ರಸ್ತೆಯಲ್ಲಿ ಮಧ್ಯರಾತ್ರಿಯ ಬಳಿಕ ಗೋಚರವಾಗುವ ಕುಂಬಳಕಾಯಿ, ನಿಂಬೆ ಹಣ್ಣು : ಭಕ್ತನಿಗೆ ಸಂತೃಪ್ತಿ: ನೋಡುಗನಿಗೆ ಅತೃಪ್ತಿ

0

ಉಪ್ಪಿನಂಗಡಿ: ಕೆಲವೊಬ್ಬರ ಧಾರ್ಮಿಕ ನಂಬಿಕೆ, ಆಚರಣೆಗಳು ಕೆಲವೊಬ್ಬರಿಗೆ ಭೀತಿಯುಂಟು ಮಾಡುತ್ತಿದ್ದು, ಇಂತಹ ಆಚರಣೆ ಹಾಗೂ ಭೀತಿಗೆ ಬೊಳ್ಳಾವು ಎಂಬಲ್ಲಿರುವ ಮೂರು ಮಾರ್ಗ ಸೇರುವ ರಸ್ತೆಯು ವೇದಿಕೆಯಾಗಿ ನಿಂತಿದೆ.


ಪ್ರೇತ ಬಾಧೆ, ಕ್ಷುದ್ರ ಶಕ್ತಿಗಳ ನಿವಾರಣೆ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಸುವ ಪೂಜೆಯಲ್ಲಿ ಅದಕ್ಕೆ ಬಳಸಿದ ವಸ್ತುಗಳನ್ನು ಮೂರು ಮಾರ್ಗ ಸೇರುವಲ್ಲಿ ಹಾಕಲು ಹೇಳುತ್ತಾರೆ. ಇಂತಹ ಪೂಜೆಗಳನ್ನು ರಾತ್ರಿಯ ಸಮಯದಲ್ಲಿ ನಡೆಸಲಾಗುತ್ತದೆ. ಪೂಜೆ ಮುಗಿಯುವಾಗ ಮಧ್ಯರಾತ್ರಿಯೂ ಆಗುವುದುಂಟು. ಕೆಲವರು ಇದನ್ನು ದೇವ ಕ್ರಿಯೆಯಲ್ಲಿ ನಡೆಸಿದರೆ, ಇನ್ನು ಕೆಲವರು ಅಸುರ ಕ್ರಿಯೆಯಲ್ಲಿ ನಡೆಸುತ್ತಾರೆ. ಬಳಿಕ ಆ ಪೂಜೆಗೆ ಒಳಪಡಿಸಲಾದ ತೆಂಗಿನಕಾಯಿ, ಕುಂಬಳ ಕಾಯಿ, ಲಿಂಬೆ ಹಣ್ಣು, ಕುಂಕುಮ, ಕುಂಕುಮ ಮಿಶ್ರಿತ ಅಕ್ಕಿಕಾಳು ಹೀಗೆ ಅದಕ್ಕೆ ಯಾವುದು ಒಳಪಡಿಸಲಾಗಿದೆಯೋ ಅದನ್ನು ಪೂಜೆ ಮಾಡಿದವರು ಪೂಜೆ ಮಾಡಿಸಿದವರಲ್ಲಿ ಮೂರು ಮಾರ್ಗ (ರಸ್ತೆ) ಸೇರುವಲ್ಲಿ ಇದನ್ನು ಹಾಕಿ ಬನ್ನಿ. ಹಿಂದುರುಗಿ ನೋಡಬೇಡಿ ಎನ್ನುತ್ತಾರೆ. ಮಧ್ಯರಾತ್ರಿಯ ಸಮಯದಲ್ಲಿ ಪೂಜೆ ಮಾಡಿಸಿದವರು ಪೂಜೆಗೆ ಒಳಪಟ್ಟ ಆ ವಸ್ತುಗಳನ್ನು ಯಾರಿಗೂ ಕಾಣದಂತೆ ಮೂರು ದಾರಿ ಸೇರುವಲ್ಲಿ ಹಾಕಿ ಕೃತಾರ್ಥೆಯ ಭಾವದಿಂದ ಭಾವದೊಂದಿಗೆ ಮನೆಗೆ ನಿರ್ಗವಿಸುತ್ತಾರೆ.


ಸಂಶಯ, ಭೀತಿಗೆ ಕಾರಣ:
ಅವರೇನೋ ಆ ವಸ್ತುಗಳನ್ನು ಅಲ್ಲಿ ಹಾಕಿ ನೆಮ್ಮದಿಯಾಗಿ ಮನೆಗೆ ತೆರಳುತ್ತಾರೆ. ಅವರಿಗೆ ತೃಪ್ತಿಯಾದರೂ, ಉಳಿದವರಿಗೆ ಸಂಶಯ, ಭೀತಿಗೆ ಇದು ಕಾರಣವಾಗುತ್ತದೆ. ಕುಂಬಳಕಾಯಿ, ನಿಂಬೆ ಹಣ್ಣು ಮುಂತಾದ ವಸ್ತುಗಳನ್ನು ವಾಮಾಚಾರಕ್ಕೂ ಬಳಸಲಾಗುತ್ತಿದ್ದು, ಇಂತಹ ವಸ್ತುಗಳು ದಾರಿಯಲ್ಲಿ ಇದ್ದರೆ ಅದನ್ನು ದಾಟಿಕೊಂಡು ಹೋಗಬಾರದು ಎಂಬ ನಂಬಿಕೆಯೂ ಹಲವರಲ್ಲಿದೆ. ಇದನ್ನು ದಾಟಿದವರು ಅದೇ ಭೀತಿಗೊಳಗಾಗುತ್ತಾರೆ. ಸ್ವಲ್ಪ ಮೂಢನಂಬಿಕೆಗಳನ್ನು ಜಾಸ್ತಿಯಾಗಿಯೇ ನಂಬುವವರ ಪಾಡಂತೂ ಹೇಳೋದೇ ಬೇಡ. ಇನ್ನು ಇದನ್ನು ದಾಟಿದವರ ಮನದಲ್ಲಿ ವಾಮಚಾರದ ಶಂಕೆ ಮೂಡಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಇದರ ಸಮಸ್ಯೆಗೆ ಪರಿಹಾರ ಹುಡುಕುವುದೇ ಮತ್ತೆ ಆತನ ಕೆಲಸವಾಗಿರುತ್ತದೆ.


ವೇದಿಕೆಯೊದಗಿಸಿದ ರಸ್ತೆ:
ಪೆರಿಯಡ್ಕದಿಂದ ಪಂಚೇರು ಕಡೆ ಸಾಗುವ ನೇರ ರಸ್ತೆಯಲ್ಲಿ ಬೊಳ್ಳಾವು ಕಡೆ ಅಡ್ಡಕ್ಕೆ ಕವಲೊಡೆಯುವ ರಸ್ತೆಯ ಬಳಿ ಇಂತಹ (ಕು)ಕೃತ್ಯಗಳು ವರ್ಷದಲ್ಲಿ ಐದಾರು ಬಾರಿಯಾದರೂ ನಡೆಯುತ್ತಿವೆ. ಇಲ್ಲಿ ಆಗಾಗ ಕುಂಕುಮ ಬೆರೆತ ಲಿಂಬೆ ಹಣ್ಣು, ಒಡೆದ ಕುಂಬಳಕಾಯಿ, ಒಡೆದ ತೆಂಗಿನಕಾಯಿ ಹೀಗೆ ಇಂತಹ ಕಾರ್ಯಕ್ಕೆ ಒಳಪಡಿಸಲಾದ ವಸ್ತುಗಳು ಕಾಣುತ್ತಿರುತ್ತವೆ. ಪೂಜೆ ಮಾಡಿಸಿದರು ಮಧ್ಯ ರಾತ್ರಿಯ ಸಮಯದಲ್ಲಿ ಎಲ್ಲೆಲ್ಲಿಂದನೋ ಬಂದು ಇಲ್ಲಿ ಅದನ್ನು ಹಾಕಿ ಪರಾರಿಯಾಗಿರುತ್ತಾರೆ. ಒಮ್ಮೆ ಅಟೋ ರಿಕ್ಷಾದಲ್ಲಿ ಇದಕ್ಕಾಗಿಯೇ ದೂರದಿಂದ ಬಂದವರನ್ನು ಸ್ಥಳೀಯರು ಹಿಡಿಯುವ ಪ್ರಯತ್ನ ಮಾಡಿದ್ದಾರಾದರೂ, ಇದರ ಸುಳಿವು ಅರಿತು ಅವರು ಸ್ಥಳೀಯರಿಂದ ತಪ್ಪಿಸಿಕೊಂಡು ಬಚಾವಾಗಿದ್ದರು.


ಈ ರಸ್ತೆಯ ಆಯ್ಕೆ ಯಾಕೆ?:
ಇಂತಹ ಕಾರ್ಯ ಮಾಡುವವರು ಪೆರಿಯಡ್ಕದಿಂದ ಪಂಚೇರು ಹೋಗುವ ನೇರ ರಸ್ತೆಯಲ್ಲಿ ಬೊಳ್ಳಾವು ಕಡೆಗೆ ಕವಲೊಡೆಯುವ ರಸ್ತೆಯ ಜಾಗದ ಬಳಿಕ ಬೊಳ್ಳಾವು ರಸ್ತೆಯನ್ನು ಒಂದು ರಸ್ತೆ ಎಂದು ಪರಿಗಣಿಸಲಾದರೆ. ಪೆರಿಯಡ್ಕದಿಂದ ಬೊಳ್ಳಾವು ರಸ್ತೆಯು ಕವಲೊಡೆಯುವ ಜಾಗದ ತನಕದ ರಸ್ತೆಯನ್ನು ಎರಡನೇ ರಸ್ತೆಯನ್ನಾಗಿ ಪರಿಗಣಿಸುತ್ತಾರೆ. ಬೊಳ್ಳಾವು ಕಡೆ ರಸ್ತೆ ಕವಲೊಡೆಯುವ ಜಾಗದ ಬಳಿಯಿಂದ ಪಂಚೇರು ಕಡೆ ಸಾಗುವ ರಸ್ತೆಯನ್ನು ಮೂರನೇ ರಸ್ತೆ ಎಂದು ಪರಿಗಣಿಸುತ್ತಾರೆ. ಹಾಗಾಗಿ ಇಂತಹ ಕ್ರಿಯೆಗಳಿಗೆ ಈ ಜಾಗವು ವೇದಿಕೆಯಾಗಿದೆ. ಮತ್ತೊಂದು ಇದು ಗ್ರಾಮಾಂತರ ಪ್ರದೇಶಕ್ಕೆ ಹೋಗುವ ರಸ್ತೆಯಾಗಿರುವುದರಿಂದ ಇದು ನಿರ್ಜನ ಪ್ರದೇಶ. ಮಧ್ಯರಾತ್ರಿಯ ಸಮಯದಲ್ಲಿ ಇಲ್ಲಿ ವಾಹನಗಳ ಸಂಚಾರ, ಜನ ಸಂಚಾರ ತೀರಾ ಕಡಿಮೆ. ಅದಕ್ಕಿಂತಲೂ ಮುಖ್ಯವಾಗಿ ಇಲ್ಲಿ ದಾರಿ ದೀಪ ಇಲ್ಲ. ಇದೇ ಕಾರಣಕ್ಕೆ ಇಂತಹ ಕಾರ್ಯಕ್ಕೆ ಈ ರಸ್ತೆಯ ಈ ಜಾಗ ಹೇಳಿ ಮಾಡಿಸಿದಂತಿದೆ. ಅದಕ್ಕಾಗಿ ಈ ಜಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಜಾಗವು ಕೇವಲ ಇದಕ್ಕಾಗಿ ಮಾತ್ರ ಉಪಯೋಗವಾಗುತ್ತಿಲ್ಲ. ನಾಯಿ, ಬೆಕ್ಕಿನ ಮರಿಗಳನ್ನು ಬಿಡಲು ಕೆಲವರು ಈ ಜಾಗವನ್ನು ಉಪಯೋಗಿಸುತ್ತಾರೆ. ಒಟ್ಟಿನಲ್ಲಿ ಕೆಲವರ ಧಾರ್ಮಿಕ ನಂಬಿಕೆಗಳು ಇನ್ನೊಬ್ಬರ ಮನೋ ನೆಮ್ಮದಿ ಕೆಡಿಸುತ್ತಿರುವುದು ಮಾತ್ರ ಸುಳ್ಳಲ್ಲ.

LEAVE A REPLY

Please enter your comment!
Please enter your name here