ಸ್ವಾತಂತ್ರ್ಯ ಹೋರಾಟಗಾರ-ದೇಶಭಕ್ತ ಎನ್‌.ಎಸ್‌. ಕಿಲ್ಲೆ 125ನೇ ಜನ್ಮ ವರ್ಷಾಚರಣೆ

0

ನಾಳೆ ಸಿರಿಕಡಮಜಲು ಕೃಷಿ ಕ್ಷೇತ್ರ-ಕಿಲ್ಲೆ ನಿವಾಸದಲ್ಲಿ ಸಂಭ್ರಮಾಚರಣೆ

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್‌.ಎಸ್‌. ಕಿಲ್ಲೆ (ನಾರಾಯಣ ಶೆಟ್ಟಿ ಕಿಲ್ಲೆ) ರವರ 125ನೇ ಜನ್ಮ ವರ್ಷಾಚರಣೆ ಸಂಭ್ರಮ ಕಾರ್ಯಕ್ರಮವು ಸ್ವಾತಂತ್ರ್ಯ ದಿನಾಚರಣೆ-ಮನೆಮನೆ ತ್ರಿವರ್ಣ ಧ್ವಜ ವಂದನೆಯೊಂದಿಗೆ ಆ.15ರಂದು ಸಿರಿಕಡಮಜಲು ಕೃಷಿಕ್ಷೇತ್ರ – ಕಿಲ್ಲೆ ನಿವಾಸದಲ್ಲಿ ಜರಗಲಿದೆ.

ಬೆಳಿಗ್ಗೆ ಧ್ವಜವಂದನೆ ಮೂಲಕ ಸ್ವಾತಂತ್ರ್ಯೋತ್ಸವ ನಡೆದು ಬಳಿಕ ಮಧ್ಯಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈ ಕಿಲ್ಲೆ ಸಂಸ್ಮರಣೆ ಮಾಡಲಿದ್ದಾರೆ. ಇದೇ ವೇಳೆ ಮಾಜಿ ಸೈನಿಕ ರಮೇಶ್‌ ರೈ ಬೋಳೋಡಿಯವರಿಗೆ ಗೌರವ ಸನ್ಮಾನ, ಕಿಲ್ಲೆಯವರ ಮೊಮ್ಮಗ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರಾಜೇಶ್‌ ಹೆಗ್ಡೆಯವರ ಪುತ್ರಿ ಭರತನಾಟ್ಯ ರಂಗಕಲಾ ಪ್ರವೀಣೆ ರಾಶಿ ಆರ್‌. ಹೆಗ್ಡೆಯವರಿಗೆ ರಂಗಕಲಾ ಸನ್ಮಾನ ನಡೆಯಲಿದೆ. ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್‌ ರೈ ಕೋರಂಗ, ಕೃಷಿಕ ಪ್ರಸನ್ನಕುಮಾರ್‌ ಮಾರ್ತ ಇಳಂತಾಜೆ, ಭಾರತೀಯ ಭೂಸೇನೆಯ ಮಾಜಿ ಸೈನಿಕ ಇರಾ ಸಂಪಿಲ ರಾಮಯ್ಯ ಶೆಟ್ಟಿ ಗೌರವ ಉಪಸ್ಥಿತಿ ಇರಲಿದ್ದಾರೆ.


ದೇಶಭಕ್ತ ಎನ್‌.ಎಸ್‌. ಕಿಲ್ಲೆ ಪರಿಚಯ:
ಮಂಗಳೂರು ಮರವೂರು ಬೀಡು ಬೊಗ್ರ ಕಿಲ್ಲೆ ಮತ್ತು ಕೂಳೂರು ಆದಕ್ಕೆ ಶೆಡ್ತಿ ದಂಪತಿ ಮಗನಾಗಿ 1901ರಲ್ಲಿ ಜನಿಸಿದ ಕಿಲ್ಲೆಯವರು 1919ರಲ್ಲಿ ಮಂಗಳೂರಿನ ಬಾಸೆಲ್‌ ಮಿಶನ್‌ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಮುಂಬೈಯಲ್ಲಿ ಬ್ರಿಟೀಷ್‌ ಸರಕಾರದ ಅಂಚೆ ಇಲಾಖೆಯಲ್ಲಿ ಜನರಲ್‌ ಪೋಸ್ಟ್‌ ಆಫೀಸರ್‌ ಆಗಿ ಕರ್ತವ್ಯ ನಿರ್ವಹಿಸಿದರು. 1920 ರಲ್ಲಿ ಮಹಾತ್ಮಾ ಗಾಂಧೀಜಿಯವರು ಬೊಂಬಾಯಿ ಚೌಪಾಟಿಯಲ್ಲಿ ಮಾಡಿದ ಸ್ವಾತಂತ್ರ್ಯ ಸಂಗ್ರಾಮದ ಭಾಷಣದಿಂದ ಪ್ರಭಾವಿತರಾಗಿ 1921ರಲ್ಲಿ ಅಂಚೆ ಹುದ್ದೆಗೆ ರಾಜೀನಾಮೆ ನೀಡಿ ತನ್ನೂರು ಮಂಗಳೂರಿಗೆ ಬಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ದ.ಕ. ಮತ್ತು ಕೊಡಗು ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಹೋಗಿ ಸಂಗ್ರಾಮದ ಬೀಜವನ್ನು ಬಿತ್ತಿ, ತನ್ನ ಅಪ್ರತಿಮ ವಾಕ್ಚಾತುರ್ಯದಿಂದ ಜನರಿಗೆ ಪ್ರೇರಣೆ ನೀಡಿದರು.


ಅಪ್ರತಿಮ ವಾಗ್ಮಿಯಾಗಿದ್ದ ಕಿಲ್ಲೆಯವರು ಗಾಂಧೀಜಿಯವರ ಭಾಷಣ, ಕ್ಯಾ. ಲಕ್ಷ್ಮೀಯವರ ಭಾಷಣ ಹಾಗೂ ಸ್ವಾತಂತ್ರ್ಯ ನಂತರ ಪ್ರಧಾನಿ ನೆಹರೂರವರ ಭಾಷಣದ ಭಾಷಾಂತರ ಮಾಡಿ ಜನಮನ ಗೆದ್ದಿದ್ದರು. ಹರಿಜನ ಸೇವಕನಾಗಿ ಗಾಂಧೀಯವರ ಮಾರ್ಗದರ್ಶನದೊಂದಿಗೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.  ಸರ್ವೋದಯ ಪತ್ರಿಕೆ ಸಂಪಾದಕರಾಗಿ, ಪತ್ರಿಕೋದ್ಯಮಿಯಾಗಿಯೂ ಕಾರ್ಯನಿರ್ವಹಿಸಿದರು. ತುಳು-ಕನ್ನಡ ಉಭಯ ಭಾಷಾ ಸಾಹಿತಿಯಾಗಿ ತುಳು ಕವಿತೆ ʻಕಾಣಿಗೆʼ ಹಾಗೂ ಕನ್ನಡ ಕವಿತೆ ʻಮುರಲಿʼ ಬರೆದಿರುತ್ತಾರೆ. ಕನ್ನಡದಲ್ಲಿ ʻಭಾರತದ ಕರ್ಣʼ ಹಾಗೂ ʻಪ್ರಾಚೀನ ತುಳುನಾಡುʼ  ಸಂಶೋಧನಾ ಗ್ರಂಥ ಬರೆದು ಸಾಹಿತಿ ಎನಿಸಿಕೊಂಡವರು. ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿ ಕೂಟದಲ್ಲಿ ಮೆರೆದವರು.


ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸಂದರ್ಭ ಕಿಲ್ಲೆಯವರು ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ಸಿಗನ ನೆಲೆಯಲ್ಲಿ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ) ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1951ರಲ್ಲಿ ಸ್ವಾತಂತ್ರ್ಯ ಹೋರಾಟಗಾರನೆಂಬ ಹಿನ್ನೆಲೆಯಲ್ಲಿ ʻದೇಶ ಭಕ್ತʼ ನೆಂಬ ಹೆಗ್ಗಳಿಕೆ ಲಭಿಸಿತು. 1952ರಲ್ಲಿ ಕ್ಯಾನ್ಸರ್‌ ಮಹಾರೋಗಕ್ಕೆ ತುತ್ತಾಗಿ 1953ರಲ್ಲಿ ಎಳೆಯ ಪ್ರಾಯದಲ್ಲೇ ವಿಧಿವಶರಾದರು.


ಒಲಿದು ಬಂದ ಸಂಸತ್‌ ಅಭ್ಯರ್ಥಿ ಸೀಟು, ಮೇಲ್ಮನೆಯ ಸದಸ್ಯತನವನ್ನು ಬಯಸದೇ ಅಪ್ರತಿಮ ದೇಶಭಕ್ತನಾಗಿ ಇಂದಿಗೂ ಕಿಲ್ಲೆಯವರ ಹೆಸರು ಅಜರಾಮರವಾಗಿದೆ. 2001ರಲ್ಲಿ ಕಿಲ್ಲೆಯವರ ಜನ್ಮಶತಮಾನೋತ್ಸವವನ್ನು ಕಿಲ್ಲೆಯವರ ಸೋದರಳಿಯ, ಕಿಲ್ಲೆ ಪ್ರತಿಷ್ಟಾನದ ಅಧ್ಯಕ್ಷರಾದ ಕಡಮಜಲು ಸುಭಾಸ್‌ ರೈಯವರ ನೇತೃತ್ವದಲ್ಲಿ ದೇಶಾದ್ಯಂತ ಮಾಡಿ ಪುತ್ತೂರಿನಲ್ಲಿ ʻಕಿಲ್ಲೆ ಮೈದಾನʼ ನಾಮಕರಣ ಮಾಡಿ ʻಕಿಲ್ಲೆಯವರ ಸ್ಮರಣೆಗೆ ಮರಣವಿಲ್ಲದಂತೆʼ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಕಿಲ್ಲೆಯವರ 120ನೇ ಜನ್ಮ ವರ್ಷಾಚರಣೆ ಸಂದರ್ಭ ಕಿಲ್ಲೆ ಮೈದಾನಕ್ಕೆ  ಕಿಲ್ಲೆ ಮಹಾದ್ವಾರವನ್ನು ತನ್ನ ಸ್ವಂತ ಖರ್ಚಿನಿಂದ ನಿರ್ಮಿಸಿ ನಗರಸಭೆಗೆ ಹಸ್ತಾಂತರಿಸಿದ ಕಡಮಜಲು ಸುಭಾಸ್‌ ರೈಯವರು ಧನ್ಯತಾ ಭಾವ ತಳೆದಿದ್ದಾರೆ. ಇದೀಗ 125ನೇ ಜನ್ಮ ವರ್ಷಾಚರಣೆ ಸಂಭ್ರಮವು ಮಾಜಿ ಸೈನಿಕರಿಗೆ, ರಂಗಕಲಾವಿದೆಗೆ ಸನ್ಮಾನ ಜೊತೆಗೂಡಿ ನಡೆಯುತ್ತಿರುವುದು ದೇಶಭಕ್ತ ಎನ್‌.ಎಸ್‌. ಕಿಲ್ಲೆಯವರ ನೆನಪನ್ನು ಮುಂದಿನ ಜನಾಂಗಕ್ಕೆ ಅವಿಸ್ಮರಣೀಯವಾಗಿಸುವಲ್ಲಿ ವಿಶೇಷ ಪ್ರಯತ್ನವಾಗಿದೆ.

LEAVE A REPLY

Please enter your comment!
Please enter your name here