






11.2 ಲಕ್ಷ ರೂ.ನಿವ್ವಳ ಲಾಭ | ಶೇ.25 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 99 ಪೈಸೆ ಬೋನಸ್ ಘೋಷಣೆ


ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.25ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ.ಮಾತನಾಡಿ, ಸಂಘದಲ್ಲಿ ಪ್ರಸ್ತುತ175 ಸದಸ್ಯರಿದ್ದು ಸರಾಸರಿ ದಿನವೊಂದಕ್ಕೆ1550 ಲೀ.ಹಾಲು ಸಂಗ್ರಹವಾಗುತ್ತಿದೆ. ವರದಿ ಸಾಲಿನಲ್ಲಿ 5,32,200.03 ಲೀ.ಹಾಲು ಸಂಗ್ರಹಿಸಿ 5,06,210ಲೀ. ಹಾಲು ಡೈರಿಗೆ ಮಾರಾಟ ಮಾಡಿದ್ದು 25,990 ಲೀ.ಹಾಲು ಸ್ಥಳೀಯವಾಗಿ ಮಾರಾಟ ಆಗಿದೆ. ಒಕ್ಕೂಟದಿಂದ1700 ಚೀಲ ನಂದಿನಿ ಸಮತೋಲನ ಪಶು ಆಹಾರ ಮತ್ತು ಕರುಗಳ ಪಶು ಆಹಾರ ಖರೀದಿಸಿ 1523 ಚೀಲ ಮಾರಾಟ ಮಾಡಲಾಗಿದೆ.
ಹಾಲು, ಪಶು ಆಹಾರ ಮಾರಾಟ ಮತ್ತು ಇತರ ಆದಾಯಗಳಿಂದ ವರದಿ ಸಾಲಿನಲ್ಲಿ 11,02,096.21 ನಿವ್ವಳ ಲಾಭ ಬಂದಿದೆ. ಇದು ಸಂಘದ ಇತಿಹಾಸದಲ್ಲೇ ಗರಿಷ್ಠ ಲಾಭವಾಗಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ವರದಿ ಸಾಲಿನಲ್ಲಿ ಸಂಘಕ್ಕೆ ಹಾಲು ಹಾಕಿದ ಸದಸ್ಯರಿಗೆಪ್ರತಿ ಲೀ.ಹಾಲಿಗೆ 99 ಪೈಸೆ ಬೋನಸ್ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ, 5 ಹೆಣ್ಣು ಕರು ಸಾಕಾಣಿಕೆ ಮಾಡುವ ಸದಸ್ಯರಿಗೆ ಸಹಾಯಧನ ವಿತರಣೆಯಂತಹ ಯೋಜನೆ ಹಾಕಿಕೊಳ್ಳಲಾಗಿದೆ. ನಂದಿನಿ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ಇರುವುದರಿಂದ ಒಕ್ಕೂಟದಿಂದ ಹಾಲಿನ ಗುಣಮಟ್ಟಕ್ಕೆ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಹೇಳಿದರು.




ಅತಿಥಿಯಾಗಿದ್ದ ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಹಸುಗಳಿಗೆ ಕಡ್ಡಾಯ ವಿಮೆ, ಪಶು ಆಹಾರ, ವ್ಯಾಕ್ಸಿನ್, ಐಸಿಸಿ ಲೋನ್ ಕುರಿತು ಮಾಹಿತಿ ನೀಡಿದರು. ಸದಸ್ಯರು ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಹೇಳಿದರು. ವಿಸ್ತರಣಾಧಿಕಾರಿ ಮಾಲತಿ ಅವರು ಮಾತನಾಡಿ, ಹಾಲು ಉತ್ಪಾದಕರು ನಂದಿನಿ ಪಶು ಆಹಾರ ಬಳಕೆ ಮಾಡಬೇಕು. ಈಗ 25 ಕೆ.ಜಿ.ಬ್ಯಾಗ್ ಸಹ ಬಂದಿದೆ. ಸಂಘಕ್ಕೆ ಬರುವ ಲಾಭ ಸಂಘದ ಸದಸ್ಯರಿಗೆ ಹಂಚಿಕೆಯಾಗುತ್ತದೆ. ಹಾಲಿನ ಗುಣಮಟ್ಟದ ಕಾಯ್ದುಕೊಳ್ಳುವಂತೆ ಹೇಳಿದರು.
ಪಶುವೈದ್ಯಾಧಿಕಾರಿ ಡಾ.ಸಚಿನ್ ಅವರು ಜಂತುಹುಳ, ಚರ್ಮಗಂಟುರೋಗ, ಹೆಣ್ಣು ಕರು ಸೆವೆನ್, ರಾಸು ಖರೀದಿ ಕುರಿತಂತೆ ಮಾಹಿತಿ ನೀಡಿದರು. ಸಂಘದ ಸದಸ್ಯರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು.
ಪ್ರೋತ್ಸಾಹಕ ಬಹುಮಾನ:
2025-26ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ನಿರ್ದೇಶಕ ವೆಂಕಪ್ಪ ನಾಯ್ಕ್(ಪ್ರಥಮ), ಸದಸ್ಯರಾದ ಪುಷ್ಪರಾಜ ಶೆಟ್ಟಿ (ದ್ವಿತೀಯ) ಹಾಗೂ ಶ್ಯಾಮಲ ಪಿ.(ತೃತೀಯ)ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಅಂಕಗಳಿಸಿದ ಕಾಂತಪ್ಪ ಗೌಡ ಅವರ ಪುತ್ರಿ ಚಂದನ ಕೆ.ವಿ., ಬಾಲಕೃಷ್ಣ ಗೌಡ ಅವರ ಪುತ್ರಿ ರಚಿತಾ, ಚಂದ್ರಶೇಖರ ಹೆಚ್.ಅವರ ಪುತ್ರಿ ಸಾತ್ವಿಕ್ ಶೆಟ್ಟಿ, ಸುಮಿತ್ರ ಅವರ ಪುತ್ರ ಅಖಿಲ್ ಶೆಟ್ಟಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಾಬಲ ಶೆಟ್ಟಿ ಅವರ ಪುತ್ರಿ ಭೂಮಿಕಾ, ಬಾಲಕೃಷ್ಣ ಗೌಡ ಅವರ ಪುತ್ರಿ ನವ್ಯಾ, ಮೋಹಿನಿ ಅವರ ಪುತ್ರಿ ಅನುಷಾ, ಸೌಮ್ಯ ಅವರ ಪುತ್ರಿ ನಿಖಿತಾ ಅವರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಹೊನ್ನಪ್ಪ ಗೌಡ, ನಿರ್ದೇಶಕರಾದ ಡಿ.ಮಹಾಬಲ ಶೆಟ್ಟಿ, ವೆಂಕಪ್ಪ ನಾಯ್ಕ, ಕಾಂತಪ್ಪ ಗೌಡ, ಜಯರಾಮ ಬಿ., ದಯಾನಂದ ಹೆಚ್., ಉಮೇಶ್ ಪಿ., ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ ಹೆಚ್. ವರದಿ ಮಂಡಿಸಿದರು. ಹೊನ್ನಪ್ಪ ಗೌಡ ಸ್ವಾಗತಿಸಿ, ಮಹಾಬಲ ಶೆಟ್ಟಿ ವಂದಿಸಿದರು. ಹಾಲು ಪರೀಕ್ಷಕಿ ನಳಿನಾಕ್ಷಿ ಪ್ರಾರ್ಥಿಸಿದರು. ಸಹಾಯಕಿ ಗಿರಿಜ, ಬಿಎಂಸಿ ನಿರ್ವಾಹಕ ಪರಮೇಶ್ವರ, ಕೃ.ಗ.ಕಾರ್ಯಕರ್ತ ಜಯರಾಮ, ಬ್ರಾಂಚ್ ಸಹಾಯಕಿಯರಾದ ವಿಜಯ, ಜಯಂತಿ ಸಹಕರಿಸಿದರು.










