







ಪುತ್ತೂರು: ದರ್ಬೆಯಲ್ಲಿ ನಡೆದ ಗ್ರಾಹಕ ಮತ್ತು ಮಾಲಕಿಯ ಮಧ್ಯೆ ನಡೆದ ಗಲಾಟೆ ಕೋಮು ಭಾವನೆಯಿಂದ ಆಗಿರುವಂತದಲ್ಲ. ಆದರೂ ಈ ಘಟನೆಯ ಕುರಿತು ಬಿಜೆಪಿ ನಾಯಕರ ಹೇಳಿಕೆಗಳು, ಬಿಜೆಪಿ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾದ ಪೇಜ್ ನಲ್ಲಿರುವ ಬರಹಗಳನ್ನು ನೋಡಿದಾಗ ಬಿಜೆಪಿ, ದರ್ಬೆ ಪ್ರಕರಣದಲ್ಲಿ ಬೆಂಕಿ ಹಚ್ಚಿ ಚಳಿ ಕಾಯಿಸಲು ಹೊರಟಿದೆ ಎಂದು ಕಾಂಗ್ರೆಸ್ ದ ಕ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.


ಘಟನೆಯ ಸಂದರ್ಭ ಸದಾಶಿವ ಪೈಯವರ ರಕ್ಷಣೆ ನಿಂತದ್ದು ಕೂರ್ನಡ್ಕ ಮತ್ತು ದರ್ಬೆ ಭಾಗದ ಮುಸ್ಲಿಂ ಹುಡುಗರು. ರಾಜಿ ಪಂಚಾತಿಗೆಯಲ್ಲಿ ಮುಗಿಯುವಂತ ಈ ಪ್ರಕರಣದಲ್ಲಿ ಗಾಳಿ ಸುದ್ದಿಯನ್ನು ಕೇಳಿ ಆವೇಶ ಬರಿತರಾಗಿ ಒಂದಿಬ್ಬರು ಹುಡುಗರು ಗಲಾಟೆ ಮಾಡಿದ್ದಾರೆ ವಿನಃ ಬೇರೆ ಯಾವುದೇ ಉದ್ದೇಶ ಅವರಲ್ಲಿ ಇರಲಿಲ್ಲ.
ಆದರೆ ಈ ಘಟನೆ ಮಂದಿಟ್ಟುಕೊಂಡು ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತದೆ. ಆವೇಶ ಭರಿತರಾಗಿ ವರ್ತಿಸಿರುವ ಹುಡುಗರ ವಿರುದ್ಧ ಪೊಲೀಸ್ ನವರು ಈಗಾಗಲೇ ಕೇಸ್ ದಾಖಲಿಸಿರುತ್ತಾರೆ. ಈ ಘಟಣೆಯ ಬಳಿಕ ಹೆದರಿ ಗ್ರಾಹಕ ಮತ್ತು ಮಾಲಕರು ತಮ್ಮ ತಮ್ಮ ರಕ್ಷಣೆಗೋಸ್ಕರ ಪರಸ್ಪರ ಕೌಂಟರ್ ಕೇಸ್ ಕೊಟ್ಟಿರುತ್ತಾರೆ ಹೊರತು ಈ ಗಲಾಟೆ ಕೋಮು ಭಾವನೆಯಿಂದ ಆಗಿರುವಂತದಲ್ಲ .ಇದರಲ್ಲಿ ಎರಡು ಕಡೆಯವರಿಗೂ ಕೋಮು ಉದ್ದೇಶ ಇರಲಿಲ್ಲ. ಈ ಘಟನೆ ನಡೆಯಬಾರದಿತ್ತು ಏನೋ ಕೆಟ್ಟ ಗಳಿಗೆಯಲ್ಲಿ ನಡೆದಿದೆ. ಆದರೆ ಬಿಜೆಪಿ ಈ ಘಟನೆಯ ಬಗ್ಗೆ ಬೆಂಕಿ ಹಚ್ಚಿ ಚಳಿ ಕಾಯಿಸಲು ಹೊರಟಿದೆ ಎಂದು ಆರೋಪಿಸಿದರು. ಈ ಸಣ್ಣ ಖಾಸಗಿ ಘಟನೆ ಇಟ್ಟುಕೊಂಡು ಕೋಮು ಗಲಭೆ ನಡೆಸುವ ದುರುದ್ದೇಶದಿಂದ ಪ್ರಚೋದನಕಾರಿ ಪೋಸ್ಟ್ ಗಳನ್ನು ವೈರಲ್ ಮಾಡುತ್ತಿರುವ ಬಿಜೆಪಿ ಫೇಸ್ ಬುಕ್ ಪೇಜ್ ಮತ್ತು ಪೋಸ್ಟ್ ಕಾರ್ಡ್ ನ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆಯನ್ನು ಆಗ್ರಹ ಮಾಡುತ್ತಿದ್ದೇವೆ ಎಂದು ಆಗ್ರಹಿಸಿದರು.



ಪಿ ಸಿ ಪೈ ಕುಟುಂಬ ಪುತ್ತೂರಿನ ಪ್ರತಿಷ್ಟಿತ ಕುಟುಂಬ:
ಬಿಜೆಪಿ ಬೆಳವಣಿಗೆಗೆ ಕುಟುಂಬದ ಸದಸ್ಯರಾದ ವಾಮನ ಪೈ ಸಹೋದರರ ಕೊಡುಗೆ ಅಪಾರವಿದೆ. ಆದರೆ ಬಿಜೆಪಿ ಈ ಘಟನೆ ಇಟ್ಟುಕೊಂಡು ಪೈ ಕುಟುಂಬಕ್ಕೆ ಅನ್ಯಾಯ ಮಾಡಲು ಹೊರಟಿದೆ. ಪಕ್ಷ ರಾಜಕೀಯ ಬಂದಾಗ ವಾಮನ ಪೈ, ಸಹೋದರರು ಕಟ್ಟಾ ಬಿಜೆಪಿಗರಾಗಿರುತ್ತಿದ್ದರು ಹೊರತು ಯಾವತ್ತೂ ಹಿಂದೂ ಮುಸ್ಲಿಂ ರಾಜಕೀಯ ಮಾಡಿದವರಲ್ಲ ಇವರು ಮುಸ್ಲಿಂ ಸಹಿತ ಎಲ್ಲರಲ್ಲೂ ಸೌಹಾರ್ದತೆಯ ಮನೋಭಾವನೆಯಿಂದ ವ್ಯವಹರಿಸುತ್ತಿದ್ದರು. ಈ ಕುಟುಂಬದ ಡಾ. ಗೋಪಿನಾಥ್ ಪೈ ಪ್ರಖ್ಯಾತ ವೈದ್ಯರು. ಇವರು ತನ್ನ ಗಿರಿಜಾ ಕ್ಲಿನಿಕ್ ನಲ್ಲಿ ಜಾತಿ ಧರ್ಮ ನೋಡದೆ ಎಷ್ಟೋ ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಿದಂತವರು. ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ಸದಾಶಿವ ಪೈ ಪುತ್ತೂರು ಟೌನ್ ಕೋ ಓಪರೆಟಿವ್ ಬ್ಯಾಂಕ್ ನ ನಿರ್ದೇಶಕರಾಗಿದ್ದರು ಟೌನ್ ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ಅವ್ಯವಹಾರ ಬಗ್ಗೆ ಪ್ರಶ್ನಿಸಿದರು ಎಂಬ ಕಾರಣಕ್ಕೆ ಬಿಜೆಪಿ ಕಳೆದ ಬ್ಯಾಂಕ್ ಚುನಾವಣೆಯಲ್ಲಿ ಸದಾಶಿವ ಪೈ ಗೆ ಸ್ಪರ್ಧಿಸಲು ಅವಕಾಶ ಕೊಡದೆ ವಂಚಿಸಿತ್ತು ಆ ಚುನಾವಣೆಯಲ್ಲಿ ಸದಾಶಿವ ಪೈ ಬಿಜೆಪಿ ಬಂಡುಕೋರನಾಗಿ ಸ್ಪರ್ಧಿಸಿ ಬಿಜೆಪಿಗೆ ನಡುಕ ಹುಟ್ಟಿಸಿದ್ದರು ಸದಾಶಿವ ಪೈಯ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ನಾಯಕರು ಒಳಗೊಳಗೆ ಖುಷಿ ಪಟ್ಟು ಎದುರಿಗೆ ಈಗ ಅನುಕಂಪದ ನಾಟಕವಾಡುತ್ತಿದ್ದಾರೆ ಎಂದು ಮಹಮ್ಮದ್ ಆಲಿ ಹೇಳಿದರು.
ವಾಮನ್ ಪೈ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ನಾಯಕ:
ನಳಿನಿಕುಮಾರ್ ಕಟೀಲ್ ಈ ಪ್ರಕರಣವನ್ನು ತಾಲಿಬಾನಿ ಸಂಸ್ಕೃತಿಗೆ ಹೋಲಿಸಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಕೋಮು ಬಣ್ಣ ಹಚ್ಚುವ ಬಿಜೆಪಿಗರನ್ನು ಮುಂದಿನ ದಿನಗಳಲ್ಲಿ ಜನರೇ ಗಟಾರಕ್ಕೆ ಎಸೆಯಲಿದ್ದಾರೆ. ನಳಿನ್ ಕುಮಾರ್, ಸಂಜೀವ ಮಠಂದೂರು, ಕಿಶೋರ್ ಕುಮಾರ್ ಮುಂತಾದವರು ಬಿಜೆಪಿಯಲ್ಲಿ ಜೂನಿಯರ್ ಗಳು. ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ನಾಯಕರಲ್ಲಿ ವಾಮನ ಪೈ ಪ್ರಮುಖರು. ಹಿರಿತನ ಪಕ್ಷ ನಿಷ್ಠೆ ನೋಡಿದರೆ ಬಿಜೆಪಿಯಲ್ಲಿ ವಾಮನ ಪೈ ಯಾವತ್ತೋ ಎಂ ಎಲ್ ಎ ಆಗಬೇಕಿತ್ತು. ಬಿಜೆಪಿಯಲ್ಲಿ ಇಂತವರನ್ನೆಲ್ಲಾ ಮೂಲೆ ಗುಂಪು ಮಾಡಲಾಗಿ ಅನ್ಯಾಯ ಮಾಡಲಾಗಿದೆ ಎಂದು ಮಹಮ್ಮದ್ ಆಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ನಗರ ಅಧ್ಯಕ್ಷ ಅಮರನಾಥ್ ಗೌಡ ಬಪ್ಪಳಿಗೆ, ಕೆಡಿಪಿ ಸದಸ್ಯ ಚಂದ್ರಹಾಸ ರೈ ಬೊಲೋಡಿ, ಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಯಾಕೂಬ್ ಮುಲಾರ್,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಪ್ರಹ್ಲಾದ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.










