







ಬೆಟ್ಟಂಪಾಡಿ: ದೂಮಡ್ಕ ಜೋಗಿಮೂಲೆ ಸೀರೆ ಹೊಳೆಯಲ್ಲಿ ಈಜಿ ಸಾಹಸ ತೋರಿ ಕಡಿದು ಬಿದ್ದ ವಿದ್ಯುತ್ ಲೈನ್ ಮರುಸಂಪರ್ಕ ಮಾಡಿಕೊಟ್ಟ ಬೆಟ್ಟಂಪಾಡಿ ಮೆಸ್ಕಾಂ ಪವರ್ ಮ್ಯಾನ್ಗಳಿಗೆ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಆ.19ರಂದು ನಡೆಯಿತು.



ಬೆಟ್ಟಂಪಾಡಿ ಪವರ್ ಮ್ಯಾನ್ ಗಳಾದ ಬಂದೇನವಾಜ್, ಪ್ರವೀಣ, ಬಸವರಾಜ್ ರವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ರೈ ಬೈಲಾಡಿ, ಸತೀಶ್ ರೈ ಕಟ್ಟಾವು ರವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಶಾಲಾ ಶ್ರೀ ಕೃಷ್ಣಾಷ್ಟಮಿ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ ಉಪಸ್ಥಿತರಿದ್ದರು.




ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ರವರು ಮಾತನಾಡಿ ‘ಈ ಭಾಗದಲ್ಲಿ ವಿದ್ಯುತ್ ಲೈನ್ ಗೆ ಅನೇಕ ಸಮಸ್ಯೆಗಳಿದ್ದವು. ಅಂತಹ ಸಂದರ್ಭದಲ್ಲಿ ತಕ್ಷಣ ಸ್ಪಂದನೆ ನೀಡಿ ಜೆಇಇ ಪುತ್ತು ಮತ್ತು ಅವರ ತಂಡ ಕಾರ್ಯನಿರ್ವಹಿಸಿ ಸಮಸ್ಯೆಗೆ ಪರಿಹಾರ ನೀಡುತ್ತಿದ್ದರು. ಮೂವರು ಪವರ್ ಮ್ಯಾನ್ಗಳು ಸಾಹಸ ತೋರಿ ಗೌರವದ ಕೆಲಸ ನಿರ್ವಹಿಸಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಮುಖ್ಯ ಎಂದು ಭಾವಿಸಿದ ಇಲಾಖೆ ಅವರಿಗೆ ಪ್ರೋತ್ಸಾಹ ನೀಡಿದೆ’ ಎಂದು ಹೇಳಿ ಶಾಲಾ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಶಾಲಾ ಮುಖ್ಯಗುರು ರಾಜೇಶ್ ಎನ್. ರವರು ಮಾತನಾಡಿ ‘ಪವರ್ಮ್ಯಾನ್ ಗಳು ನಮ್ಮಲ್ಲಿ ಪವರ್ ತುಂಬಿದ್ದಾರೆ. ಯಾವುದೇ ಕಾರ್ಯ ನಿಷ್ಠೆಯಿಂದ ಆದಾಗ ಅದನ್ನು ಸಮಾಜ ಗೌರವಿಸುತ್ತದೆ. ಈ ಪವರ್ಮ್ಯಾನ್ ಗಳು ಮಾಡಿದ ಕೆಲಸ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಕೆಲಸ. ಇವರ ಶ್ರಮ, ಕೆಲಸದ ಬಗ್ಗೆ ನಮಗೆ ಅರಿವು ಮೂಡಬೇಕೆಂಬ ಹಿನ್ನೆಲೆಯಲ್ಲಿ ಶಾಲಾ ವತಿಯಿಂದ ಅವರನ್ನು ಅಭಿನಂದಿಸಲು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಶಾಲೆ ಹೆಮ್ಮೆಪಡುತ್ತದೆ’ ಎಂದರು.
ಇವರ ಜೊತೆ ಕೆಲಸ ಮಾಡೋದು ನನ್ನ ಸೌಭಾಗ್ಯ- ಪುತ್ತು ಜೆ.
ಸನ್ಮಾನದ ವೇಳೆ ಉಪಸ್ಥಿತರಿದ್ದು ಗೌರವ ಸ್ವೀಕರಿಸಿದ ಮೆಸ್ಕಾಂ ಬೆಟ್ಟಂಪಾಡಿ ಶಾಖಾಧಿಕಾರಿ ಕಿರಿಯ ಇಂಜಿನಿಯರ್ ಪುತ್ತು ಜೆ. ರವರು ಮಾತನಾಡಿ ‘ನಡೆದಿರುವ ಘಟನೆಯನ್ನು ವಿವರಿಸಿದರು. ಮಳೆಗೆ ಹೊರಬಾರದ ಸ್ಥಿತಿಯಲ್ಲಿ ಹರಿಯುವ ನೀರಿನಲ್ಲಿ ಈ ಸಾಹಸ ತೋರಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಅನೇಕ ಸಮಸ್ಯೆಗಳು ನಮ್ಮ ಇಲಾಖೆಯಲ್ಲಿ ಬಂದಾಗ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ಇಂತಹ ವರ್ಕರ್ಸ್ ಜೊತೆ ನಾನು ಕೆಲಸ ಮಾಡುತ್ತಿರುವುದು ನನ್ನ ಸೌಭಾಗ್ಯ’ ಎಂದರು. ಶಿಕ್ಷಕಿ ಭವ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಮೆಸ್ಕಾಂ ಪವರ್ಮ್ಯಾನ್ಗಳಾದ ಮಂಜುನಾಥ್, ಸುನೀಲ್, ಸಿದ್ರಾಮೇಶ್ ಉಪಸ್ಥಿತರಿದ್ದರು. ಶಿಕ್ಷಕ ವೃಂದ ಸಹಕರಿಸಿದರು. ವಿದ್ಯಾರ್ಥಿಗಳು ಪಾಲ್ಗೊಂಡು ಪವರ್ಮ್ಯಾನ್ ಗಳಿಗೆ ಜೈಕಾರ ಹಾಕಿದರು.
ಮೆರವಣಿಗೆಯಲ್ಲಿ ಸ್ವಾಗತ
ಕಾರ್ಯಕ್ರಮಕ್ಕೆ ಮೊದಲು ಸನ್ಮಾನಿತರನ್ನು ಬೆಟ್ಟಂಪಾಡಿ ಮೆಸ್ಕಾಂ ಕಚೇರಿ ಯಿಂದ ಬ್ಯಾಂಡ್ ಮೆರವಣಿಗೆಯಲ್ಲಿ ಶಾಲೆಯವರೆಗೆ ಕರೆತರಲಾಯಿತು.










