ಭಾರೀ ಮಳೆಯ ಮುನ್ಸೂಚನೆ:ಜಿಲ್ಲೆಯಲ್ಲಿ ಆ.3ರಂದು ಶಾಲೆ,ಕಾಲೇಜುಗಳಿಗೆ ರಜೆ

0

ಪುತ್ತೂರು:ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೊರಡಿಸಿರುವ ಹವಾಮಾನ ಮುನ್ಸೂಚನೆಯಂತೆ ದಕ.ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸೂಚನೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ,ಪ್ರಾಥಮಿಕ-ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆ.3ರಂದು ರಜೆ ಘೋಷಿಸಲಾಗಿದೆ.

ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು,ಬೆಳ್ತಂಗಡಿ,ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳು,ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ,ಪ್ರೌಢಶಾಲೆಗಳು ಹಾಗೂ ವಸತಿಯುತ ಸೇರಿ ಎಲ್ಲಾ ಪದವಿ ಪೂರ್ವ ಕಾಲೇಜುಗಳು,ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.ಮಂಗಳೂರು ಉಪವಿಭಾಗ ವ್ಯಾಪ್ತಿಯ ಮಂಗಳೂರು,ಬಂಟ್ವಾಳ ಮೂಡಬಿದ್ರೆ,ಮುಲ್ಕಿ, ಉಳ್ಳಾಲ ತಾಲೂಕುಗಳಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳು ಮತ್ತು ಸರ್ಕಾರಿ,ಅನುದಾನಿತ,ಖಾಸಗಿ ಪ್ರಾಥಮಿಕ-ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಆದೇಶಿಸಿದ್ದಾರೆ.

ರಜೆ ಘೋಷಣೆ ಮೊದಲೇ ಸುಳ್ಳು ಸುದ್ದಿ ಪ್ರಸಾರ:
ಭಾರೀ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಆ.೩ರಂದು ದ.ಕ.ಜಿಲ್ಲೆಯಲ್ಲಿ ಅಂಗನವಾಡಿ,ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಅವರು ಆದೇಶಿಸಿಸುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ, ಜಿಲ್ಲಾಧಿಕಾರಿಯವರ ನಕಲಿ ಆದೇಶ ಪ್ರತಿಯೊಂದಿಗೆ ವ್ಯಾಪಕವಾಗಿ ಸುಳ್ಳು ಸುದ್ದಿ ಪ್ರಸಾರವಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಅವರು, ರಜೆಯ ಬಗ್ಗೆ ನಕಲಿ ಆದೇಶಗಳು ಹಂಚಿಕೆಯಾಗುತ್ತಿದೆ.ವಿಪತ್ತು ಅಥವಾ ರಜೆಯ ಬಗ್ಗೆ ಗೊಂದಲ ಮೂಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುದು ಎಂದು ಎಚ್ಚರಿಕೆ ನೀಡಿದ್ದರು.ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ ೫೪ರ ಪ್ರಕಾರ ವಿಪತ್ತು ಅಥವಾ ಅದರ ತೀವ್ರತೆ ಅಥವಾ ವ್ಯಾಪ್ತಿಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿ ಅಥವಾ ಹರಡಿ ಭಯಭೀತಿಯನ್ನು ಉಂಟುಮಾಡುವ ವ್ಯಕ್ತಿಯು ತಪ್ಪಿತಸ್ಥರೆಂದು ಸಾಬೀತಾದಲ್ಲಿ, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಅಥವಾ ದಂಡದ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅವರು ಎಚ್ಚರಿಸಿದ್ದರು.ಆದರೆ ಇದೀಗ, ಅಧಿಕೃತವಾಗಿ ರಜೆ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here