ಎವಿಜಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ನಿವೃತ್ತ ಯೋಧ ವಿಜಯಕುಮಾರ್ ಸನ್ಮಾನ

0

ಪುತ್ತೂರು: ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ನಡೆಯಿತು.ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ರಾಷ್ಟ್ರಧ್ವಜರೋಹಣ ಮಾಡಿದರು.

ಸ್ಕೌಟ್-ಗೈಡ್ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವೃಂದ, ಪೋಷಕ ವೃಂದ, ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಭವಿತ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ನೊಂದಿಗೆ ಪಥಸಂಚಲನ ನಡೆಸಿದರು.ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತದ ಅರಸೇನಾಪಡೆಯ ನಿವೃತ್ತ ಹವಾಲ್ದಾರ್ ವಿಜಯಕುಮಾರ್.ಎನ್.ಆರ್. ಹಾಗೂ ಅವರ ತಾಯಿ ಯಶೋಧ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಜಯಕುಮಾರ್ ಮಾತನಾಡಿ ದೇಶ ಮತ್ತು ನಾವು ಯಾವ ರೀತಿಯಲ್ಲಿ ಅನ್ಯೋನ್ಯವಾಗಿರಬೇಕು, ದೇಶಕ್ಕಾಗಿ ನಾವು ಯಾವ ಸೇವೆಯನ್ನು ಮಾಡಬೇಕು ಎಂಬುದಾಗಿ ತಿಳಿಸಿ ಸೇವೆಗಾಗಿ ಪಣತೊಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಕೀಲರು, ಸಮಾಜ ಸೇವಕರು ಹಾಗೂ ಕೃಷಿಕ ಯತೀಶ್ ಆರ್ವಾರ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ವಿವರಿಸಿದರು. ಭಾರತದಂತಹ ಪುಣ್ಯಭೂಮಿಯಲ್ಲಿ ಜನಿಸಿರುವ ನಾವು ಧನ್ಯರು. 2047ಕ್ಕೆ ದೇಶವನ್ನು ಪ್ರಪಂಚದ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಾವೆಲ್ಲ ಪ್ರಯತ್ನಿಸೋಣ. ಮುಂದಿನ ಪ್ರಜ್ಞಾವಂತ ನಾಗರಿಕರಾಗಿರುವ ಇಂದಿನ ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದೊಂದಿಗೆ ದೇಶ ಕಟ್ಟುವ ಕೆಲಸವನ್ನು ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆ, ಪ್ರಧಾನಕಾರ್ಯದರ್ಶಿ ಹಾಗೂ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ ದಿನದ ಮಹತ್ವವನ್ನು ತಿಳಿಸಿ ಶುಭಾಶಯ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಎ.ವಿ.ನಾರಾಯಣ ವಹಿಸಿ ಶಾಲೆಯ ಧ್ಯೇಯೋದ್ದೇಶ, ವಿದ್ಯಾರ್ಥಿಗಳ ಜವಾಬ್ದಾರಿ ಹಾಗೂ ಪೋಷಕರ ಪ್ರಯತ್ನದ ಬಗ್ಗೆ ತಿಳಿಸಿ ಶುಭಾಶಯ ಕೋರಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ನರೇಂದ್ರ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶೀನಪ್ಪ ಕುಲಾಲ್, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಮಲುವೇಳು, ವಿದ್ಯಾರ್ಥಿ ಸಂಘದ ನಾಯಕ ತನ್ವಿತ್ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಹರ್ಷಿತಾ ಪ್ರಣಮ್ಯ ಯುಕ್ತ ಪ್ರಾರ್ಥನೆ ಹಾಡಿದರು.

ವಿದ್ಯಾರ್ಥಿ ವಿಖ್ಯಾತ್ ಸಂವಿಧಾನದ ಪೂರ್ವಪೀಠಿಕೆ ವಾಚಿಸಿದರು. ಶಿಕ್ಷಕಿ ಕೃಪಾಶ್ರೀ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಅಮರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತಾ ಸನ್ಮಾನ ಪತ್ರ ವಾಚಿಸಿ, ಹರ್ಷಿತಾ ವಂದನಾರ್ಪಣೆ ಗೈದರು. ಸುನಯನ ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here