ವಿಶ್ವ ಅಂಗಾಂಗ ದಾನ ದಿನ – ಜೀವದಾನದ ಮಹತ್ತರ ಹೆಜ್ಜೆ

0

ಪ್ರತಿ ವರ್ಷ ಆ: 13 ರಂದು ಜಗತ್ತಿನಾದ್ಯಂತ “ವಿಶ್ವ ಅಂಗಾಂಗ ದಾನ ದಿನ” ವನ್ನು ಆಚರಿಸಲಾಗುತ್ತದೆ. ಅಂಗಾಂಗ ದಾನದ ಕುರಿತು ಜನರಲ್ಲಿ ಇರುವ ಭಯ, ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಜಾಗೃತಿ ಮೂಡಿಸುವುದು ಹಾಗೂ ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಲು ಮುಂದೆ ಬರುವಂತೆ ಪ್ರೇರೇಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಅಂಗಾಂಗ ದಾನ ಎಂದರೇನು?
ಒಬ್ಬ ವ್ಯಕ್ತಿ (ಬದುಕಿರುವಾಗ ಅಥವಾ ಮರಣ ಹೊಂದಿದ ನಂತರ) ತನ್ನ ದೇಹದ ಆರೋಗ್ಯಕರ ಅಂಗಾಂಗಗಳನ್ನು ಅಥವಾ ಅಂಗಾಂಶಗಳನ್ನು ಮತ್ತೊಬ್ಬ ನಿರ್ಗತಿಕ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗೆ ಕಸಿ ಮಾಡಲು ಸ್ವಇಚ್ಛೆಯಿಂದ ದಾನ ಮಾಡುವುದಕ್ಕೆ “ಅಂಗಾಂಗ ದಾನ” ಎನ್ನಲಾಗುತ್ತದೆ.

ಅಂಗಾಂಗ ದಾನದ ವಿಧಗಳು
ಜೀವಂತ ವ್ಯಕ್ತಿಯಿಂದ ದಾನ –
ವ್ಯಕ್ತಿ ಜೀವಂತವಾಗಿದ್ದಾಗ ತನ್ನ ದೇಹದ ಒಂದು ಮೂತ್ರಪಿಂಡ ಯಕೃತ್ತಿನ ಒಂದು ಭಾಗ ಅಥವಾ ಶ್ವಾಸಕೋಶದ ಒಂದು ಭಾಗವನ್ನು ತನ್ನ ರಕ್ತಸಂಬಂಧಿಗಳಿಗೆ ಅಥವಾ ಪ್ರೀತಿಯ ಪಾತ್ರರಿಗೆ ದಾನ ಮಾಡಬಹುದು.

ಮರಣೋತ್ತರ ದಾನ – ಮಿದುಳು ಸಾವು
ಅಪಘಾತ ಅಥವಾ ತೀವ್ರ ರೀತಿಯ ಪಾರ್ಶ್ವವಾಯುವಿನಿಂದಾಗಿ ಮಿದುಳು ಶಾಶ್ವತವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಆ ವ್ಯಕ್ತಿಯ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳನ್ನು ದಾನ ಮಾಡಬಹುದು.

ಸಾಮಾನ್ಯ ಸಾವು
ಹೃದಯ ಬಡಿತ ನಿಂತು ವ್ಯಕ್ತಿ ಮೃತಪಟ್ಟರೆ, ಕಣ್ಣಿನ ಪೊರೆ, ಚರ್ಮ, ಮೂಳೆಗಳು ಮತ್ತು ಕವಾಟಗಳನ್ನು ದಾನ ಮಾಡಬಹುದು. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯೂ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯ ಪರಿಸ್ಥಿತಿಯನ್ನು ಆಧರಿಸಿ ಪ್ರತಿಯೊಬ್ಬರ ಅಂಗಾಂಗಗಳೂ ಉಪಯುಕ್ತ. ಕ್ಯಾನ್ಸರ್, ಎಚ್.ಐ.ವಿ ಅಥವಾ ತೀವ್ರ ಸಾಂಕ್ರಾಮಿಕ ರೋಗಗಳಿಲ್ಲದ ಯಾವುದೇ ವ್ಯಕ್ತಿ ಅಂಗಾಂಗ ದಾನ ಮಾಡಲು ಅರ್ಹರು.
ಒಬ್ಬ ವ್ಯಕ್ತಿಯ ಮರಣೋತ್ತರ ಅಂಗಾಂಗ ದಾನವು ಸುಮಾರು 8 ಜೀವಗಳನ್ನು ಉಳಿಸಬಹುದು ಮತ್ತು 50ಕ್ಕೂ ಹೆಚ್ಚು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.

ಹೃದಯ ಮತ್ತು ಶ್ವಾಸಕೋಶ
ತೀವ್ರ ಹೃದಯಾಘಾತ ಅಥವಾ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮರುಜೀವ ನೀಡುತ್ತದೆ. ಕಣ್ಣುಗಳು ಇಬ್ಬರು ಅಂಧರಿಗೆ ದೃಷ್ಟಿ ನೀಡುತ್ತದೆ.
ಮೂತ್ರಪಿಂಡಗಳು ಇಬ್ಬರು ಡಯಾಲಿಸಿಸ್ ರೋಗಿಗಳಿಗೆ ಹೊಸ ಜೀವನ ನೀಡುತ್ತದೆ. ಚರ್ಮ ಬೆಂಕಿ ಅಪಘಾತಕ್ಕೆ ಈಡಾದ ರೋಗಿಗಳ ಚಿಕಿತ್ಸೆಗೆ ಸಹಕಾರಿಯಾಗುತ್ತದೆ.

ತಪ್ಪು ಕಲ್ಪನೆಗಳು ಮತ್ತು ವಾಸ್ತವ
ತಪ್ಪು ಕಲ್ಪನೆ –
ಅಂಗಾಂಗ ದಾನದಿಂದ ಮೃತರ ದೇಹ ವಿಕಾರಗೊಳ್ಳುತ್ತದೆ.
ವಾಸ್ತವ – ಅಂಗಾಂಗ ತೆರವು ಗೊಳಿಸುವ ಪ್ರಕ್ರಿಯೆಯನ್ನು ಪರಿಣಿತ ವೈದ್ಯರು ಶಸ್ತ್ರಚಿಕಿತ್ಸೆಯಂತೆಯೇ ಗೌರವಪೂರ್ವಕವಾಗಿ ಮಾಡುತ್ತಾರೆ. ದೇಹಕ್ಕೆ ಯಾವುದೇ ಹಾನಿ ಅಥವಾ ವಿಕಾರ ಉಂಟಾಗುವುದಿಲ್ಲ.
ತಪ್ಪು ಕಲ್ಪನೆ – ಧರ್ಮಗಳು ಇದನ್ನು ಒಪ್ಪುವುದಿಲ್ಲ.
ವಾಸ್ತವ – ಪ್ರಪಂಚದ ಬಹುತೇಕ ಎಲ್ಲಾ ಪ್ರಮುಖ ಧರ್ಮಗಳೂ ಅಂಗಾಂಗ ದಾನವನ್ನು ಮಾನವೀಯತೆಯ ಅತ್ಯುನ್ನತ ಸೇವೆ ಮತ್ತು ಪವಿತ್ರ ಕಾರ್ಯವೆಂದು ಬೆಂಬಲಿಸುತ್ತವೆ.

ಅಂಗಾಂಗ ದಾನ ಮಾಡುವುದು ಹೇಗೆ?
ಅಂಗಾಂಗ ದಾನ ಮಾಡಲು ಬಯಸುವವರು ಸರ್ಕಾರದ ಅಧಿಕೃತ ಸಂಸ್ಥೆಗಳಾದ NOTTO (National Organ and Tissue Transplant Organisation) ಅಥವಾ ಕರ್ನಾಟಕದ SOTTO / Jeevasarthakathe ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಿಕೊಂಡು ‘ಡೋನರ್ ಕಾರ್ಡ್’ ಪಡೆಯಬಹುದು.
ಅತ್ಯಂತ ಪ್ರಮುಖ ಹಂತವೆಂದರೆ, ನಿಮ್ಮ ನಿರ್ಧಾರವನ್ನು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳುವುದು. ಏಕೆಂದರೆ ಮರಣೋತ್ತರ ದಾನದ ಸಮಯದಲ್ಲಿ ಕುಟುಂಬದವರ ಸಮ್ಮತಿ ಅತ್ಯಗತ್ಯ.

ಸಾವು ಅನಿವಾರ್ಯ, ಆದರೆ ನಮ್ಮ ಸಾವಿನ ನಂತರವೂ ಮತ್ತೊಬ್ಬರ ಕಣ್ಣಿನಲ್ಲಿ ಬೆಳಕಾಗಿ, ಮತ್ತೊಬ್ಬರ ಎದೆಯಲ್ಲಿ ಹೃದಯದ ಬಡಿತವಾಗಿ ಜೀವಿಸಲು ಅಂಗಾಂಗ ದಾನಕ್ಕಿಂತ ದೊಡ್ಡ ಮಾರ್ಗ ಬೇರೊಂದಿಲ್ಲ. ಈ ‘ವಿಶ್ವ ಅಂಗಾಂಗ ದಾನ ದಿನ’ದಂದು ನಾವೆಲ್ಲರೂ ಅಂಗಾಂಗ ದಾನದ ಪ್ರತಿಜ್ಞೆ ಮಾಡೋಣ, ಮತ್ತೊಬ್ಬರ ಬಾಳಿಗೆ ಬೆಳಕಾಗೋಣ. “ದಾನಗಳಲ್ಲಿ ಶ್ರೇಷ್ಠ ದಾನ – ಜೀವದಾನ”.

LEAVE A REPLY

Please enter your comment!
Please enter your name here