ಇ-ಸ್ವತ್ತು 2.0 ತಂತ್ರಾಂಶದಿಂದ ನಮೂನೆ 11ಎ, 11ಬಿ ಪ್ರಕ್ರಿಯೆ ವಿಳಂಬ :  ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಕ್ಷೇಪ

0

ಪುತ್ತೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅತ್ಯಂತ ಅಗತ್ಯವಿರುವ ನಮೂನೆ 11ಎ ಹಾಗೂ 11ಬಿ ಪ್ರಕ್ರಿಯೆಗಳು ‘ಇ-ಸ್ವತ್ತು 2.0’ ತಂತ್ರಾಂಶ ಜಾರಿಯಾದ ಬಳಿಕ ತೀವ್ರ ವಿಳಂಬವಾಗುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

​ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆ (ಸಂಖ್ಯೆ – 410) ಮೂಲಕ ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದ ಅವರು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಇ-ಸ್ವತ್ತು 2.0 ಅರ್ಜಿಗಳ ಅಂಕಿ-ಅಂಶ ಹಾಗೂ ಬಾಕಿ ವಿವರ:

ಸರ್ಕಾರ ನೀಡಿರುವ ಮಾಹಿತಿಯಂತೆ, ದಿನಾಂಕ 01-12-2025 ರಿಂದ ಜಾರಿಗೆ ಬಂದ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಅರ್ಜಿಗಳ ಸ್ಥಿತಿಗತಿ ಹೀಗಿದೆ: ನಮೂನೆ 11ಎ: ಸ್ವೀಕೃತವಾದ ಒಟ್ಟು ಅರ್ಜಿಗಳು: 1,84,222, ಅನುಮೋದನೆಗೊಂಡ ಅರ್ಜಿಗಳು: 1,53,795, ಬಾಕಿ ಉಳಿದಿರುವ ಅರ್ಜಿಗಳು: 23,802

​ತಿರಸ್ಕೃತ ಅರ್ಜಿಗಳು: 639 (ದಕ್ಷಿಣ ಕನ್ನಡ: 253 – ಉಳ್ಳಾಲ ತಾಲೂಕಿನಲ್ಲಿ ಗರಿಷ್ಠ 57; ಉಡುಪಿ: 55 – ಕಾರ್ಕಳ ತಾಲೂಕಿನಲ್ಲಿ ಗರಿಷ್ಠ 35)

​ನಮೂನೆ 11ಬಿ:
ಸ್ವೀಕೃತವಾದ ಒಟ್ಟು ಅರ್ಜಿಗಳು: 15,936
ಅನುಮೋದನೆಗೊಂಡ ಅರ್ಜಿಗಳು: 5,151
ಬಾಕಿ ಉಳಿದಿರುವ ಅರ್ಜಿಗಳು: 8,892 (ದಕ್ಷಿಣ ಕನ್ನಡ: 65, ಉಡುಪಿ: 436)

​ಹೆಚ್ಚುವರಿ ಅನುಮೋದನೆ ಹಂತಗಳಿಂದ ಅನಗತ್ಯ ವಿಳಂಬ:

ಈ ಹಿಂದೆ ನಮೂನೆ 11ಎ ಪ್ರಕ್ರಿಯೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅನುಮೋದನೆಯೇ ಮುಖ್ಯವಾಗಿತ್ತು. ಆದರೆ ಇ-ಸ್ವತ್ತು 2.0 ಬಂದ ಮೇಲೆ ತಾಲೂಕು ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳ (EO) ಕಡ್ಡಾಯ ಅನುಮೋದನೆ ಸೇರ್ಪಡೆಗೊಳಿಸಿರುವುದು ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿದೆ. ಅದೇ ರೀತಿ, ನಮೂನೆ 11ಬಿ ಅರ್ಜಿಗಳ ಅನುಮೋದನಾ ಅಧಿಕಾರವನ್ನು ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (CEO) ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಸಣ್ಣಪುಟ್ಟ ಕೆಲಸಗಳಿಗೂ ಗ್ರಾಮೀಣ ಜನತೆ ತಾಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಅಲೆಯುವಂತಾಗಿದೆ.

​ಕಿಶೋರ್ ಕುಮಾರ್ ಪುತ್ತೂರು ಅವರ ಪ್ರಮುಖ ಬೇಡಿಕೆಗಳು:

​ಇ-ಸ್ವತ್ತು 2.0 ತಂತ್ರಾಂಶದಲ್ಲಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳನ್ನು ತಕ್ಷಣ ಸರಿಪಡಿಸಬೇಕು. ನಮೂನೆ 11ಎ ಮತ್ತು 11ಬಿ ಅರ್ಜಿಗಳ ಅನುಮೋದನೆಗೆ ವಿಧಿಸಿರುವ ಹೆಚ್ಚುವರಿ (EO/CEO) ಹಂತಗಳನ್ನು ರದ್ದುಗೊಳಿಸಿ, ಹಳೆಯಂತೆ PDO ಮಟ್ಟದಲ್ಲೇ ಅನುಮೋದನೆ ನೀಡುವ ವ್ಯವಸ್ಥೆ ಮರುಸ್ಥಾಪಿಸಬೇಕು. ​ಬಾಕಿ ಉಳಿದಿರುವ ಸಾವಿರಾರು ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿಶೇಷ ಕಾರ್ಯಾಚರಣೆ (Drive) ಹಮ್ಮಿಕೊಳ್ಳಬೇಕು.

​”ಡಿಜಿಟಲ್ ತಂತ್ರಾಂಶವು ಸಾರ್ವಜನಿಕರ ಕೆಲಸವನ್ನು ಸರಳಗೊಳಿಸಬೇಕೇ ಹೊರತು, ಕಚೇರಿಗಳಿಗೆ ಅಲೆದಾಡಿಸುವಂತಾಗಬಾರದು. ಸರ್ಕಾರದ ‘ಜನಸ್ನೇಹಿ ಆಡಳಿತ’ದ ಪರಿಕಲ್ಪನೆಗೆ ಧಕ್ಕೆಯಾಗದಂತೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here