ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರ ಕಾರ್ಯಾಚರಣೆ : ಮೂರು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಸರಣಿ ಕಳ್ಳನ ಬಂಧನ; ಬೈಕ್, ನಗದು ಜಪ್ತಿ

0

​ಪುತ್ತೂರು: ತಾಲೂಕಿನ ಪ್ರಸಿದ್ಧ ದೇವಸ್ಥಾನಗಳ ಕಾಣಿಕೆ ಡಬ್ಬಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಅಂತರ್ ರಾಜ್ಯ ಕಳ್ಳನೊಬ್ಬನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

​ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಮದಕ ಕಿನ್ನಿಗಾರ ನಿವಾಸಿ ಸತೀಶ (31) ಬಂಧಿತ ಆರೋಪಿ.

​ಘಟನೆಯ ವಿವರ:
ಆರೋಪಿಯು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಡುವನ್ನೂರು ಗ್ರಾಮದ ಶ್ರೀ ಆದಿಶಕ್ತಿ ದೇವಿ ಸನ್ನಿಧಿ ಪಡುಮಲೆ ಎಂಬಲ್ಲಿನ ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿದ್ದನು. ಅಲ್ಲದೆ, ನಿಡ್ಪಳ್ಳಿ ಶ್ರೀ ಶಾಂತದುರ್ಗ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನಕ್ಕೂ ಯತ್ನಿಸಿದ್ದನು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 110/2026 ಕಲಂ: 305(e) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

​ಮಿಂಚಿನ ಕಾರ್ಯಾಚರಣೆ:
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಅರುಣ್ ಕೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಅನಿಲ್ ಕುಮಾರ್ ಭೂಮರೆಡ್ಡಿ ಅವರ ಆದೇಶದಂತೆ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ  ಪ್ರಮೋದ್ ಕುಮಾರ್ ಮತ್ತು ಪ್ರಭಾರ ನಿರೀಕ್ಷಕ  ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

​ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್‌ಐ  ಗುಣಪಾಲ ಜೆ. ಹಾಗೂ ಪಿಎಸ್‌ಐ  ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದ ಪೊಲೀಸ್ ತಂಡವು ಕೇರಳ ರಾಜ್ಯದ ಕಿನ್ನಿಂಗಾರು, ಬದಿಯಡ್ಕ ಮತ್ತು ಆದೂರು ಭಾಗಗಳಲ್ಲಿ ಸತತ ಶೋಧ ನಡೆಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಆರೋಪಿಯನ್ನು ಬದಿಯಡ್ಕದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

​ಸೊತ್ತು ವಶ:
ಬಂಧಿತ ಆರೋಪಿಯಿಂದ ಕಳವು ಮಾಡಲಾಗಿದ್ದ ಕಾಣಿಕೆ ಡಬ್ಬಿಯಲ್ಲಿದ್ದ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಹೊಂಡಾ ಎಸ್‌ಪಿ ಶೈನ್ ಬೈಕ್ ಸೇರಿದಂತೆ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

​ಹಳೆಯ ಅಪರಾಧ ಹಿನ್ನೆಲೆ:
ಬಂಧಿತ ಸತೀಶ ಹಳೆಯ ಅಪರಾಧಿಯಾಗಿದ್ದು, ಈತನ ವಿರುದ್ಧ ಈಗಾಗಲೇ ಕೇರಳದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನ ಪ್ರಕರಣ ದಾಖಲಾಗಿದೆ. ಈತ ದೇವಸ್ಥಾನಗಳ ಕಾಣಿಕೆ ಡಬ್ಬಿ ಹಾಗೂ ಅಡಿಕೆ ಕಳವು ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

​ತಂಡಕ್ಕೆ ಶ್ಲಾಘನೆ:
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯ ಹೆಚ್.ಸಿ. ರಮೇಶ್ (1040), ಹೆಚ್.ಸಿ. ನಾಗರಾಜ (2309), ಪಿಸಿಗಳಾದ ಮಂಜುನಾಥ (2287), ಆಕಾಶ್ (452), ಕಾರ್ತಿಕ್ (485) ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶರಣಪ್ಪ ಪಾಟೀಲ್ (2394), ಈರಣ್ಣ (2370) ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಅವರು ತಾಂತ್ರಿಕ ಸಹಕಾರ ನೀಡಿದ್ದಾರೆ.

LEAVE A REPLY

Please enter your comment!
Please enter your name here