಜೆ ಹಾಡುಗಳ ಯಕ್ಷಗಾನ ಪ್ರಸ್ತುತಿ – ಬನ್ನಂಜೆ ಸಂಜೀವ ಸುವರ್ಣ, ಯಕ್ಷ ಸಂಜೀವ ತಂಡ ಉಡುಪಿ ಮಧ್ಯಾಹ್ನ 12.30 : ಬನ್ನಂಜೆ ಹಾಡುಗಬ್ಬ – ಕವಿತಾ ಉಡುಪ, ಸುಮಾ ಶಾಸ್ತ್ರಿ ಮರಳುಚಿತ್ರ: ರಾಘವೇಂದ್ರ ಹೆಗಡೆ ನೆರಳು ಬೆಳಕಿನಾಟ: ಪ್ರಹ್ಲಾದ ಆಚಾರ್ಯ ಶೀಘ್ರ ಚಿತ್ರ ರಚನೆ: ವಿಲಾಸ ನಾಯಕ್‌ ಸಮಾರೋಪ: ಸಂಜೆ 5.45ರಿಂದ

LEAVE A REPLY

Please enter your comment!
Please enter your name here