ನಿಸರ್ಗದ ಮಡಿಲಲ್ಲಿ ಪ್ರಶಾಂತ ತೀರ್ಥಕ್ಷೇತ್ರ : ನಾಳೆ(ಸೆ.11) ಇರ್ದೆ ಬೆಂದ್ರ್ ತೀರ್ಥದಲ್ಲಿ ಪುಣ್ಯ ತೀರ್ಥಸ್ನಾನ

0

ಯಾವುದೇ ಜನಜಂಗುಲಿಯಿಲ್ಲ, ವಾಹನಗಳ ಕರ್ಕಶ ಶಬ್ದವಿಲ್ಲ. ಸುತ್ತಲೂ ಮರ-ಗಿಡಗಳು, ಪಕ್ಕದಲ್ಲೇ ಸೀರೆ ಹೊಳೆಯ ತಂಪು. ಚಳಿಗಾಲದಲ್ಲಿ ನದಿಯ ನೀರು ಮೈ ಕೊರೆಯುವಷ್ಟು ತಣ್ಣಗಿದ್ದರೂ, ಇಲ್ಲಿನ ಬುಗ್ಗೆಯ ನೀರು ಮಾತ್ರ ಮುಂಜಾನೆಯಿಂದಲೇ ಬೆಚ್ಚನೆ. ಎಷ್ಟೇ ಮಳೆ ಬಂದರೂ ತನ್ನ ಉಷ್ಣತೆಯನ್ನು ಕಳೆದುಕೊಳ್ಳದೆ, ವಿಜ್ಞಾನಕ್ಕೇ ಸವಾಲಾಗಿ ನಿಂತಿರುವ ಅಪೂರ್ವ ತಾಣವಿದು. ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಕಾಯುತ್ತಿರುವ ಈ ಪುಣ್ಯಕ್ಷೇತ್ರ ನಿಸರ್ಗದ ಗಾಳಿ, ನೀರು, ಬೆಳಕಿನೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಈ ತಾಣವೇ ಇರ್ದೆ ಬೇಂದ್ರ್ ತೀರ್ಥ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿದೆ. ಇದು ದಕ್ಷಿಣ ಭಾರತದ ಏಕೈಕ ನೈಸರ್ಗಿಕ ಬಿಸಿನೀರಿನ ಬುಗ್ಗೆ (Natural Hot Water Spring) ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ (ASI) ಗುರುತಿಸಲ್ಪಟ್ಟಿದೆ.

ಇಂದು ಎಲ್ಲವೂ ಇದ್ದು ನೆಮ್ಮದಿ ಇಲ್ಲವೆನ್ನುವ ಕಾಲದಲ್ಲಿ, ಈ ಪ್ರಶಾಂತ ತಾಣವನ್ನು ಅರಸಿ ಹಲವು ಊರುಗಳಿಂದ ಜನರು ಬರುತ್ತಾರೆ. ಇಲ್ಲಿನ ನೆಮ್ಮದಿಯಲ್ಲಿ ಬೆರೆತು, ಚಿತ್ರಗಳನ್ನು ಸೆರೆಹಿಡಿದು, ಧ್ಯಾನ ಮಾಡಿ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ವರ್ಷಕ್ಕೆ 5-6 ಬಾರಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಹಿಂದಿನಿಂದ ನಡೆದುಕೊಂಡು ಬಂದ ತೀರ್ಥ ಅಮಾವಾಸ್ಯೆಯ ಪುಣ್ಯಸ್ನಾನದ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಈ ಕ್ಷೇತ್ರದ ಮಹಿಮೆ ಇಷ್ಟಕ್ಕೆ ಸೀಮಿತವಲ್ಲ. ಪಕ್ಕದಲ್ಲೇ ಹರಿಯುವ ಸೀರೆ ಹೊಳೆಯ ಸೌಂದರ್ಯ, ಎದುರಿನಲ್ಲಿರುವ ಅಪರೂಪದ ಹಾಳೆ ಮರ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಶ್ವತ್ಥ ಮರ – ಇವೆಲ್ಲವೂ ಈ ಸ್ಥಳದ ದೈವಿಕತೆಯನ್ನು ಇನ್ನಷ್ಟು ಹೆಚ್ಚಿಸಿವೆ. ಚಿಲುಮೆಯಿಂದ ಹೊರ ಹೊಮ್ಮುವ ಬಿಸಿ ನೀರಿನಲ್ಲಿ ಖನಿಜಾಂಶಗಳಿದ್ದು, ಚರ್ಮ ಸಂಬಂಧಿತ ರೋಗಗಳಿಗೆ ತುಂಬಾ ಪ್ರಯೋಜನಕಾರಿ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಶ್ರೀ ವಿಷ್ಣುಮೂರ್ತಿ ದೇವರ ಸಾನಿಧ್ಯದಿಂದಾಗಿ ಇದು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ನವ ವಿವಾಹಿತರು ಸೇರಿದಂತೆ ಹಲವು ಭಕ್ತರು ಇಲ್ಲಿಗೆ ಭೇಟಿ ನೀಡಿ ತೀರ್ಥಸ್ನಾನ ಮಾಡುವ ಸಂಪ್ರದಾಯವಿದೆ. ಪ್ರತಿ ವರ್ಷದ ಸೋಣ ತಿಂಗಳ ತೀರ್ಥ ಅಮಾವಾಸ್ಯೆಯಂದು ವಿಶೇಷ ಪುಣ್ಯ ತೀರ್ಥಸ್ನಾನ ನಡೆಯುತ್ತಾ ಬಂದಿದೆ. ಸುಂದರ ಪ್ರಕೃತಿಯ ಮಡಿಲಲ್ಲಿರುವ ಈ ಐತಿಹಾಸಿಕ ತಾಣ ತನ್ನ ವಿಶೇಷತೆಯೊಂದಿಗೆ ನಾಳೆ (ಸೆ.11) ನಡೆಯಲಿರುವ ತೀರ್ಥ ಅಮಾವಾಸ್ಯೆಯಂದು ಭಕ್ತರನ್ನು, ಪ್ರಕೃತಿ ಪ್ರಿಯರನ್ನು ಬರಮಾಡಿಕೊಳ್ಳಲು ಸಿದ್ಧವಾಗಿದೆ.

LEAVE A REPLY

Please enter your comment!
Please enter your name here