







ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪುತ್ತೂರಿನ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ, ತಿಂಗಳ ಸಂಕ್ರಮಣ, ಮಹಾಪೂಜೆ ಮುಂತಾದ ಧಾರ್ಮಿಕ ಹಬ್ಬವನ್ನು ಅತ್ಯಂತ ಸಡಗರ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆ.17ರಂದು ಶ್ರೀ ಕ್ಷೇತ್ರದಲ್ಲಿ ಆಚರಿಸಲಾಯಿತು.


ನಾಗರಪಂಚಮಿ ಅಂಗವಾಗಿ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ತಂಬಿಲ ಸೇವೆಗಳು ನೆರವೇರಿದವು. ತಿಂಗಳ ಸಂಕ್ರಮಣ, ರಕ್ತೇಶ್ವರಿ, ಧೂಮಾವತಿ ದೈವಗಳಿಗೆ ತಂಬಿಲ, ಮಾಡಾಂತಾರು ಮೈಲ್ (ಗೋಲೆಕ್ಸ್ ಫ್ಯಾಕ್ಟರಿ ಬಳಿ) ಕಲ್ಕುಡ ಕಲ್ಲುರ್ಟಿ, ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲ್ಪಟ್ಟಿತು. ಅರ್ಚಕರಾದ ವೆಂಕಟೇಶ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿದವು. ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ನಾಗದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.




ಭಕ್ತರು ನಾಗದೇವರಿಗೆ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ನೆರವೇರಿಸಿ, ಅರಿಶಿನ ಪುಡಿ ಹಾಗೂ ವಿವಿಧ ಬಗೆಯ ಹೂವುಗಳನ್ನು ಸಮರ್ಪಿಸಿ ಪ್ರಾರ್ಥಿಸಿದರು. ನಾಗದೇವರ ಅನುಗ್ರಹದಿಂದ ಕುಟುಂಬಕ್ಕೆ ಸುಖ, ಶಾಂತಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಭಕ್ತರು ಪ್ರಾರ್ಥಿಸಿದರು. ನಾಗರಪಂಚಮಿ ಪ್ರಯುಕ್ತ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣಗೊಂಡಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ಸೂರಪ್ಪ ಗೌಡ ಸಂಜಯನಗರ, ಚಂದ್ರಶೇಖರ ಕಲ್ಲಗುಡ್ಡೆ, ಮಹೇಶ್ ಕಾವೇರಿಕಟ್ಟೆ, ರಕ್ಷಿತ್ ನಾಯ್ಕ್ ದರ್ಬೆ, ವಸಂತ ನಾಯ್ಕ ಬೆದ್ರಾಳ, ಲಲಿತಾ ಕೆ, ರೇಖಾ ಯಶೋಧರ, ಸಿಬ್ಬಂದಿ ಭರತ್, ಗುಮಾಸ್ತ ರಘುನಾಥ್ ಪೂಜಾರಿ ಸಹಕರಿಸಿದರು.
ಆ.18: ತಿಂಗಳ ಷಷ್ಠಿ ಸಮಾರಾಧನೆ
ಶ್ರೀ ಕ್ಷೇತ್ರದಲ್ಲಿ ಆ.18 ರಂದು ತಿಂಗಳ ಷಷ್ಠಿ ಸಮಾರಾಧನೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರಗಲಿದೆ. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಛೇರಿ ಅಥವಾ 7795711499 ನಂಬರಿಗೆ ಸಂಪರ್ಕಿಸಬೇಕಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.










