






ನಿಮ್ಮ ಸಮಯವನ್ನು ಕ್ರೀಡೆಯಲ್ಲಿ ಹೂಡಿಕೆ ಮಾಡಿ – ಪ್ರೊ. ಜಾನ್ ಪಿಂಟೋ


ಬೆಟ್ಟಂಪಾಡಿ;ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ. 01ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.



ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಪ್ರೊ. ಜಾನ್ ಪಿಂಟೋ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಪ್ರತಿ ದಿನವೂ ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸುವುದರ ಜೊತೆಗೆ ಶಿಸ್ತಿನ ಆಹಾರ ಪದ್ಧತಿ ಮತ್ತು ದೈಹಿಕ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು. ನೀವು ಇಂದು ಕ್ರೀಡೆ ಮತ್ತು ದೈಹಿಕ ಆರೋಗ್ಯದಲ್ಲಿ ಮಾಡುವ ಹೂಡಿಕೆ ನಿಮ್ಮ ಜೀವನದುದ್ದಕ್ಕೂ ನಿಮಗೆ ಸಹಕಾರಿಯಾಗಲಿದೆ. ಆದ್ದರಿಂದ ನಿಮ್ಮ ಅಮೂಲ್ಯ ಸಮಯವನ್ನು ಕ್ರೀಡೆಯಲ್ಲಿ ಹೂಡಿಕೆ ಮಾಡಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ಮಾತನಾಡಿ, ದೈಹಿಕ ಕ್ಷಮತೆ ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರು. ಕೃಷಿ ಪ್ರಧಾನ ದೇಶವಾಗಿರುವ ನಮ್ಮಲ್ಲಿ ಇಂದು ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದರಿಂದ ದೈಹಿಕ ಶ್ರಮವೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ನಿಯಮಿತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಕೆ. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಕೆ ಅವರು ರಾಷ್ಟ್ರೀಯ ಕ್ರೀಡಾ ದಿನದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆ ಯನ್ನು ಬೋಧಿಸಿದರು.

ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯರಾದ ಅನಿತಾ, ಅಕ್ಷತಾ ಹಾಗೂ ತನುಶ್ರೀ ಪ್ರಾರ್ಥಿಸಿದರು. ಐಕ್ಯೂಎಸಿ ಸಹ ಸಂಚಾಲಕ ಪ್ರೊ. ಅನಂತ ಭಟ್ ವಂದಿಸಿದರು. ಕಾಲೇಜಿನ ಗ್ರಂಥಪಾಲಕ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಹಾಕಿ ಮಾಂತ್ರಿಕ, ಪದ್ಮಭೂಷಣ ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗಾಗಿ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.










