ಆಳ್ವಾಸ್ ಉದ್ಯೋಗ ಮೇಳಕ್ಕೆ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ 300 ಉದ್ಯೋಗಾರ್ಥಿಗಳು

0

ಯುವಕರು ಉದ್ಯೋಗವಂತರಾದರೆ ದೇಶದ ಅಭಿವೃದ್ದಿ ಸಾಧ್ಯ; ಸುದೇಶ್ ಶೆಟ್ಟಿ


ಪುತ್ತೂರು: ವಿದ್ಯಾವಂತ ಯುವಕರು ಎಂದೂ ನಿರುದ್ಯೋಗಿಗಳಾಗಿರಬಾರದು, ಯಾವುದಾದರೊಂದು ಉದ್ಯೋಗದಲ್ಲಿ ಅಥವಾ ಸ್ವ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಯುವ ಶಕ್ತಿ ದೇಶದ ಸಂಪತ್ತಾಗುತ್ತದೆ ಹಾಗಿದ್ದಲ್ಲಿ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯ ಎಂದು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.


ಅವರು ಮೂಡಬಿದ್ರೆ ಆಳ್ವಾಸ್‌ನಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳಕ್ಕೆ ಪುತ್ತೂರು ಹಾಗೂ ಆಸುಪಾಸಿನ ಸುಮಾರು 300 ಉದ್ಯೋಗಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಉದ್ಯೋಗಾರ್ಥಿಗಳು ಶಾಸಕರ ಭವನದ ಸಭಾಂಗಣದಲ್ಲಿ ಒಟ್ಟು ಸೇರಿದ್ದು ಅಲ್ಲಿಂದ ವಿವಿಧ ಬಸ್ಸುಗಳಲ್ಲಿ ಅವರನ್ನು ಕಳುಹಿಸಿಕೊಡಲಾಯಿತು.ಪುತ್ತೂರಿನ ಯುವಕರಿಗೆ ಉದ್ಯೋಗ ದೊರೆಯಬೇಕು ಎಂಬುದು ಶಾಸಕರ ಕನಸು. ಇದಕ್ಕಾಗಿ ಅನೇಕ ತರಬೇತಿಗಳನ್ನು ಆಯೋಜನೆ ಮಾಡಿದ್ದಾರೆ. ಕೆಲದಿನಗಳ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ ತರಬೇತಿಗಳನ್ನು ಟ್ರಸ್ಟ್ ಮೂಲಕ ಶಾಸಕರು ಆಯೋಜನೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಗ್ರಾಮಕರಣಿಕ, ಸರ್ವೆಯರ್ ಹುದ್ದೆಗೂ ತರಬೇತಿಗಳನ್ನು ನೀಡಲಿದ್ದೇವೆ. ರಾಜಕೀಯ ರಹಿತ ಸಂಘಟನೆಯಾದ ರೈ ಚಾರಿಟೇಬಲ್ ಟ್ರಸ್ಟ್ ಸಮಾಜದ ಯುವಕರ ನೊಂದವರ ಏಳಿಗೆಗಾಗಿ ಶ್ರಮವಹಿಸುತ್ತಿದೆ ಎಂದು ಹೇಳಿದರು.

ನಾವು ಉದ್ಯೋಗ ಹುಡುಕುವ ಕೆಲಸದಲ್ಲಿ ನಿರತರಾಗಿದ್ದೇವೆ: ನಿಹಾಲ್ ಪಿ ಶೆಟ್ಟಿ
ಟ್ರಸ್ಟ್‌ನ ಸದಸ್ಯರೂ , ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ ಮಾತನಾಡಿ, ನಮ್ಮ ಶಾಸಕರ ಟ್ರಸ್ಟ್ ಮೂಲಕ ಯವಕರಿಗೆ ಉದ್ಯೋಗವನ್ನು ಹುಡುಕಿ ಅವರನ್ನು ಸಮಾಜದ ಮುಖ್ಯವಾಹಿಗೆ ತರುವ ಕೆಲಸವನ್ನು ಮಾಡುತ್ತಿದ್ದೇವೆ. ಸರಕಾರಿ ಉದ್ಯೋಗಕ್ಕಾಗಿ ವಿದ್ಯಾವಂತ ಯುವ ಸಮೂಹಕ್ಕೆ ಬೇಕಾದ ನೆರವನ್ನು ಟ್ರಸ್ಟ್ ಮೂಲಕ ನೀಡುತ್ತಿದ್ದೇವೆ. ಆಧುನಿಕ ಕಾಲಘಟ್ಟದಲ್ಲಿ ಯುವ ಸಮೂಹವನ್ನು ರಾಜಕೀಯ ಹೆಸರಿನಲ್ಲಿ ದುರುಪಯೋಗ ಪಡಿಸುತ್ತಿರುವವರೇ ಹೆಚ್ಚಾಗಿದ್ದು ಅವರ ಭವಿಷ್ಯದ ಕಡೆ ಚಿಂತಿಸುವವರು ಕಡಿಮೆಯಾಗಿದ್ದಾರೆ. ರಾಜಕೀಯ ವ್ಯಕ್ತಿಗಳು ಯುವಕರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕೇ ಹೊರತು ಅವರನ್ನು ರಾಜಕೀಯ ದುರುದ್ದೇಶಕ್ಕೆ ಬಳಸಬಾರದು ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಟ್ರಸ್ಟ್ ಸದಸ್ಯರಾದ ರಾಮಣ್ಣ ಪಿಲಿಂಂಜ , ಸಾಹಿರಾಬಾನು ಉಪಸ್ಥಿತರಿದ್ದರು. ಯೋಗೀಶ್ ಸಾಮಾನಿ ಸ್ವಾಗತಿಸಿದರು. ಶಾಸಕರ ಕಚೇರಿ ಸಿಬಂದಿ ವಿನೋದ್ ಶೆಟ್ಟಿ ಕೊಳ್ತಿಗೆ ವಂದಿಸಿದರು. ರಚನಾ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಟ್ರಸ್ಟ್ ಮೂಲಕ ಪುತ್ತೂರಿನ ಯುವಕರಿಗೆ ಉದ್ಯೋಗ ಮೇಳಕ್ಕೆ ತೆರಳುವಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಯುವಕರಿಗೆ ಉದ್ಯೋಗ ಸಿಕ್ಕಿದರೆ ಅದುವೇ ದೊಡ್ಡ ಸಂತೋಷವಾಗಿದೆ. ಮಕ್ಕಳು ಕಲಿತು ಉದ್ಯೋಗಪಡೆಯಬೇಕು ಎಂಬುದು ಪ್ರತೀಯೊಬ್ಬ ತಂದೆ ತಾಯಿಯ ಕನಸು ಅದನ್ನು ಮಕ್ಕಳು ನನಸು ಮಾಡಬೇಕು. ಉದ್ಯೋಗ ಪಡೆಯಲು ಪ್ರತೀಯೊಬ್ಬರೂ ಪ್ರಯತ್ನ ಪಡಬೇಕು , ಶ್ರಮಪಡಬೇಕು ಹಾಗಿದ್ದಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಪುತ್ತೂರು ವಿಧಾನಸಭಾ ಕ್ಷೇತ್ರದ ಯುಕವರಿಗೆ ಉದ್ಯೋಗ ವಿಚಾರದಲ್ಲಿ ನಮ್ಮ ಟ್ರಸ್ಟ್ ಮೂಲಕ ಎಲ್ಲಾ ನೆರವು ನೀಡಲು ಸಿದ್ದ.
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here