







ಉಪ್ಪಿನಂಗಡಿ: ಬೆಳೆ ಸಮೀಕ್ಷೆ ನಡೆಸುವ ಕೆಲವು ಕಾರ್ಯಕರ್ತರ ಬೇಜವಾಬ್ದಾರಿಯಿಂದಾಗಿ ಕೆಲವು ಕೃಷಿಕರ ಪಹಣಿ ಪತ್ರಿಕೆಯಲ್ಲಿ ಬೆಳೆ ದಾಖಲಾಗದೇ ಇರುವುದರಿಂದ ಸರಕಾರ ಕೃಷಿಕರ ಬದುಕಿನ ಭದ್ರತೆಗಾಗಿ ಜಾರಿಗೆ ತಂದಿರುವ ಬೆಳೆ ವಿಮೆ ಯೋಜನೆಯ ಪ್ರಯೋಜನದಿಂದ ವಂಚಿತರಾಗುವಂತಾಗಿದೆ ಎಂಬ ದೂರು ವ್ಯಕ್ತವಾಗಿದೆ.


ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಹಲವು ರೈತರು ಬೆಳೆವಿಮೆ ಕಟ್ಟಲು ವಂಚಿತರಾಗಿದ್ದಾರೆ. ರೈತರು ತಮ್ಮ ದಾಖಲೆಗಳೊಂದಿಗೆ ಬೆಳೆ ವಿಮೆ ಕಟ್ಟಲು ತೆರಳಿದರೆ ಪಹಣಿ ಪತ್ರಿಕೆಯಲ್ಲಿ ಬೆಳೆ ದಾಖಲಾಗದೇ ಇರುವುದರಿಂದ ಬೆಳೆ ವಿಮೆ ಕಟ್ಟಲು ಅವರಿಗೆ ಅಸಾಧ್ಯವಾಗಿದೆ. ಇದನ್ನು ಸರಿಪಡಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸುವಂತೆ ತೆರಳಿದರೆ, ಅವರು ಕಂದಾಯ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಬೆಳೆ ಸಮೀಕ್ಷೆ ನಡೆಸಲು ಗ್ರಾಮ ಆಡಳಿತಾಧಿಕಾರಿ ಅಧಿನದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿದ್ದು, ಕೆಲವು ಕಡೆಗಳಲ್ಲಿ ಬೆಳೆ ಸಮೀಕ್ಷೆಗೆ ನೇಮಕವಾದವರು ಎಲ್ಲಾ ರೈತರ ಮನೆಗೆ ಹೋಗಿ ಬೆಳೆ ನಮೂದು ಮಾಡುತ್ತಿಲ್ಲ ಹಾಗೂ ರೈತರ ಕೃಷಿ ಜಮೀನಿಗೆ ಭೇಟಿ ನೀಡದೇ ಎಲ್ಲೋ ಒಂದು ಕಡೆ ನೆಟ್ವರ್ಕ್ ಸಿಗುವ ಸ್ಥಳದಲ್ಲಿ ಕೂತು ಎಲ್ಲಾ ಸರ್ವೆ ನಂಬರ್ಗಳ ಬೆಳೆಗಳನ್ನು ನೈಜವಾಗಿ ಪರಿಶೀಲನೆ ಮಾಡದೇ ತಮ್ಮ ಮೂಗಿನ ನೇರಕ್ಕೆ ಬೆಳೆಗಳನ್ನು ದಾಖಲಿಸುತ್ತಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದರಿಂದಾಗಿ ಕೃಷಿಕರಲ್ಲಿ ಕಾಳು ಮೆಣಸು, ಅಡಿಕೆ ಬೆಳೆ ಇದ್ದರೂ ಅದು ಪಹಣಿಯಲ್ಲಿ ದಾಖಲಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಒಟ್ಟಿನಲ್ಲಿ ಇವರು ಮಾಡಿದ ಎಡವಟ್ಟಿನಿಂದಾಗಿ ನೈಜ ಕೃಷಿಕ ಮಾತ್ರ ಬೆಳೆ ವಿಮೆಗೆ ಅರ್ಹನಾಗಿದ್ದು, ಸಂಕಷ್ಟ ಅನುಭವಿಸುವಂತಾಗಿದೆ.



ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಅವರು, ಬೆಳೆ ವಿಮೆಗಾಗಿ ಕೃಷಿ ಜಮೀನಿನಲ್ಲಿ ಸರ್ವೆ ನಡೆಸಲು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಆದರೆ ಕೆಲವು ಸಿಬ್ಬಂದಿಗಳು ರೈತರ ಕೃಷಿ ಜಮೀನಿಗೆ ತೆರಳಿ ಬೆಳೆ ಸರ್ವೆ ನಡೆಸುತ್ತಿಲ್ಲ. ಇದರಿಂದ ರೈತರ ಪಹಣಿ ಪತ್ರಿಕೆಯಲ್ಲಿ ಬೆಳೆ ದಾಖಲಾಗುತ್ತಿಲ್ಲ. ಇದನ್ನು ಸರಿಪಡಿಸಲು ಕೃಷಿ ಇಲಾಖೆಗೆ ತೆರಳಿದರೆ ಅವರು ಗ್ರಾಮ ಆಡಳಿತಾಽಕಾರಿಯ ಅಽನದಲ್ಲಿ ನೇಮಿಸಿದ ಸಿಬ್ಬಂದಿಯ ಲೋಪ ಎಂದು ಹೇಳಿ ನುಣುಚಿಕೊಳ್ಳುತ್ತಾರೆ. ಬೆಳೆ ಸರ್ವೆ ನಡೆಸುವ ಸಿಬ್ಬಂದಿಯ ಬೇಜವಾಬ್ದಾರಿ ನಡೆಯಿಂದಾಗಿ ಹಲವು ಕೃಷಿಕರು ಬೆಳೆ ವಿಮೆಯಿಂದ ವಂಚಿತರಾಗುವಂತಾಗಿದೆ ಎಂದರು.











ಈ ವಿಚಾರದಲ್ಲಿ ಬೆಳೆ ಸಮೀಕ್ಷೆಗಾಗಿ ನೇಮಿಸಿದ ಕಾರ್ಯಕರ್ತರನ್ನು ಬೊಟ್ಟು ಮಾಡುವ ಬದಲು ರೈತರ ಉದಾಸೀನ ಪ್ರವೃತ್ತಿಯನ್ನು ಬೊಟ್ಟು ಮಾಡಿ ಟೀಕಿಸಬೇಕು. ರೈತರು ಸ್ವತಃ ಸಮೀಕ್ಷೆ ಮಾಡಲು ಅವಕಾಶ ಇರುವಾಗ ಅದನ್ನು ಬಳಸಿಕೊಳ್ಳದೆ ಇರುವುದು ಒಂದು ಕಾರಣ. ಬೆಳೆ ಸಮೀಕ್ಷೆಕಾರರನ್ನು ಸಂಪರ್ಕಿಸಿ ತಮ್ಮ ಉಪಸ್ಥಿತಿಯೊಂದಿಗೆ ಸಮೀಕ್ಷೆ ಮಾಡಿಸಲು ಯಾಕೆ ಔದಾಸಿನ್ಯ ಮನೋಭಾವನೆ ⁉️ಈ ರೀತಿ ಔದಾಸಿನ್ಯತೆಯಿಂದಲೇ ಈ ರೀತಿ ಅಪಸವ್ಯಗಳುoಟಾಗುತ್ತವೆ.
ರೈತರೆ ಬೆಳೆ ಸಮೀಕ್ಷೆ ಮಾಡಿ ಕೊಳ್ಳಬೇಕು
ಅವಾಗ ಸರಿ ಆಗುತ್ತೆ