ಕೊಕ್ಕಡ: ಕೃಷಿಕರ ಸಮಾಲೋಚನಾ ಸಭೆ-ಆನೆ ಹಾವಳಿ, ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ – ಇಲಾಖೆ, ರೈತರ ಸಭೆ ನಡೆಸುವಂತೆ ಡಿಸಿಗೆ ಮನವಿಗೆ ನಿರ್ಣಯ

0

ನೆಲ್ಯಾಡಿ: ಆನೆ ಹಾವಳಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಕೊಕ್ಕಡ ವಲಯ ವ್ಯಾಪ್ತಿಯ ಬಾಧಿತ ಗ್ರಾಮಗಳ ಕೃಷಿಕರ ಸಭೆ ಆ.14ರಂದು ಸಂಜೆ ಕೊಕ್ಕಡ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿಗುರುತು, ಕೊಕ್ಕಡ ವಲಯ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಮನವಿ, ಟಾಸ್ಕ್‌ಪೋರ್ಸ್ ರಚನೆ, ಆನೆ ದಾಳಿಯಿಂದ ಮೃತಪಟ್ಟರೆ 1 ಕೋಟಿ ರೂ.ಪರಿಹಾರ, ಕೃಷಿ ಹಾನಿಗೆ 10 ಪಟ್ಟು ಪರಿಹಾರ ನೀಡಬೇಕೆಂಬ ನಿರ್ಣಯ ಸಭೆಯಲ್ಲಿ ಕೈಗೊಂಡು ಸರಕಾರಕ್ಕೆ ಮನವಿ ಮಾಡಲು ನಿರ್ಧಾರ ಮಾಡಲಾಯಿತು.

ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಪರಿಸರ ಸಂರಕ್ಷಣೆ ನೆಪದಲ್ಲಿ ಸರಕಾರ ಪಶ್ಚಿಮಘಟ್ಟ ಪ್ರದೇಶದ ಜನರ ಒಕ್ಕಲೆಬ್ಬಿಸುವ ದೊಡ್ಡ ಹುನ್ನಾರ ನಡೆಸುತ್ತಿದೆ. ಪ್ರಾಣಿಗಳನ್ನು ಈ ಪ್ರದೇಶಕ್ಕೆ ಬಿಡಲಾಗುತ್ತಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ. ಜನರೇ ಇಲ್ಲಿಂದ ಪಲಾಯನ ಮಾಡುವಂತೆ ಸರಕಾರ ಮಾಡುತ್ತಿದೆ. ಕಸ್ತೂರಿ ರಂಗನ್ ವರದಿಗೂ ರಾಜ್ಯ ಸರಕಾರ ಈ ತನಕ ಆಕ್ಷೇಪಣೆ ಸಲ್ಲಿಸಿಲ್ಲ. ಜಲವಿದ್ಯುತ್ ಯೋಜನೆಗಳಿಗೆ ಸರಕಾರ ತಡೆ ನೀಡಬೇಕು. ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡಿದಲ್ಲಿ ಆನೆ, ಪ್ರಾಣಿಗಳ ಹಾವಳಿ, ಸೂಕ್ಷ್ಮ ವಲಯ ಪ್ರದೇಶ ಘೋಷಣೆ ನಿಲ್ಲುತ್ತದೆ. ಆದ್ದರಿಂದ ಪಶ್ಚಿಮಘಟ್ಟ ಪ್ರದೇಶ ಹರಡಿಕೊಂಡಿರುವ ದ.ಕ.ಜಿಲ್ಲಾ ವ್ಯಾಪ್ತಿಯ ಅಲೆಟ್ಟಿಯಿಂದ ನಾರಾವಿ ತನಕದ ಸುಮಾರು ೨೦೦ ಕಿ.ಮೀ.ವ್ಯಾಪ್ತಿಯಲ್ಲಿ ಗಡಿಗುರುತು ಮಾಡಬೇಕು. ಇದರಿಂದ ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು. ಪಶ್ಚಿಮ ಘಟ್ಟ ಸೂಕ್ಷ್ಮ ವಲಯ ಯೋಜನೆ ವಿರೋಧಿಸಿ ಬಾಧಿತ ಪ್ರದೇಶ ವ್ಯಾಪ್ತಿಯ ಗ್ರಾ.ಪಂ.ಗಳಿಗೆ ಮನವಿ ನೀಡುವುದು, ಗ್ರಾ.ಪಂ. ಮುಂದೆ ಪ್ರತಿಭಟನೆ, ಸಮಾವೇಶ ನಡೆಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಿರ್ಧರಿಸಿದೆ. ಈ ಎಲ್ಲಾ ಹೋರಾಟಗಳಿಗೆ ಗ್ರಾಮಸ್ಥರು ಕೈಜೋಡಿಸಬೇಕೆಂದು ಕಿಶೋರ್ ಶಿರಾಡಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅವರು ಮಾತನಾಡಿ, ಸಭೆಯಲ್ಲಿ ಬಂದಿರುವ ಸಲಹೆಯಂತೆ ಶಾಸಕರ ಜೊತೆಗೆ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಚರ್ಚೆ ಮಾಡಲಾಗುವುದು. ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡಿದಲ್ಲಿ ಆನೆ, ಪ್ರಾಣಿಗಳ ಹಾವಳಿಗೆ ಪರಿಹಾರ ಕೇಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸುವ. ಇದಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಹೇಳಿದರು.

ಜನಪ್ರತಿನಿಧಿಗಳಿಗೆ ಕಾಳಜಿ ಇಲ್ವಾ ?;
ಗ್ರಾಮಸ್ಥ ಮಹೇಶ್ ಪಟ್ಲಡ್ಕ ಅವರು ಮಾತನಾಡಿ, ಆನೆ ಹಾವಳಿಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಶಾಸಕಿ ಭಾಗೀರಥಿ ಮುರುಳ್ಯ ಅವರ ಗಮನಕ್ಕೆ ತಂದಾಗ, ನಿಮಗೆ ಏನಾದರೂ ಸಮಸ್ಯೆ ಆಗಿದೆಯೇ ? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಪ್ರಾಣ ಹಾನಿ, ಕೃಷಿ ಹಾನಿಯಾಗುತ್ತಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಅವರಿಗೆ ಅರಣ್ಯ, ಪ್ರಾಣಿಗಳನ್ನು ಉಳಿಸಬೇಕೆಂಬ ಕಾಳಜಿ ಇದೆ. ಆದರೆ ಮನುಷ್ಯರು ಉಳಿಯಬೇಕೆಂಬ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಬಹಿಷ್ಕಾರವೇ ಪರಿಹಾರ;
ಆನೆ ಹಾವಳಿಗೆ ತುತ್ತಾಗಿರುವ ಗ್ರಾಮಗಳಲ್ಲಿ ಸಭೆ ನಡೆಸಿ ಬಳಿಕ ಒಂದೇ ಕಡೆ ದೊಡ್ಡ ಸಮಾವೇಶ ನಡೆಸಿ ಸರಕಾರಕ್ಕೆ ಹಕ್ಕೋತ್ತಾಯ ಮಾಡಬೇಕೆಂಬ ಬೇಡಿಕೆಯೂ ಸಭೆಯಲ್ಲಿ ವ್ಯಕ್ತವಾಯಿತು. ಚುನಾವಣೆ ಬಹಿಷ್ಕಾರ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಕೊಕ್ಕಡ ವಲಯದಲ್ಲಿ ಆನೆ ಹಾವಳಿ ಜೊತೆಗೆ ಚಿರತೆ ಹಾವಳಿಯೂ ಆರಂಭಗೊಂಡಿದೆ ಎಂದು ಗ್ರಾಮಸ್ಥರು ಹೇಳಿದರು. ಸೋಲಾರ್ ಬೇಲಿ ರಚನೆ, ಆನೆ ಕಂದಕ ನಿರ್ಮಾಣ, ಪರಿಹಾರದ ಬದಲು ಆನೆಗಳ ಸ್ಥಳಾಂತರ ಸೇರಿದಂತೆ ಗ್ರಾಮಸ್ಥರು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಘವೇಂದ್ರ ನಾಯಕ್ ಬರ್ಗುಳ, ಕೃಷ್ಣ ಭಟ್ ಹಿತ್ತಿಲು, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪೂರ್ಣಾಕ್ಷ, ಅರವಿಂದ್ ಕುಡ್ವ, ಜೋಮೆಟ್ ಮ್ಯಾಥ್ಯು, ಪ್ರಮೋದ್ ನಾಯರ್, ಶ್ರೀಧರ್ ಹತ್ಯಡ್ಕ, ಜೋನ್ಸನ್ ಕೌಕ್ರಾಡಿ, ಸೇಸಪ್ಪ ಅಂತ್ರಳಿಕೆ ಸೇರಿದಂತೆ ಹಲವು ಪ್ರಮುಖರು ಸಲಹೆ ಸೂಚನೆ ನೀಡಿದರು. ಜಯರಾಮ ನೆಲ್ಲಿತ್ತಾಯ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ನೈಮಿಷ ವಂದಿಸಿದರು. ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ, ಕೊಕ್ಕಡ, ನಿಡ್ಲೆ, ಉದನೆ, ಶಿರಾಡಿ, ನೆಲ್ಯಾಡಿ, ಪಟ್ರಮೆ, ಕಳೆಂಜ, ಪುದುವೆಟ್ಟು ಹಾಗೂ ಕೌಕ್ರಾಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಸಭೆಯಲ್ಲಿ ಭಾಗವಹಿಸಿದ್ದರು. ಕೊಕ್ಕಡ ಹಾಗೂ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್, ಕೊಕ್ಕಡ ಶ್ರೀರಾಮ ಸೇವಾ ಮಂದಿರದ ಸಹಯೋಗದಲ್ಲಿ ಸಭೆ ನಡೆಯಿತು.

5 ಪ್ರಮುಖ ನಿರ್ಣಯ ಅಂಗೀಕಾರ
* ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿಗುರುತು ಮಾಡಬೇಕು
* ಶಾಸಕರ ಜೊತೆಯಾಗಿ ಜಿಲ್ಲಾಧಿಕಾರಿಗಳ ಬೇಟಿ ಮಾಡಿ ಬಾಧಿತ ಪ್ರದೇಶದಲ್ಲಿ ರೈತರ ಸಭೆ ನಡೆಸಲು ಮನವಿ
* ಆನೆ ದಾಳಿಯಿಂದ ಮೃತಪಟ್ಟರೆ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ
* ಟಾಸ್ಕ್‌ಪೋರ್ಸ್ ರಚನೆ ಮಾಡಬೇಕು
* ಕೃಷಿ ಹಾನಿಗೆ 10 ಪಟ್ಟು ಪರಿಹಾರ ನೀಡಬೇಕು

LEAVE A REPLY

Please enter your comment!
Please enter your name here