ನವ ಯುಗದ ನಿರ್ಮಾಣ ಯಾರ ಹೊಣೆ?

0

 ಒಂದೆಡೆ  ತಾನು ಅತಿಯಾಗಿ ಪ್ರೇಮಿಸಿದ ಹುಡುಗಿ ತನ್ನ ಪ್ರೇಮವನ್ನು ನಿರಾಕರಿಸಿದ್ದಕ್ಕಾಗಿ ಅಟ್ಟಾಡಿಸಿಕೊಂಡು ಕೊಚ್ಚಿ ಕೊಂದು ಹಾಕುವುದು….. ಮತ್ತೊಂದೆಡೆ ಇನ್ನೂ ಪ್ರಪಂಚವೇನೆಂದೇ ಅರಿಯದ ಪುಟ್ಟ ಹುಡುಗಿಯನ್ನು 33 ಮಂದಿ ಬಳಸಿ ತಿಪ್ಪೆಗೆ ಬಿಸಾಡುವುದು…. ಮಗದೊಂದೆಡೆ ಪತ್ನಿಯ ಚಾರಿತ್ರ್ಯವನ್ನು ಶಂಕಿಸಿದ ಸಚ್ಚಾರಿತ್ರ್ಯನೋರ್ವ(?)  ಆಕೆಯನ್ನು ಹತ್ಯೆಗೈಯುವ ವಿಡಿಯೋ ಒಂದನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು…. ಪ್ರೇಯಸಿ ವಿವಾಹ ಪ್ರಸ್ತಾಪವನ್ನು ಮುಂದಿರಿಸಿದ್ದಕ್ಕೆ ಒಪ್ಪದ  ಪ್ರಿಯಕರನೋರ್ವ ಆಕೆಯನ್ನು 25 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇರಿಸುವುದು…. 9ನೇ ತರಗತಿಯ ಬಾಲಕನೋರ್ವ  ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಸ್ನೇಹಿತನಿಗೆಯೇ ಚೂರಿಯಿಂದ ಇರಿಯುವುದು… ಹೀಗೆ ದಿನ ಬೆಳಗಾದರೆ ಪತ್ರಿಕೆಯ ಪುಟಗಳನ್ನು ತಿರುವಿ ಹಾಕಿದರೆ, ಟಿವಿ ಚಾನೆಲ್  ಗಳನ್ನು  ಬದಲಿಸಿದರೆ ಸಾಕು ಅಲ್ಲಲ್ಲಿ ಹರಿದಾಡುವ ಸುದ್ದಿಗಳು ನಮ್ಮನ್ನು ಕಂಗೆಡಿಸಿಬಿಡುತ್ತವೆ.  ಇದೇನಿದು? ಮನುಕುಲದ ದುರಂತವೇ? ಅಥವಾ ನಾಗರಿಕನೆನಿಸಿಕೊಂಡ ಮನುಷ್ಯನ ಅನಾಗರಿಕ ವರ್ತನೆಯೇ? ಒಂದು ಕಾಲದಲ್ಲಿ ‘ಕೊಲೆ’ ಎಂಬ ಶಬ್ದವೇ ಅಪರೂಪವಾಗಿದ್ದು, ಒಂದೊಮ್ಮೆ ಕೇಳಿದ್ದೇ ಆದಲ್ಲಿ ಬೆಚ್ಚಿಬಿದ್ದು ವಾರವಿಡೀ ನಿದ್ದೆ ಕೆಡಿಸಿ ಬಿಡುತ್ತಿತ್ತು.  ಬದಲಾದ ದಿನಮಾನಗಳಲ್ಲಿ ಈ ಸುದ್ದಿಗಳು ತೀರಾ ಮಾಮೂಲು ಅನ್ನಿಸಿ ಇವುಗಳಿಗೆ ತೋರುವ ಪ್ರತಿಕ್ರಿಯೆ  ನೀರಸವಾಗಿಬಿಟ್ಟಿದೆ. ಎಲ್ಲೋ ಡೆಲ್ಲಿಯಲ್ಲಿ ನಡೆಯುತ್ತಿದ್ದ ಭೀಕರ ಹತ್ಯೆಗಳ ಕಡೆ ಅವಾಕ್ಕಾಗಿ ನೋಡುತ್ತಿದ್ದಂತೆಯೇ ಅಂತದ್ದೇ ಘಟನೆ ಪಕ್ಕದ ಊರಿನಲ್ಲಿ ನಡೆದಾಗ ಮಾತ್ರ ಪರಿಸ್ಥಿತಿಯ ಗಾಂಭೀರ್ಯತೆಗೆ ಬೆದರಿ ಹೋದದ್ದಿದೆ.  

                 ಮಾನವೀಯತೆಯನ್ನು ಹೊಂದಿರುವವನೇ ‘ಮಾನವ’ ಎಂಬ ಮಾತಿಗೆ ಅಪವಾದವೆಂಬಂತೆ ಈ ಘಟನೆಗಳೆಲ್ಲ ಕಂಡುಬರುತ್ತಿಲ್ಲವೇ? ಇಲ್ಲೆಲ್ಲೂ ಮಾನವೀಯತೆ, ಕರುಣೆಗಳ ಸುಳಿವಿಲ್ಲ. ಅಷ್ಟಕ್ಕೂ, ಈ ದಿನಗಳಲ್ಲಿ ಮಾನವೀಯತೆಯನ್ನು ಪೋಷಿಸುವ ಯಾವ ಘಟನೆಗಳು ನಮ್ಮ ಸುತ್ತಮುತ್ತ ಕಾಣಸಿಗುತ್ತಿವೆ?  ನಮ್ಮ ಸಿನಿಮಾಗಳು, ಧಾರಾವಾಹಿಗಳು ಯಾವ ಸಂದೇಶಗಳನ್ನು ಹೊತ್ತಿವೆ? ತಲವಾರು,  ಕತ್ತಿಗಳು ಝಳಪಿಸದ ಸಿನಿಮಾಗಳು ಇಂದೇನಾದರೂ ಇವೆಯೇ? ದ್ವೇಷ, ಅಸೂಯೆ, ಕೊಲೆ ಸಂಚುಗಳು ಇಲ್ಲದೆ ಇರುವ ಧಾರಾವಾಹಿಗಳು ನಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆಯೇ? ಹೆತ್ತವರು ತಮ್ಮ ಮಕ್ಕಳಿಗೆ ಯಾವ ಮೌಲ್ಯಗಳನ್ನು ಬೋಧಿಸುತ್ತಿದ್ದಾರೆ? ಶಾಲಾ-ಕಾಲೇಜುಗಳಲ್ಲಿ ಒತ್ತಡ… ಸ್ಪರ್ಧಾತ್ಮಕ ಜಗತ್ತು…. ಬದುಕುವುದಕ್ಕಾಗಿ ಹೋರಾಟ…. ಇವುಗಳೊಂದಿಗೆ ಸ್ಪರ್ಧೆಗಿಳಿಯಲಾಗದೆ ಹತಾಶರಾಗಿ ಸೋಲುಂಡಾಗ ಮಾದಕ ವ್ಯಸನಗಳಂತಹ ಚಟಗಳಿಗೆ ಬಲಿಯಾಗಿ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡು ….. ಪರಿಸ್ಥಿತಿ ತೀರ ಅಸಹನೀಯವಾಗುತ್ತಾ ಹೋದಂತೆ ಆತ ಕೊಲೆಯನಲ್ಲದೆ ಮತ್ತೇನು ದೇಶ ಕಟ್ಟುವ ಆಲೋಚನೆ ಮಾಡಬಲ್ಲನೆ?

          ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ರಾಂತಿ, ಸ್ಮಾರ್ಟ್ ಫೋನ್ ಗಳ ಬಳಕೆ ಇವುಗಳನ್ನೆಲ್ಲ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾ,  ಸುಖವೆಂದರೆ ಇದೇ ಎಂಬ ಭ್ರಮೆಗೆ ಒಳಗಾದ ಮನುಷ್ಯ,  ಸುಂದರವಾದ ಬದುಕಿಗೆ ಇನ್ನೊಂದು ಆಯಾಮವೂ ಇದೆ ಎಂಬುದನ್ನು ಮರೆತುಬಿಟ್ಟಿದ್ದಾನೆ.

         ಎಲ್ಲೋ ಓದಿದ ನೆನಪು, ದೇಶದ ಯಾವುದೋ  ಭಾಗದಲ್ಲಿ ಒರಾಂಗುಟಾನ್ ಎಂಬ ಚಿಂಪಾಂಜಿ ವರ್ಗಕ್ಕೆ ಸೇರಿದ ಒಂದು ಹೆಣ್ಣು ವಾನರವನ್ನು ವೇಶ್ಯಾವಾಟಿಕೆಯಲ್ಲಿ ಬಳಸುತ್ತಿದ್ದರಂತೆ. ವಿಷಯ ತಿಳಿದು ಬಳಿಕ ಆ ಪ್ರಾಣಿಯನ್ನು ರಕ್ಷಿಸಲಾಯಿತು ಆ ವಿಷಯ ಬೇರೆ. ಈ ಘಟನೆ ಮನುಷ್ಯನ ಯಾವ ಮುಖವನ್ನು ಪರಿಚಯಿಸುತ್ತದೆ?  ನರ ರೂಪದಲ್ಲಿರುವ ರಾಕ್ಷಸರ  ಕ್ರೌರ್ಯಕ್ಕೆ ಅಕ್ಷರಶ : ನಲುಗಿ ಹೋದ  ಮೂಕಜೀವಿಯ  ವೇದನೆಯ ಮುಂದೆ ಇಡೀಯ ನಾಗರಿಕ ಸಮಾಜ ತಲೆತಗ್ಗಿಸಬೇಕಲ್ಲವೇ?.

         ಅಹಿಂಸೆಯೇ ಪರಮಧರ್ಮ ಎಂದು ಜಗತ್ತಿಗೆ ಸಂದೇಶ ನೀಡಿದ ಬುದ್ಧ…. ದಯೆಯೇ ಧರ್ಮದ ಮೂಲವಯ್ಯ… ಎಂದು ಮಾನವ ಧರ್ಮಕ್ಕೆ ರೂಪುರೇಷೆ ನೀಡಿದ ಬಸವಣ್ಣನಂತಹ ಮಹಾನ್ ದಾರ್ಶನಿಕರು ಜನಿಸಿದ ಈ ನಾಡಿನಲ್ಲಿ ಇಂತಹುದೊಂದು ಹಿಂಸೆ ಸಹ್ಯವೇ? ಒಂದೆಡೆಯಲ್ಲಿ ಭಾವನಾತ್ಮಕ ಆಲೋಚನಾ ಲಹರಿಯ ಕೊರತೆ ಇರುವ, ತನಗೇನು ಬೇಕು ಎಂಬುದನ್ನು ತಾನೇ ಅರಿಯದ, ಸದಾ ಯಾವುದೋ ಗುಂಗಿನಲ್ಲಿ ಮುಳುಗಿ ಕಾಲ ಹರಣ ಮಾಡುತ್ತಿರುವ ವಿದ್ಯಾರ್ಥಿ ಸಮೂಹ… ಇವರನ್ನು ತಿದ್ದುವ ಯಾವುದೇ ಕ್ರಮ, ನಿಯಮಗಳನ್ನು ರೂಪಿಸುವಲ್ಲಿ ಸೋತುಹೋದ ನಮ್ಮ ಶಿಕ್ಷಣ ವ್ಯವಸ್ಥೆ… ತಾಳ,ಲಯ ತಪ್ಪಿದ ಮಾದಕ ವ್ಯಸನದ ಅಮಲಿನಲ್ಲಿ ತೇಲುಗಣ್ಣು ಬಿಡುತ್ತಿರುವ ಯುವಸಮೂಹ….ಸಾಂಪ್ರದಾಯಿಕ ವಿವಾಹ ಪದ್ಧತಿಯನ್ನು ಅಣಕಿಸುತ್ತ ಸಾಂಸಾರಿಕ ಜವಾಬ್ದಾರಿಯ ಹೊಣೆಗಾರಿಕೆಯನ್ನು ಮರೆತು ಲಿವಿಂಗ್ ಟುಗೆದರ್  ಎಂಬ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಶ್ರೀಮಂತ ವರ್ಗ …. ಇವುಗಳೆಡೆಯಲ್ಲಿ ಜಿರಳೆಗಳ ಕಾಟ…. ಇವರುಗಳ ಕೈಯಲ್ಲಿ ಭವ್ಯ ಭಾರತದ ಕನಸುಗಳನ್ನು ಇರಿಸುವುದು ಹೇಗೆ ?

         ಬದುಕಿಗೊಂದು ಅರ್ಥವಿಲ್ಲದೆ,  ಕಣ್ಣ ಮುಂದೆ ಕನಸುಗಳಿಲ್ಲದೆ, ಆದರ್ಶ, ತತ್ವ, ಸಿದ್ಧಾಂತಗಳು ಶೂನ್ಯವಾಗಿ ಕಟ್ಟಿಕೊಂಡ ಜೀವನ ಅರ್ಥಹೀನವೆನಿಸುವುದಿಲ್ಲವೇ?     ನವ ಭಾರತದ, ನಮ್ಮ ಯುಗದ ನಿರ್ಮಾಣಕ್ಕೆ ಸುಂದರ ಭಾಷ್ಯ ಬರೆಯಬೇಕಾದ ಯುವಪೀಳಿಗೆ ಬೌದ್ಧಿಕ ದಾರಿದ್ರ್ಯತನ ತೋರದೆ , ಹೊಣೆಯರಿತು ಹೆಜ್ಜೆ ಇರಿಸಬೇಕಾಗಿದೆ.  ‘ಸರ್ವೇ ಜನಾಃ ಸುಖಿನೋ ಭವಂತು ‘ಎಂಬ ಮಾತು ಭಾಷಣವಾಗದೆ ಬದುಕಾಗಬೇಕಾಗಿದೆ

ಪುಷ್ಪಲತಾ,  ಕನ್ನಡ ಉಪನ್ಯಾಸಕರು, ವಿವೇಕಾನಂದ ಪದವಿ ಪೂರ್ವ ಕಾಲೇಜು, ನೆಹರೂ ನಗರ ಪುತ್ತೂರು

LEAVE A REPLY

Please enter your comment!
Please enter your name here