







ಪುತ್ತೂರು: ವೈದ್ಯಕೀಯ ಹಾಗೂ ಮಧುಮೇಹ ತಜ್ಞ, ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿನ ಡಾ.ನಝೀರ್ ಅಹಮದ್ ಅವರ ಡಯಾಬಿಟಿಸ್ ಸೆಂಟರ್ ಇದರ ವತಿಯಿಂದ ಆ. 11ರಂದು ಉಚಿತ ಆರೋಗ್ಯ ತಪಾಸಣಾ ಹಾಗೂ ಜಾಗೃತಿ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಸಾರ್ವಜನಿಕರಿಗೆ ಥೈರಾಯ್ಡ್ ಫಂಕ್ಷನ್ ಟೆಸ್ಟ್, ರಕ್ತದಲ್ಲಿನ ಸಕ್ಕರೆ, HbA1c, ಲಿಪಿಡ್ ಪ್ರೊಫೈಲ್, ಬಿಎಂಡಿ, ವಿಟಮಿನ್ ಡಿ ಹಾಗೂ ದೇಹದ ಕೊಬ್ಬು ಮತ್ತು ಸ್ನಾಯುಗಳ ವಿಶ್ಲೇಷಣೆ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು.


ವೈದ್ಯಕೀಯ ತಜ್ಞ ಡಾ.ನಝೀರ್ ಅಹಮದ್ ಮಾತನಾಡಿ, ಆರೋಗ್ಯ ತಪಾಸಣೆಯ ಮೂಲಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಜೀವನಶೈಲಿ ಬದಲಾವಣೆ ಹಾಗೂ ವೈದ್ಯಕೀಯ ಮಾರ್ಗದರ್ಶನದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು ಎಂದರು.



ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ಪೂರ್ವಾಧ್ಯಕ್ಷ ಎ.ಜೆ ರೈ, ನಿಯೋಜಿತ ಅಧ್ಯಕ್ಷ ಸುದರ್ಶನ್ ರಾವ್, ಕಾರ್ಯದರ್ಶಿ ಲೋವಲ್ ಮೇವಾಡ, ಸದಸ್ಯ ವಿಶ್ವನಾಥ್ ಗೌಡ, ರೋಟರ್ಯಾಕ್ಟ್ ಜಿಲ್ಲಾ ಕೌನ್ಸಿಲ್ ಸದಸ್ಯ ಸುಬ್ರಮಣಿ ಪಿ.ವಿ, ರೋಟರ್ಯಾಕ್ಟ್ ಪುತ್ತೂರು ಅಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಎರಿಸ್ ಕಂಪೆನಿಯ ವಿಘ್ನೇಶ್ ಹಾಗೂ ರಾಜೇಶ್, ಇಂಟಾಸ್ ಕಂಪೆನಿಯ ಚರಣ್ ಹಾಗೂ ರಕ್ಷಿತ್, ಮ್ಯಾನ್ ಕೈಂಡ್ ಕಂಪೆನಿಯ ತೌಸಿಫ್, ಮೆಕ್ಲಾಯಿಡ್ಸ್ ಕಂಪೆನಿಯ ಭರತ್ ಹಾಗೂ ವರುಣ್ ಕುಮಾರ್, ಥೈರೋಕೇರ್, ಅಗಿಲಾಸ್ ಲ್ಯಾಬ್ ಸಿಬ್ಬಂದಿ, ಡಾ.ನಝೀರ್ ಅಹಮದ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು.
ದೇಹದ ತೂಕ ಹಾಗೂ ಬಿಎಂಐ ಜೊತೆಗೆ ದೇಹದಲ್ಲಿನ ಕೊಬ್ಬು ಮತ್ತು ಸ್ನಾಯುಗಳ ಪ್ರಮಾಣವನ್ನು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ದೇಹದಲ್ಲಿ ಹೆಚ್ಚಿರುವ ಕೊಬ್ಬು, ವಿಶೇಷವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಗುರುತಿಸುವುದರಿಂದ ಮಧುಮೇಹ ಹಾಗೂ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಅಂದಾಜಿಸಿ ಸೂಕ್ತ ಆಹಾರ ಮತ್ತು ವ್ಯಾಯಾಮದ ಸಲಹೆ ನೀಡಲು ಸಹಾಯವಾಗುತ್ತದೆ. ಅದೇ ರೀತಿ ವಿಟಮಿನ್ ಡಿ ಮೂಳೆಗಳ ಆರೋಗ್ಯ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಹಾಗೂ ಸ್ನಾಯುಗಳ ಕಾರ್ಯ ನಿರ್ವಹಣೆಗೆ ಪ್ರಮುಖವಾಗಿದೆ. ವಿಟಮಿನ್ ಡಿ ಕೊರತೆಯನ್ನು ಆರಂಭಿಕ ಹಂತದಲ್ಲೇ ಗುರುತಿಸುವುದರಿಂದ ಮೂಳೆಗಳ ದುರ್ಬಲತೆ ಹಾಗೂ ಇತರ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು.
-ಡಾ.ನಝೀರ್ ಅಹಮದ್, ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್, ಕಲ್ಲಾರೆ
291 ಫಲಾನುಭವಿಗಳ ತಪಾಸಣೆ..
ಶಿಬಿರದಲ್ಲಿ ಒಟ್ಟು 291 ತಪಾಸಣೆಗಳನ್ನು ನಡೆಸಲಾಯಿತು. ಇದರಲ್ಲಿ ಥೈರಾಯ್ಡ್ ಫಂಕ್ಷನ್ ಟೆಸ್ಟ್ – 49, RBS –50, HbA1c –39, ಲಿಪಿಡ್ ಪ್ರೊಫೈಲ್ –31, ಬಿಎಂಡಿ- 42, ವಿಟಮಿನ್ ಡಿ –50 ಹಾಗೂ ದೇಹದ ಕೊಬ್ಬು ಮತ್ತು ಸ್ನಾಯುಗಳ ವಿಶ್ಲೇಷಣೆ –30 ತಪಾಸಣೆಗಳು ನಡೆದವು.










