






ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತ್ ಮೈಸೂರುರವರು ಉಪ್ಪಿನಂಗಡಿಯಲ್ಲಿರುವ ಗಾಣಿಗ ಸಮುದಾಯ ಭವನಕ್ಕೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರಕಾರ ತಂದಿರುವ ಯೋಜನೆಗಳು ಸಮರ್ಪಕವಾಗಿ ಎಲ್ಲಾ ವರ್ಗಕ್ಕೂ ತಲುಪುತ್ತಿಲ್ಲ ಎಂಬ ದೂರು ಇದೆ. ಈ ನಿಟ್ಟಿನಲ್ಲಿ ಇದೀಗ ಪ್ರತ್ಯೇಕವಾಗಿ ಗಾಣಿಗ ಸಮುದಾಯದ ಅಭಿವೃದ್ಧಿಗೆ ನಿಗಮ ರಚನೆ ಮಾಡಿರುವುದರಿಂದ ಸರಕಾರಿ ಸವಲತ್ತುಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು. ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಲ್ಲಿ ಕುಟುಂಬದ ವಾರ್ಷಿಕ ಆದಾಯದಲ್ಲಿನ ತಾರತಮ್ಯ ಹಾಗೂ ವಿದ್ಯಾರ್ಥಿ ವೇತನದ ತಾರತಮ್ಯದ ಆರೋಪದ ಬಗ್ಗೆ ಅಧ್ಯಯನ ನಡೆಸಿ ಸತ್ಯಾಂಶವಿದ್ದರೆ ಅದನ್ನು ನೀಗಿಸುವ ಬಗ್ಗೆಯೂ ಗಮನ ಹರಿಸಲಾಗುವುದು ಹಾಗೂ ಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗಕ್ಕೆ ನಿಗಮದಿಂದ ಸವಲತ್ತುಗಳನ್ನು ಒದಗಿಸಲು , ಕುಲ ಕಸುಬಾಗಿರುವ ಗಾಣದಿಂದ ಎಣ್ಣೆ ತೆಗೆಯುವ ಉದ್ಯಮವನ್ನು ನಡೆಸುವ ಬಗ್ಗೆ ಹಾಗೂ ಮಾರುಕಟ್ಟೆಯನ್ನು ಒದಗಿಸುವ ಸಂಬಂಧ ನಿಗಮದಿಂದ ಸೂಕ್ತ ಪ್ರೋತ್ಸಾಹವನ್ನು ಒದಗಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಗಾಣಿಗ ಸಮುದಾಯ ತನ್ನ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಒಳಪಂಗಡವನ್ನೂ ಒಗ್ಗೂಡಿಸಿ ಕಾರ್ಯತತ್ಪರಗೊಳ್ಳುವಂತೆ ಮಾಡಬೇಕಾಗಿದೆ ಎಂದರು.



ಈ ಸಂಧರ್ಭದಲ್ಲಿ ಗಾಣಿಗ ಸಮಾಜದ ಯುವ ಉದ್ಯಮಿ , ಚಿಂತಕ ಮೋಹಿತ್ ಶೆಟ್ಟಿ, ಪುತ್ತೂರು ತಾಲೂಕು ಸಪಲಿಗರ ಯಾನೆ ಗಾಣಿಗರ ಸಂಘದ (ರಿ) ಇದರ ಅಧ್ಯಕ್ಷ ಹರಿರಾಮಚಂದ್ರ, ಪುತ್ತೂರು ಸಪಲಿಗರ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ , ಪ್ರಮುಖರಾದ ರಾಜೇಶ್ ಕುಕ್ಕೆಶ್ರೀ, ಎಸ್.ಇ. ನಾರಾಯಣ , ಬಿ.ಕೆ. ಆನಂದ, ದಯಾನಂದ, ಭಾಸ್ಕರ್ ಹರಿನಗರ ಮತ್ತಿತರರು ಉಪಸ್ಥಿತರಿದ್ದರು.










