ನೆಲ್ಯಾಡಿ ಶಾಲೆಯಲ್ಲಿ ಕೈತೋಟ ನಿರ್ಮಾಣ ಹಾಗೂ ಸ್ವಚ್ಛತಾ ಶ್ರಮದಾನ

0

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಪರಿಸರಪರ ಕಾರ್ಯ

ನೆಲ್ಯಾಡಿ: ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ನೆಲ್ಯಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಡಬ ತಾಲೂಕು, ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಕೈತೋಟ ನಿರ್ಮಾಣ ಹಾಗೂ ಶಾಲಾ ಆವರಣ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಆಗಸ್ಟ್ 29ರಂದು ನಡೆಯಿತು.

ವಿದ್ಯಾರ್ಥಿಗಳಲ್ಲಿ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಶ್ರಮದ ಗೌರವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಡ್ರೀಮ್ ಅರ್ಥ್ ಇಕೋ ಸಂಘದ ಸಹಕಾರದೊಂದಿಗೆ ಶಾಲೆಯಲ್ಲಿ ಕೈತೋಟ ನಿರ್ಮಿಸಲಾಯಿತು. ಕೈತೋಟಕ್ಕಾಗಿ ಸ್ಥಳವನ್ನು ಸಿದ್ಧಪಡಿಸಿ, ಮಣ್ಣು ಹದಗೊಳಿಸಿ, ತರಕಾರಿ ಬೆಳೆಸಲು ಅಗತ್ಯವಾದ ಹಾಸಿಗೆಗಳನ್ನು ನಿರ್ಮಿಸುವ ಕಾರ್ಯವನ್ನು ಶೌರ್ಯ ತಂಡದ ಸ್ವಯಂಸೇವಕರು ಶ್ರಮದಾನದ ಮೂಲಕ ಕೈಗೊಂಡರು.

ಇದರ ಜೊತೆಗೆ ಶಾಲೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಕಸ, ಒಣ ಎಲೆಗಳು ಹಾಗೂ ಅನಗತ್ಯ ವಸ್ತುಗಳನ್ನು ತೆರವುಗೊಳಿಸಲಾಯಿತು. ಬಾಗಿದ ಮರಗಳ ಕೊಂಬೆಗಳನ್ನು ತೆರವುಗೊಳಿಸುವುದು ಸೇರಿದಂತೆ ವಿವಿಧ ಸ್ವಚ್ಛತಾ ಮತ್ತು ಶ್ರಮದಾನ ಕಾರ್ಯಗಳನ್ನು ಸ್ವಯಂಸೇವಕರು ಉತ್ಸಾಹದಿಂದ ನೆರವೇರಿಸಿದರು.

ಕೈತೋಟ ನಿರ್ಮಾಣದ ಮೂಲಕ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳನ್ನು ನೇರವಾಗಿ ಪರಿಚಯಿಸುವುದರ ಜೊತೆಗೆ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ, ಶ್ರಮದ ಗೌರವ ಹಾಗೂ ಸಾಮಾಜಿಕ ಜವಾಬ್ದಾರಿ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶೌರ್ಯ ಘಟಕ ಸಮಿತಿ, ಕಡಬ ತಾಲೂಕಿನ ಕ್ಯಾಪ್ಟನ್ ರಮೇಶ್ ಬಾಣಜಾಲು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಉಡುಪಿ ಪ್ರಾದೇಶಿಕ ವಿಭಾಗದ ಮೇಲ್ವಿಚಾರಕರು ನಿತೇಶ್ ಕುಮಾರ್, ಘಟಕ ಸಂಯೋಜಕಿ ನಮಿತಾ ಎಸ್. ಶೆಟ್ಟಿ, ಪಿಎಂ ಶಾಲೆಯ ಮುಖ್ಯಗುರು ಶ್ರೀಧರ್ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ದಿನಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡ್ರೀಮ್ ಅರ್ಥ್ ಇಕೋ ಸಂಘದ ಪ್ರತಿನಿಧಿಗಳು ಕೈತೋಟ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಿದರು. ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶೌರ್ಯ ತಂಡದ ಪರಿಸರಪರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶೌರ್ಯ ಘಟಕದ ಸ್ವಯಂಸೇವಕರಾದ ಸಂತೋಷ್ ಕುಮಾರ್, ರಮೇಶ್ ಬಿ., ಬಾಲಕೃಷ್ಣ ಗೌಡ, ಚಂದ್ರ ಕೆ. ಯನ್., ದಿನೇಶ್, ನವೀನ್ ಫೆರ್ನಾಂಡಿಸ್, ಅನೀಶ್, ಗೀತಾ, ಜಯಂತಿ, ಹೇಮಾ ವಿ. ಹಾಗೂ ಕುಸುಮ ಕೆ. ಸೇರಿದಂತೆ ಇತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಶಾಲೆಯ ಮುಖ್ಯಗುರು ಶ್ರೀ ಶ್ರೀಧರ್ ಅವರು ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿ, ಅವರ ಸೇವಾ ಕಾರ್ಯವನ್ನು ಅಭಿನಂದಿಸಿದರು.

ಶೌರ್ಯ ತಂಡದ ಶ್ರಮದಾನ ಮತ್ತು ಡ್ರೀಮ್ ಅರ್ಥ್ ಇಕೋ ಸಂಘದ ಸಹಕಾರದಿಂದ ನಿರ್ಮಾಣಗೊಂಡ ಕೈತೋಟವು ಶಾಲೆಯ ಪರಿಸರವನ್ನು ಹಸಿರಾಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಪರಿಸರ ಸಂರಕ್ಷಣೆಯ ಪ್ರಾಯೋಗಿಕ ಪಾಠ ನೀಡುವ ಮಾದರಿ ಕಾರ್ಯವಾಗಿ ಮೂಡಿಬಂದಿದೆ.

LEAVE A REPLY

Please enter your comment!
Please enter your name here