







ಕಡಬ: ಅಲಂಕಾರು ಗ್ರಾಮದ ಮುತ್ತುಗಿರಿಯಲ್ಲಿ ಪಟ್ಟ ಜಮೀನಿಗೆ ಅಕ್ರಮ ಪ್ರವೇಶ ಮಾಡಿ 5 ಹಲಸು ಮತ್ತು 6 ಆಕೆಶಿಯಾ ಮರಗಳನ್ನು ಕಡಿದು ಮನೆಗೆ ಹಾನಿ ಮಾಡಿದ ಆರೋಪದ ಮೇಲೆ 5 ಜನರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸೋಮಪ್ಪ ಪೂಜಾರಿ ಅವರು ನೀಡಿದ ದೂರಿನಂತೆ ಸುರೇಶ ಗೌಡ, ಜಯಪ್ರಕಾಶ್ ಗೌಡ, ಮೋಹನ ಗೌಡ, ಅಶೋಕ ಗೌಡ, ಕುಶಾಲಪ್ಪ ಗೌಡ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಅ.ಕ್ರ: 98/2026, ಕಲಂ: 324(3), 329(4), 190 BNSರಂತೆ ಪ್ರಕರಣ ದಾಖಲಾಗಿದೆ.



ಸೋಮಪ್ಪ ಪೂಜಾರಿ ನೀಡಿದ ದೂರಿನಲ್ಲಿ ʼಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾಗಿದ್ದು, ಪ್ರಸ್ತುತ ರಾಮಕುಂಜ ಗ್ರಾಮದ ಸಂಪ್ಯಾಡಿಯಲ್ಲಿ ವಾಸವಾಗಿದ್ದೇನೆ .ದಿನಾಂಕ 14-08-2026 ರಂದು ಮಧ್ಯಾಹ್ನ ಊಟಕ್ಕೆ ಮುತ್ತುಗಿರಿಗೆ ಬಂದಾಗ ಪಟ್ಟ ಜಾಗದಲ್ಲಿದ್ದ ಹಲಸು ಮತ್ತು ಆಕೆಶಿಯ ಮರಗಳನ್ನು ಕಡಿದು ಮನೆ ಮೇಲೆ ಬಿದ್ದಿರುವುದು ಕಂಡುಬಂದಿದೆ. ವಿಚಾರಿಸಿದಾಗ ಸುರೇಶ ಗೌಡ, ಜಯಪ್ರಕಾಶ್ ಗೌಡ, ಮೋಹನ ಗೌಡ, ಅಶೋಕ ಗೌಡ, ಕುಶಾಲಪ್ಪ ಗೌಡ ಇವರು ಮರ ಕಡಿದಿರುವುದಾಗಿ ತಿಳಿದುಬಂದಿದೆ.ಆರೋಪಿಗಳು ಅಲಂಕಾರು ಗ್ರಾಮದ ಮುತ್ತುಗಿರಿ ಸರ್ವೆ ನಂಬರ್ 141/1A P1 ರಲ್ಲಿದ್ದ 5 ಹಲಸು ಮರ ಮತ್ತು 6 ಆಕೆಶಿಯಾ ಮರಗಳನ್ನು ಕಡಿದಿದ್ದಾರೆ. ಮರದ ತುಂಡು ಮನೆ ಮೇಲೆ ಬಿದ್ದು 5,000 ರೂಪಾಯಿ ನಷ್ಟ, ಮರ ಕಡಿದ ಪರಿಣಾಮ 50,000 ರೂಪಾಯಿ ನಷ್ಟವಾಗಿದೆ. ಒಟ್ಟು 55,000 ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.










