







- ಆ.8: ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ-ಗುರುವಂದನೆ-ಸೇವಾ ಸಂಭ್ರಮ
ನಿಶಾಕಿರಣ್ ಬಾಳೆಪುಣಿ


ಅಧ್ಯಾತ್ಮದ ಬದುಕು ಶ್ರೇಷ್ಠವಾದುದು. ಅದನ್ನು ಬೆಳೆಸಿಕೊಂಡಾಗ ಸಮಾಜದಲ್ಲಿ ದ್ವೇಷ ಭಾವ ದೂರವಾಗಿ ಪ್ರೀತಿ ಭಾವ ಹುಟ್ಟುತ್ತದೆ. ಶಾಂತಿ ನೆಮ್ಮದಿಯನ್ನು ನಮ್ಮೊಳಗೆ ಅಂತರ್ಮುಖಿಯಾಗಿ ಅನುಭವಿಸಬೇಕು. ಪರಿವರ್ತನೆ ನಮ್ಮಿಂದ ಆಗಬೇಕು. ಆಗ ಸಮಾಜ ಪರಿವರ್ತನೆಯನ್ನು ಬಯಸುತ್ತದೆ’ ಎಂಬ ಮಹಾನ್ ಸತ್ಚಿಂತನೆಯೊಂದಿಗೆ ಆತ್ಮೋನ್ನತಿ ಮತ್ತು ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಗ್ರಾಮೋತ್ಸವದ ಸಂಭ್ರಮ. ಆ.8ರಂದು ವಿವಿಧ ಕಾರ್ಯಕ್ರಮಗೊಂದಿಗೆ ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ-ಗುರುವಂದನೆ-ಸೇವಾ ಸಂಭ್ರಮ ನಡೆಯಲಿದ್ದು, ಶ್ರೀ ಕ್ಷೇತ್ರದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿವೆ.



ಲೌಕಿಕ, ಅಲೌಕಿಕ ಬದುಕಿನ ಅಪೂರ್ವ ಸಂಗಮ. ಮಾನವ ಧರ್ಮದ ತಳಹದಿಯಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿಯ ಉತ್ಸವ. ಸಾಮಾಜಿಕ ಚಿಂತನೆಯ ಮನೋಭಾವ ಬೆಳೆಸಲು ಪ್ರೇರಣೆಯಾಗುವ ಹಬ್ಬವಾಗಿ ಪರಿಣಮಿಸಿರುವ ಗ್ರಾಮೋತ್ಸವ ಒಂದು ಅನನ್ಯ ಪರಿಕಲ್ಪನೆಯಾಗಿದೆ. ಶ್ರೀಗಳ ಸಂಕಲ್ಪದಂತೆ ಅವರ ಹುಟ್ಟುಹಬ್ಬ ಜನಹಿತ ಕಾರ್ಯಕ್ರಮಗಳೊಂದಿಗೆ ಶೋಷಿತ, ದುರ್ಬಲವರ್ಗದವರಲ್ಲಿ ಜೀವನೋತ್ಸಾಹ ಮೂಡಿಸುವ ಗ್ರಾಮೋತ್ಸವವಾಗಿ ಕಳೆದ ಹಲವಾರು ವರ್ಷಗಳಿಂದ ಜರಗುತ್ತಿರುವುದು ಸಂಸ್ಥಾನದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು-ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಶ್ರೀ ಗುರುದೇವ ಬಂಧುಗಳು, ಶ್ರೀಗಳವರ ಅಭಿಮಾನಿ ಭಕ್ತರು ಒಟ್ಟು ಸೇರಿ ರಚಿಸಿದ ಜನ್ಮದಿನೋತ್ಸವ-ಗ್ರಾಮೋತ್ಸವ ಸಮಿತಿಯ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವ ವಿಶಿಷ್ಟವಾಗಿ ಸಂಪನ್ನಗೊಳ್ಳುತ್ತಿದೆ.
ಗ್ರಾಮೋತ್ಸವದ ಪೂರ್ವಭಾವಿಯಾಗಿ ತುಳುನಾಡಿನ ಸಂಸ್ಕೃತಿಗೆ ಪೂರಕವಾದ ಕ್ರೀಡಾಕೂಟಗಳು ಜರಗುತ್ತದೆ. ಗ್ರಾಮೋತ್ಸವದಂದು ಪೂರ್ವಾಹ್ನ ಶ್ರೀ ಗಣಪತಿ ಹವನ, ನಾಮಸಂಕೀರ್ತನೆ, ಪಾದಪೂಜೆ, ತುಲಾಭಾರ, ಗುರುವಂದನೆ ನಡೆಯುತ್ತದೆ. ನಂತರ ಸಭಾ ಕಾರ್ಯಕ್ರಮ ಜರುಗಿ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಮಹಾಪೂಜೆಯೊಂದಿಗೆ ಸಂಪನ್ನಗೊಳ್ಳುತ್ತದೆ.
ಶ್ರೀ ಸಂಸ್ಥಾನ ನಡೆದು ಬಂದ ಹಾದಿ:
ಅವಧೂತ ಪರಂಪರೆಯ ಪಥದಲ್ಲಿ ಸಾಗಿದ ಶ್ರೀ ಗುರುದೇವಾನಂದ ಸ್ವಾಮೀಜಿಯವರು 1989ರಲ್ಲಿ ಒಡಿಯೂರುನಲ್ಲಿ ಶ್ರೀ ದತ್ತಾಂಜನೇಯ ಸ್ವಾಮಿ ಕ್ಷೇತ್ರ ಸ್ಥಾಪಿಸಿದರು. ಸಂಕಲ್ಪ ಶಕ್ತಿ ಮತ್ತು ಕರ್ತೃತ್ವ ಶಕ್ತಿಯಿಂದ ಯೌಗಿಕ ಸಾಧನೆಯ ಮೂಲಕ ಅತ್ಯಲ್ಪ ಅವಧಿಯಲ್ಲಿ ಅನೇಕ ಪವಾಡಗಳಿಂದ ಆಧ್ಯಾತ್ಮ ಎತ್ತರಕ್ಕೆ ಬೆಳೆದ ಶ್ರೀಗಳು ಭಕ್ತಿಗಾಗಿ ಮತ್ತು ಸಮಾಜದ ಶಕ್ತಿಗಾಗಿ ಧಾರ್ಮಿಕ ಭಾವ ಪಸರಿಸುವಿಕೆಗೆ ಸಾಂಸ್ಥಿಕ ವಿಸ್ತರಣೆಯನ್ನೂ ಮಾಡಿದರು. ಜಗದ್ವ್ಯಾಪಿಯಾದ ದತ್ತ ಮಹಾಪ್ರಭು, ಶಿವಾಂಶ ಸಂಭೂತನಾದ ಅಂಜನಾಪುತ್ರ ಮಾರುತಿ ಹೀಗೆ ವಿಷ್ಣು ಮತ್ತು ಶಿವನ ಅಂಶಗಳು ಒಂದೆಡೆ ವಿಲೀನಗೊಂಡು ಆರಾಽಸಲ್ಪಡುವ ವಿಶಿಷ್ಟ ಕ್ಷೇತ್ರವೇ ದಕ್ಷಿಣ ಗಾಣಗಾಪುರ ಎಂದು ಖ್ಯಾತಿ ಪಡೆದಿರುವ ಒಡಿಯೂರು. ಕ್ಷೇತ್ರದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ ಭಕ್ತಿ ಪಂಥದ ರಾಗ ರಹಿತ ಜೀವನದ ಅವಧೂತ ಯೋಗಿನಿಯಾಗಿದ್ದಾರೆ.
ಏಕಾಂತದ ಧ್ಯಾನ, ತಪಸ್ಸಿಗಾಗಿ ನಿತ್ಯಾನಂದ ಗುಹೆ, ನಿತ್ಯ ಸುಪ್ರಭಾತ, ಭಜನೆ, ಸತ್ಸಂಗ, ಸ್ತೋತ್ರ ಪಠಣಕ್ಕೆ ಶ್ರೀ ಗುರುದೇವ ಧ್ಯಾನ ಮಂದಿರ, ನೈತಿಕ, ಯೋಗ ಶಿಕ್ಷಣ ನೀಡುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರ, ಭಕ್ತರಿಗೆ ಅನ್ನದಾನಕ್ಕಾಗಿ ಶ್ರೀ ವಜ್ರಮಾತಾ ಅನ್ನಛತ್ರ, ಗರ್ಭಗುಡಿಯ ಹೊರಗೆ ಅಷ್ಟಪಟ್ಟಿ ಆಕಾರದಲ್ಲಿ ಸುಂದರವಾದ ಸುತ್ತುಗೋಪುರ, 40 ಅಡಿ ಎತ್ತರದ ರಮಣೀಯ ರಾಜಗೋಪುರ ಪ್ರತಿಯೊಂದು ಗೋಡೆಯಲ್ಲೂ ಪೌರಾಣಿಕ ಕಥಾನಕದ ಚಿತ್ರಣಗಳು, ವೇಸರ ಶಿಲ್ಪ ಶೈಲಿಯ ಅಷ್ಟಪಟ್ಟಿಯಾಕಾರದ 36.5 ಅಡಿ ಎತ್ತರದ ಶಿಲಾಮಯ ಗರ್ಭಗುಡಿ, ಸಂಸ್ಥಾನದ ಪಶ್ಚಿಮ ಭಾಗದಲ್ಲಿ ನಾಗ ಸಾನ್ನಿಧ್ಯ, ತುಸು ಪಕ್ಕದಲ್ಲಿ ವೃತ್ತಾಕಾರದ ಎರಡು ಅಂತಸ್ತಿನ ದತ್ತಪೀಠ. ಇಲ್ಲಿ ವಾರದಲ್ಲಿ ಮೂರು ದಿನ ಶ್ರೀಗಳು ಭಕ್ತರ ಸಮಸ್ಯೆ ಪರಿಹಾರಕ್ಕಾಗಿ ದಾರಿ ತೋರಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಕ್ಷೇತ್ರದ ಪಕ್ಕ ನೂತನವಾಗಿ ಉದ್ಘಾಟನೆಗೊಂಡ ಸುಸಜ್ಜಿತ ರಾಜಾಂಗಣ, ಸಂಸ್ಥಾನದಿಂದ 3 ಕಿ.ಮೀ. ದೂರದ ಕನ್ಯಾನದಲ್ಲಿ ಶ್ರೀ ಗುರುದೇವ ಕಲ್ಯಾಣ ಮಂಟಪ, ಇದರ ಸಮೀಪದಲ್ಲೇ ಸದ್ಗುರು ಶ್ರೀ ನಿತ್ಯಾನಂದ ಮಂದಿರ, ಯಾತ್ರಾರ್ಥಿಗಳ ತಂಗುವಿಕೆಗೆ ಶ್ರೀ ಗುರುದೇವ ಧರ್ಮಶಾಲೆ, ಕಲಾ ಕ್ಷೇತ್ರದ ಪೋಷಣೆಗಾಗಿ ಜೈ ಗುರುದೇವ ಕಲಾಕೇಂದ್ರ, ಶೈಕ್ಷಣಿಕ ಮತ್ತು ಸಂಸ್ಕಾರ ಕೇಂದ್ರಗಳಾಗಿರುವ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಅಽನದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳು, ಶ್ರೀ ಗುರುದೇವ ಗುರುಕುಲ, ಶ್ರೀಗಳ ಗೋ ಪ್ರೀತಿಯ ಪ್ರತೀಕವಾಗಿ ಸುಸಜ್ಜಿತ ವಿಶಾಲ ಗೋಶಾಲೆ, ಸಂಸ್ಕಾರ-ಸಹಕಾರ, ಸಂಘಟನೆ – ಸಮೃದ್ಧಿ ಸೂತ್ರದಲ್ಲಿ ಆರಂಭವಾದ ಗ್ರಾಮ ವಿಕಾಸ ಯೋಜನೆ ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಿಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಗ್ರಾಮ ವಿಕಾಸ ಯೋಜನೆ ಸುಮಾರು 60000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿ ಹಲವರ ಬಾಳಿಗೆ ಬೆಳಕಾಗಿದೆ. ಸಂಸ್ಥಾನದ ಸಹಸಂಸ್ಥೆಗಳ ಆರ್ಥಿಕ ನಿರ್ವಹಣೆಗಾಗಿ ರಚನೆಗೊಂಡು ಅತ್ಯಲ್ಪ ಅವಽಯಲ್ಲಿ ಪ್ರಗತಿ ಪಥದಲ್ಲಿ ಸಾಗಿ ಕರ್ನಾಟಕದಲ್ಲಿಯೇ ನಂ.1 ಸ್ಥಾನ ಪಡೆದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ ಹೀಗೆ ಹತ್ತಾರು ಸಾಂಸ್ಥಿಕ ಬೆಳವಣಿಗೆಗಳೊಂದಿಗೆ ಶ್ರೀ ಸಂಸ್ಥಾನ ಜಗತ್ತಿನಾದ್ಯಂತ ಶ್ರೇಷ್ಠವಾಗಿ ಗುರುತಿಸಲ್ಪಟ್ಟಿದೆ.
ಪಂಚ ಪರ್ವ ವಿಶೇಷತೆಗಳು..:
ಸಂಸ್ಥಾನದಲ್ಲಿ ಪ್ರತೀ ವರ್ಷ ಪ್ರತಿಷ್ಠಾ ವಧಂತಿ, ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ ನಡೆಯುತ್ತದೆ. ಶ್ರೀರಾಮ ನವಮಿಯಿಂದ ಆರಂಭಗೊಂಡು ಹನುಮಜಯಂತಿಗೆ ಸಮಾಪನಗೊಳ್ಳುವ ಹನುಮಜಯಂತಿ, ನಾಗರಪಂಚಮಿಗೆ ವಿಶೇಷ ಸಾರ್ವಜನಿಕ ಆಶ್ಲೇಷ ಬಲಿ ಪೂಜೆ, ನವರಾತ್ರಿಯ ಪರ್ವಕಾಲದಲ್ಲಿ ಲಲಿತಾ ಪಂಚಮಿ, 1 ವಾರಗಳ ದತ್ತ ಮಹಾಯಾಗದೊಂದಿಗೆ ದತ್ತಜಯಂತಿ, ಶ್ರೀಗುರುಗಳ ಜನ್ಮದಿನ – ಗ್ರಾಮೋತ್ಸವ ಬಹಳ ವಿಶೇಷವಾಗಿ ನಡೆಯುತ್ತವೆ.
ತುಳು ಭಾಷೆ ಉಳಿಸಲು ಶ್ರೀಗಳ ಪಣ:
ಸಂಸ್ಕೃತಿ, ಸಂಸ್ಕಾರ ಮತ್ತು ಸಾಮರಸ್ಯಕ್ಕೆ ಪೂರಕವಾದ ತುಳುನಾಡಿನ ಭಾಷೆಯಾದ ತುಳುಭಾಷೆಯನ್ನು ಯಥಾವತ್ತಾಗಿ ಉಳಿಸಬೇಕೆಂಬ ಶ್ರೀಗಳ ಮನೋಹಂಬಲ ಸಂಸ್ಥಾನದಲ್ಲಿ ಅನೇಕಾನೇಕ ತುಳು ಭಾಷೆಗೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಿದೆ. 2001ರಲ್ಲಿ ತುಳುನಾಡಿನ ಪ್ರಪ್ರಥಮ ತುಳು ಸಾಹಿತ್ಯ ಸಮ್ಮೇಳನ' ಒಡಿಯೂರಿನಲ್ಲಿ ನಡೆದಿರುವುದು ಚರಿತ್ರೆಯಾಗಿದೆ. ಒಡಿಯೂರು ರಥೋತ್ಸವದ ಸಂದರ್ಭತುಳುನಾಡ್ದ ಜಾತ್ರೆ’ ಕಾರ್ಯಕ್ರಮದ ಮೂಲಕ `ತುಳುವರ ತುಲಿಪು, ತುಳು ಸಮ್ಮೇಳನ’, ಕೆಸರ್ಡ್ ಒಂಜಿ ದಿನ, ಆಟಿದ ಆಯನೋ ಹಲವಾರು ವರುಷಗಳಿಂದ ನಡೆಸಲಾಗುತ್ತಿದೆ. ತುಳು ಲಿಪಿಯನ್ನು ಕಲಿತ ಶ್ರೀಗಳು 186ಕ್ಕಿಂತಲೂ ಹೆಚ್ಚು ಶ್ಲೋಕಗಳನ್ನು ಹೊಂದಿರುವ ಗುರುಗೀತೆಯನ್ನು ಬರೆದುದಲ್ಲದೆ ಜೀವನ್ಮುಕ್ತ ಗೀತೆ, ಅವಧೂತ ಉಪನಿಷತ್, ಈಶಾವಾಸ್ಯ ಉಪನಿಷತ್, ಹನುಮಾನ್ ಚಾಲೀಸ್, ಸುಂದರ ಕಾಂಡ ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ. ಏಳುನೂರು ಶ್ಲೋಕಗಳಿಂದ ತುಂಬಿದ 18 ಅಧ್ಯಾಯದ ಭಗವದ್ಗೀತೆಯನ್ನು ತುಳುಲಿಪಿಯ ಕೈ ಬರಹದಲ್ಲಿ ಬರೆದಿದ್ದಾರೆ. ಶ್ರೀ ಸಂಸ್ಥಾನ ಒಡಿಯೂರು ಅಧ್ಯಯನ ಕೇಂದ್ರವನ್ನು ಈಗಾಗಲೇ ಮಂಗಳೂರಿನ ವಿಶ್ವವಿದ್ಯಾಲಯ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ಆರಂಭಿಸುವುದು ತುಳು ಕಲಿಕಾಸಕ್ತರಿಗೆ ಮತ್ತಷ್ಟು ಪೂರಕವಾಗಿದೆ.
ಗ್ರಾಮ ಸ್ವಚ್ಛತೆಯ ಪರಿಕಲ್ಪನೆ..:
ಗ್ರಾಮ ಸ್ವಚ್ಛತೆಯ ಪರಿಕಲ್ಪನೆಗೆ ಮೂರ್ತರೂಪ ನೀಡಿದವರು ಒಡಿಯೂರು ಶ್ರೀಗಳು, 2001ರಿಂದ ಸ್ವಚ್ಛತಾ ಅಭಿಯಾನ ನಿರಂತರವಾಗಿ ಊರು-ಕೇರಿಗಳ ಸಹಿತ ಶ್ರದ್ಧಾಕೇಂದ್ರಗಳ ಪರಿಸರ ಸ್ವಚ್ಛಗೊಳಿಸುವುದರೊಂದಿಗೆ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು, ಜೊತೆಗೆ ದೇಶಾಭಿಮಾನ ಬೆಳೆಸುವ ಕಾರ್ಯ ಪ್ರಾಮಾಣಿಕವಾಗಿ ಜರಗುತ್ತಿದೆ.
ಸೇವಾ ಸಂಭ್ರಮ
ಮಠ ಮಂದಿರಗಳು ಸಮಾಜದ ಅಭ್ಯುದಯಕ್ಕಾಗಿ ಇರುತ್ತವೆ. ಹಾಗಾಗಿ ಶ್ರೀ ಸಂಸ್ಥಾನದಿಂದ `ನವನಿಕೇತನ’ ಎಂಬ ಪರಿಕಲ್ಪನೆಯೊಂದಿಗೆ ಗೃಹ ನಿರ್ಮಾಣ, ಶಿಕ್ಷಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸೇವೆ, ಗೋಸೇವೆ ಇತ್ಯಾದಿ ಸೇವಾ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಲಾಗಿದೆ. ಸೇವಾ ಸಂಭ್ರಮ ಅಂದರೆ ವೈಭವ ಅಲ್ಲ. ಜನರಿಗೆ ಆತ್ಮರಂಜನೆ ಯೂ ಸಿಗಬೇಕು. ಕಲೆ ಸಾಹಿತ್ಯ, ಕ್ರೀಡೆ, ಮನೋರಂಜನೆಯೂ ದೊರಕಬೇಕೆಂಬುದು ಒಟ್ಟು ಕಾರ್ಯಕ್ರಮದ ಸಾರಾಂಶವಾಗಿದೆ.
ಅಧ್ಯಾತ್ಮದೊಂದಿಗೆ ಸಮಾಜದ ಹಿತ
ಹನುಮಂತ ಅಂದರೆ ಕ್ರಿಯಾಶೀಲ, ಜ್ಞಾನಪೂರ್ಣ, ಆತ್ಮವಿಶ್ವಾಸ, ಸದಾ ಕಾರ್ಯೋನ್ಮುಖಿಯಾಗಿರುವುದು. ಈ ಚಿಂತನೆಯೊಂದಿಗೆ ಅಧ್ಯಾತ್ಮದತ್ತ ಸೆಳೆತಗೊಂಡ ಶ್ರೀಗಳು ಅಧ್ಯಾತ್ಮದ ಜೊತೆ ಜೊತೆಗೆ ಸಂತನ ಬದುಕು ಸಂತನಿಗಲ್ಲ, ಅದು ಸಮಾಜದ ಹಿತಕೆ’ ಎಂಬ ಕವಿ ವಾಣಿಯನ್ನು ಅರ್ಥಪೂರ್ಣ ವಾಗಿಸಿದ್ದಾರೆ.
ಭಾರತೀಯ ಪರಂಪರೆಯನ್ನು ಬಲಗೊಳಿಸುವ ಕಾರ್ಯಕ್ರಮ ಇದಾಗಿದೆ
ಭಾರತೀಯ ಪರಂಪರೆಯನ್ನು ಬಲಗೊಳಿಸುವ ಕಾರ್ಯಕ್ರಮ ಇದಾಗಿದೆ. ಗ್ರಾಮ -ಗ್ರಾಮಗಳು ಅಭಿವೃದ್ಧಿಗೊಂಡಾಗ ದೇಶ ವಿಕಾಸಕ್ಕೆ ವೇಗ ಸಿಗಬಹುದು ಎನ್ನುವ ಉದ್ದೇಶದೊಂದಿಗೆ ಗ್ರಾಮೋತ್ಸವ ಕಾರ್ಯಕ್ರಮದ ಆಯೋಜನೆಯಾಗಿದೆ. ಭಾರತೀಯ ಪರಂಪರೆಯಲ್ಲಿ ಹಲವಾರು ವಿಚಾರಗಳು ತುಂಬಿಕೊಂಡಿರುತ್ತದೆ. ಭಾರತೀಯತೆಯನ್ನು ಉಳಿಸುವಲ್ಲಿ ನಾವು ಬಹಳಷ್ಟು ಪರಿಶ್ರಮ ಪಡಬೇಕಿದೆ. ಅದು ಎಲ್ಲರ ಕರ್ತವ್ಯವೂ ಹೌದು. ಭಕ್ತಾದಿಗಳು ಸೇರಿಕೊಂಡು ಒಂದಷ್ಟು ರೀತಿಯಲ್ಲಿ ಸಂಸ್ಥಾನದ ಕಾರ್ಯಕ್ರಮಗಳನ್ನು ಅರ್ಥವತ್ತಾಗಿ ಮಾಡುತ್ತಾ ಬರುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಸ್ವಚ್ಚತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಗ್ರಾಮೋತ್ಸವವು ದೇಶದ ವಿಕಾಸಕ್ಕೆ ನಾಂದಿಯಾಗಬೇಕೆನ್ನುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ಆಯೋಜನೆಗೆ ಸೂಚನೆ ನೀಡಿದ್ದೇವೆ. ಈ ಒಂದು ಕಾರ್ಯಕ್ರಮ ಸಮಾಜಕ್ಕೊಂದು ನಿದರ್ಶನವಾಗಿರಬೇಕೆಂಬ ಆಶಯ ನಮ್ಮದು.
ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು

ವಿಶಿಷ್ಟ ಪರಿಕಲ್ಪನೆಯ ಗ್ರಾಮೋತ್ಸವ
ಗ್ರಾಮ ಅನ್ನುವುದಕ್ಕೆ ವಿಶಾಲ ಅರ್ಥವಿದೆ. ಎಲ್ಲಾ ಗ್ರಾಮ ಗ್ರಾಮಗಳಲ್ಲಿ ವಿಶಾಲ ಮನೋಭಾವದಿಂದ ವಿಸ್ತಾರ ಚಿಂತನೆಯೊಂದಿಗೆ ಉತ್ಸವ ಆಗಿ ಬೆಳಗಿ ಬರಬೇಕು. ಗ್ರಾಮಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯಬೇಕು. ಜನರು ಸ್ವಾವಲಂಬಿಗಳಾಗಬೇಕೆನ್ನುವ ಸದುದ್ದೇಶದೊಂದಿಗೆ ಶ್ರೀಗಳ ಜನ್ಮದಿನವನ್ನು ಗ್ರಾಮೋತ್ಸವ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿ ಸೂತ್ರದ ಮೂಲಕ ಜನರಿಗೆ ಸಮಗ್ರ ಜೀವನ ಕಲೆಯೊಂದಿಗೆ ಆರೋಗ್ಯಪೂರ್ಣ ಮತ್ತು ಕೌಶಲ್ಯಪೂರ್ಣ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.










