ನೆಲ್ಯಾಡಿ ಜೇಸಿಐನಿಂದ ಸಾರ್ವಜನಿಕ ಕ್ರೀಡೋತ್ಸವ – 2026

0

ನೆಲ್ಯಾಡಿ: ನೆಲ್ಯಾಡಿ ಜೇಸಿಐ ವತಿಯಿಂದ ಆಯೋಜಿಸಲಾದ ‘ಸಾರ್ವಜನಿಕ ಕ್ರೀಡೋತ್ಸವ–2026’ ಕಾರ್ಯಕ್ರಮವು ಆ.16ರಂದು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆಯಿತು.

ಭಾರತ ಜೇಸಿಐ ವಲಯ 15ರ ಉಪಾಧ್ಯಕ್ಷ ಜಿತೇಶ್ ಪಿರೇರಾ ಅವರು ದೀಪ ಬೆಳಗಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಜೇಸಿಐ ಸಂಸ್ಥೆ ಆರಂಭವಾಗಿ 111 ವರ್ಷಗಳಾಗಿದ್ದು, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ. ಯುವಜನರಲ್ಲಿ ವ್ಯಕ್ತಿತ್ವವನ್ನು ರೂಪಿಸುವುದು, ನಾಯಕತ್ವ ಗುಣಗಳನ್ನು ಬೆಳೆಸುವುದು ಹಾಗೂ ಸಮಾಜಕ್ಕೆ ಉತ್ತಮ ನಾಯಕರನ್ನು ರೂಪಿಸುವಲ್ಲಿ ಜೇಸಿಐ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.


ನೆಲ್ಯಾಡಿ ಜೇಸಿಐ ಸಂಸ್ಥೆಯು ಅಬ್ರಹಾಂ ವರ್ಗೀಸ್ ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ವಹಿಸಿದ್ದರು. ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯಕುಮಾರ್ ದೋಂತಿಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಹಾಗೂ ನೆಲ್ಯಾಡಿ–ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್. ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ನೆಲ್ಯಾಡಿ ಜೇಸಿಐ ನಿಕಟಪೂರ್ವಾಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಮಹಿಳಾ ಜೇಸಿ ಅಧ್ಯಕ್ಷೆ ನವ್ಯಪ್ರಸಾದ್, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಹಾಗೂ ದೀಪಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ನೆಲ್ಯಾಡಿ ಗಾಂಧಿ ಮೈದಾನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಗಣ್ಯರು ಹಾಗೂ ಜೇಸಿಐ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು. ಬಳಿಕ ಇತ್ತೀಚೆಗೆ ನಿಧನರಾದ ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜೇಸಿವಾಣಿ ರೇಷ್ಮಾ ವಾಚಿಸಿದರು. ಜೇಸಿ ಶ್ರೇಯ ಶೆಟ್ಟಿ ವಂದಿಸಿದರು. ಜೇಸಿಐನ ಪೂರ್ವಾಧ್ಯಕ್ಷರು, ಸದಸ್ಯರು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಪುರುಷರು, ಮಹಿಳೆಯರು ಹಾಗೂ ವಿವಿಧ ವಯೋಮಾನದ ಸಾರ್ವಜನಿಕರು ಉತ್ಸಾಹದಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು. ಕ್ರೀಡಾಕೂಟದ ನಿರೂಪಣೆಯನ್ನು ಅಂತರಾಜ್ಯ ಮಟ್ಟದ ಕ್ರೀಡಾ ನಿರೂಪಕ ಸುರೇಶ್ ಪಡಿಪಂಡ ಅವರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here