ಪುತ್ತೂರು: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ಮೂವರು ಆಯ್ಕೆ

0

ಪುತ್ತೂರು: ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ತಾಲೂಕಿನಿಂದ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಪುತ್ತೂರು ಹೊಸ್ತೋಟ ಸ.ಕಿ.ಪ್ರಾ. ಶಾಲೆಯ ಸಹಶಿಕ್ಷಕಿ ಮಾಲತಿ, ಸಾಮೆತ್ತಡ್ಕ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಮರಿಯಾ ಅಶ್ರಫ್ ಹಾಗೂ ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ಸಹಶಿಕ್ಷಕ ತೋಮಸ್ ಎಂ.ಐ. ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮರಿಯಾ ಅಶ್ರಫ್
01-06-2010ರಲ್ಲಿ ಸೇವೆಗೆ ಸೇರಿದ್ದು, ಪ್ರಸ್ತುತ ಸಾಮೆತ್ತಡ್ಕ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 16 ವರ್ಷ 2 ತಿಂಗಳು ಸೇವೆ ಸಲ್ಲಿಸಿರುವ ಇವರ ಶಿಕ್ಷಣ ಕ್ಷೇತ್ರದ ಉತ್ತಮ ಹಾಗೂ ಶ್ಲಾಘನೀಯ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತೋಮಸ್
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ತೋಮಸ್ ಅವರು 01-06-1969 ರಂದು ಕುಟ್ಟಪ್ಪನ್ ಕೆ.ವೈ. ಮತ್ತು ಮರಿಯಮ್ಮ ಕೆ.ವಿ. ದಂಪತಿಯ ಪುತ್ರರಾಗಿ ಜನಿಸಿದರು. ಸಿ.ಎಂ.ಶ್ರೀ ಶಾಲೆ ನೆಲ್ಯಾಡಿ, ಸಂತ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ, ಸುಬ್ರಹ್ಮಣ್ಯದ ಎಸ್.ಎಸ್. ಪಿಯು ಕಾಲೇಜು, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಣಿ ಚೆನ್ನಮ್ಮ ವಿವಿ ಧಾರವಾಡ ಮತ್ತು ಭಾರತಿಯಾರ್ ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ.ಕಳೆದ 23 ವರ್ಷಗಳಿಂದ ಸಂತ ಜಾರ್ಜ್ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ 2-3 ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾವು ವಿದ್ಯಾರ್ಥಿಯಾಗಿ ಕಲಿತ ಶಾಲೆಯಲ್ಲೇ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ.ಬಡ ವಿದ್ಯಾರ್ಥಿಗಳ ಶುಲ್ಕ ಪಾವತಿ, ಅಡುಗೆ ಸಿಬ್ಬಂದಿಯ ವಿಮಾ ನೆರವು, ತಮ್ಮ ತೋಟದ ಆದಾಯದಲ್ಲಿ ಶಾಲೆಗೆ ರೂ.35 ಸಾವಿರ ಕೊಡುಗೆ, ರೂ.4.2 ಲಕ್ಷ ವೆಚ್ಚದ ವಿಜ್ಞಾನ ಪ್ರಯೋಗಾಲಯಕ್ಕೆ ರೂ.3.7 ಲಕ್ಷ ಸ್ವಂತ ಕೊಡುಗೆ, ಗಣಿತ ಪ್ರಯೋಗಾಲಯಕ್ಕೆ ರೂ.3 ಲಕ್ಷ ದೇಣಿಗೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಮಾಡಿದ್ದಾರೆ.’ಮಿಷನ್ 95+’ ಕಾರ್ಯಯೋಜನೆ ರೂಪಿಸಿ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಕಾರಣರಾಗಿದ್ದು, 2023-24 ಮತ್ತು 2025-26ರಲ್ಲಿ ಶಾಲೆಗೆ 100% ಫಲಿತಾಂಶ ಮತ್ತು ‘ಎ’ ಶ್ರೇಣಿ ತಂದುಕೊಟ್ಟಿದ್ದಾರೆ. ಸ್ಕೌಟ್ ಮಾಸ್ಟರ್ ಆಗಿ, ಇಕೋ ಕ್ಲಬ್, ಬ್ಯಾಂಡ್ ತಂಡ, TECRAFT & REXPO ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಇವರಿಗೆ ಕಡಬ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here