ಹನೂರು ಎನ್‌ಕೌಂಟರ್ ಪ್ರಕರಣ ಉದ್ದೇಶ ಪೂರ್ವಕ ಹತ್ಯೆ..?

0

ತಪ್ಪು ಮಾಡಿದ ಅಧಿಕಾರಿಗಳನ್ನು ಜೈಲಿಗಟ್ಟಿ… ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಪುತ್ತೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಬಡವರು ಬಲಿಯಾದ ಘಟನೆ ಉದ್ದೇಶಪೂರ್ವಕ ಹತ್ಯೆಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದರು.


ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಘಟನೆಯ ಕುರಿತು ಅರಣ್ಯ ಇಲಾಖೆ ಹಾಗೂ ಗೃಹ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿರುವುದರಿಂದ ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಸರ್ಕಾರ ಮೃತರ ಕುಟುಂಬಕ್ಕೆ ಶಾಶ್ವತ ಪರಿಹಾರ ಹಾಗೂ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.


ಘಟನೆಯ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ ನೇರವಾಗಿ ಗುಂಡು ಹಾರಿಸಿ ಸಾವಿಗೆ ಕಾರಣವಾಗಿರುವುದು ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು. ಅನಿವಾರ್ಯ ಪರಿಸ್ಥಿತಿಯಲ್ಲಿ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಬಹುದಾಗಿದ್ದರೂ ಎದೆಗೆ ಗುಂಡು ಹಾರಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರ ನಡುವಿನ ವೈಷಮ್ಯದ ಹಿನ್ನೆಲೆಯಲ್ಲೇ ಈ ಘಟನೆ ನಡೆದಿರುವ ಸಾಧ್ಯತೆಗಳಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.


ಇದೇ ವೇಳೆ ರಾಜ್ಯದ ರೈತರು ಕಾಡುಪ್ರಾಣಿಗಳ ಕಾಟದಿಂದ ಬೆಳೆ ಮತ್ತು ಜೀವ ರಕ್ಷಣೆಗಾಗಿ ಹೊಂದಿರುವ ಸಾವಿರಾರು ಪರವಾನಗಿ ಪಡೆದ ಬಂದೂಕುಗಳ ನವೀಕರಣ ಪ್ರಕ್ರಿಯೆಯಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಅವರು ಪ್ರಶ್ನಿಸಿದರು. ಮತ್ತೊಂದೆಡೆ ಅರಣ್ಯ ಇಲಾಖೆಗೆ ಡ್ರೋನ್, ನೈಟ್‌ವಿಷನ್ ಕ್ಯಾಮೆರಾ ಸೇರಿದಂತೆ ಆಧುನಿಕ ತಂತ್ರಜ್ಞಾನ ಮತ್ತು ಸೂಕ್ತ ತರಬೇತಿ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.


ಎನ್‌ಕೌಂಟರ್ ಬಳಿಕ ಆಕ್ರೋಶಗೊಂಡ ಜನರು ಅರಣ್ಯ ಇಲಾಖೆಯ ಒಂಬತ್ತು ವಸತಿಗೃಹಗಳಿಗೆ ಬೆಂಕಿ ಹಚ್ಚಿರುವ ಘಟನೆ ಕಾನೂನು ಸುವ್ಯವಸ್ಥೆಯ ಹದಗೆಟ್ಟ ಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದರು.

LEAVE A REPLY

Please enter your comment!
Please enter your name here