







ರಾಮಕುಂಜ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಮಹಿಳಾ ವೇದಿಕೆ ಹಳೆನೇರೆಂಕಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಹಳೆನೇರೆಂಕಿ ಇವರ ವತಿಯಿಂದ ’ಆಟಿದ ಸಂಭ್ರಮ’ ಆ.2ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆನೇರೆಂಕಿ ಶಾಖಾ ವಠಾರದಲ್ಲಿ ನಡೆಯಿತು.


ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಿಆರ್‌ಪಿ ದೇವಿಕಾ ಜಯಾನಂದ ಅವರು ಗತಕಾಲದಲ್ಲಿ ಆಟಿ ತಿಂಗಳ ಕಷ್ಟಕಾರ್ಪಣ್ಯಗಳ ಬಗ್ಗೆ, ಆಹಾರ ಪದ್ಧತಿಗಳ ಬಗ್ಗೆ ಹಾಗೂ ಆಯುರ್ವೇದ ಔಷಧಿಗಳ ಮಹತ್ವವನ್ನು ವಿವರಿಸಿದರು. ಪುತ್ತೂರು ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ, ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಬರಂಬೆಟ್ಟು ಶುಭಹಾರೈಸಿದರು. ಹಳೆನೇರೆಂಕಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಅಧ್ಯಕ್ಷತೆ ವಹಿಸಿದ್ದರು.




ಹಳೆನೇರೆಂಕಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಪ್ರಫುಲ್ಲ ಪುರುಷೋತ್ತಮ್, ಲತಾ ಪದ್ಮನಾಭ ಭಂಡಾರಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆಟಿ ತಿಂಗಳಲ್ಲಿ ಮಾಡುವ ವಿಶೇಷ ತಿಂಡಿ ತಿನಿಸುಗಳನ್ನು ಮನೆಯಲ್ಲಿಯೇ ತಯಾರು ಮಾಡಿ ತಂದು ಸಹಕರಿಸಿದ ತಾಯಂದಿರನ್ನು ಗೌರವಿಸಲಾಯಿತು. ಪುತ್ತೂರು ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಮಹೇಶ್ಚಂದ್ರ ಸಾಲಿಯನ್ ನಡುಬೈಲುಗುತ್ತು, ಕಡಬ ಬಿಲ್ಲವ ಸಂಘ, ಆಲಂಕಾರು-ಪೆರಾಬೆ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೊತಿಕಾ ಯನ್.ಕೆ., ಶ್ರೇಯ ಕದ್ರ ಪ್ರಾರ್ಥಿಸಿದರು. ದಿನೇಶ್ ಮಾಸ್ಟರ್ ಬರೆಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು.










