ʼಕಂಬಳಕ್ಕೆ ಮೈಸೂರು ದಸರಾ ಹಬ್ಬದಲ್ಲಿ ಅವಕಾಶ ನೀಡಿʼ – ವಿಶ್ವವಿಖ್ಯಾತ ಕ್ರೀಡೆಯಾಗಿ ಬೆಳೆಸಲು ರೈತ ಸಂಘ ಆಗ್ರಹ

0

ಪುತ್ತೂರು: ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಸೀಮಿತ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸದೆ ವಿಶ್ವವಿಖ್ಯಾತಗೊಳಿಸುವ ನಿಟ್ಟಿನಲ್ಲಿ ಮೈಸೂರು ದಸರಾ ಹಬ್ಬದಲ್ಲಿ ಕಂಬಳ ಆಯೋಜಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು, ಕಂಬಳಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈಗಾಗಲೇ ಕಾನೂನುಬದ್ಧ ವ್ಯವಸ್ಥೆ ರೂಪಿಸಲಾಗಿದೆ. 2017ರಲ್ಲಿ ಸುಗ್ರೀವಾಜ್ಞೆಯ ಮೂಲಕ ಕಂಬಳ ಕ್ರೀಡೆಯನ್ನು ನಡೆಸಲು ಶಾಸನಬದ್ಧ ಅವಕಾಶ ಕಲ್ಪಿಸಲಾಗಿದೆ. ಪ್ರಾಣಿ ಹಿಂಸೆ ನಡೆಯದಂತೆ ಕ್ರೀಡೆಯನ್ನು ನಡೆಸುವ ಕುರಿತು ಕಾನೂನಿನಲ್ಲಿ ಅಗತ್ಯ ನಿಯಮಗಳನ್ನು ರೂಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕಂಬಳವನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು. ಕಂಬಳವು ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಕೆಲವೇ ಭಾಗಗಳಿಗೆ ಸೀಮಿತವಾಗಿರುವುದರಿಂದ ರಾಜ್ಯದ ಇತರ ಭಾಗಗಳ ಜನರಲ್ಲಿ ಈ ಕ್ರೀಡೆಯ ಕುರಿತು ಸೂಕ್ತ ಅರಿವು ಇಲ್ಲ. ಕಂಬಳದಿಂದ ಪ್ರಾಣಿ ಹಿಂಸೆ ಆಗುತ್ತದೆಯೇ ಎಂಬಂತಹ ಅನುಮಾನಗಳು ಮೂಡುತ್ತಿರುವ ಹಿನ್ನೆಲೆಯಲ್ಲಿ, ಕಂಬಳದ ಸಾಂಸ್ಕೃತಿಕ ಹಾಗೂ ಕ್ರೀಡಾ ಮಹತ್ವವನ್ನು ರಾಜ್ಯದಾದ್ಯಂತ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೈಸೂರು ದಸರಾ ಹಬ್ಬದಲ್ಲಿ ಕಂಬಳ ಆಯೋಜಿಸುವುದು ಸೂಕ್ತ ಹೆಜ್ಜೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.


ಮೈಸೂರನಲ್ಲಿ ಅನುಕೂಲಕರ ವಾತಾವರಣ:
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರಿನಲ್ಲಿ ಮಹಾರಾಜರ ಕಾಲದಿಂದಲೂ ದಸರಾ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲಿ ಕಂಬಳ ಆಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಮೈಸೂರು ದಸರಾ ಸಂದರ್ಭದಲ್ಲೂ ಕಂಬಳಕ್ಕೆ ಅವಕಾಶ ಕಲ್ಪಿಸಬೇಕು. ಆರಂಭದಲ್ಲಿ ಮೈಸೂರಿನಲ್ಲಿ ಕಂಬಳ ಆಯೋಜನೆ ಕುರಿತು ಕೆಲವು ಗೊಂದಲಗಳು ಹಾಗೂ ಮಳೆಯ ಕಾರಣದಿಂದ ಸಮಸ್ಯೆಗಳು ಎದುರಾಗಿದ್ದವು. ಇದೀಗ ಉತ್ತಮ ಹವಾಮಾನ ಮತ್ತು ಜನಸ್ಪಂದನೆಯ ಹಿನ್ನೆಲೆಯಲ್ಲಿ ಕಂಬಳಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದ ಅವರು ರೈತರ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ರಾಜಕೀಯಗೊಳಿಸಬಾರದು. ರೈತರ ಭಾವನೆ ಹಾಗೂ ಕರಾವಳಿಯ ಸಂಸ್ಕೃತಿಗೆ ಸಂಬಂಧಿಸಿದ ಈ ಕ್ರೀಡೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸಬೇಕು. ಕಂಬಳವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ರೈತ ಸಂಘಟನೆಗಳ ಮೂಲಕವೂ ಒತ್ತಾಯ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಹಮೀದ್, ಕೋಡಿಂಬಾಡಿ ಘಟಕದ ಮೋನಪ್ಪ ಗೌಡ, ಯೋಗೀಶ್ ಸಾಮಾನಿ ಮಠಂತಬೆಟ್ಟು ಹಾಗೂ ಮಾರ್ಷಲ್ ವೇಗಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here