ಸೆ.13ಕ್ಕೆ ಮೂಕಾಂಬಿಕಾ ಕಲ್ಚರ್ ಅಕಾಡೆಮಿಯ ಹಿರಿಯ ವಿದ್ಯಾರ್ಥಿ ವಸುಧಾ ಜಿ.ಎನ್ ಅವರ ಭರತನಾಟ್ಯ ರಂಗಪ್ರವೇಶ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ಹಿರಿಯ ವಿದ್ಯಾರ್ಥಿ ವಸುಧಾ ಜಿ.ಎನ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಸೆ.13ರಂದು ಸಂಜೆ ಗಂಟೆ 5ಕ್ಕೆ ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಟಿಯಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ಗುರು ವಿದ್ವಾನ್ ಬಿ. ದೀಪಕ್ ಕುಮಾರ್ ಅವರು ಮಾತನಾಡಿ ಓರ್ವ ಕಲಾವಿದೆಯ ಜೀವನದಲ್ಲಿ ತನ್ನ ಬಹುಮಖ್ಯ ದಿನವಾಗಿ ರಂಗಪ್ರವೇಶ ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ವಿಟ್ಲದ ಲಲಿತ ಕಲಾಸದನದ ಗುರು ವಿದುಷಿ ನಯನ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದ ಅಭ್ಯಾಸ ಮಾಡಿ ಸುಮಾರು ಏಳೆಂಟು ವರ್ಷ ನಮ್ಮ ಸಂಸ್ಥೆಯಲ್ಲಿ ಭರತನಾಟ್ಯದ ಕುರಿತು ಉನ್ನತ ಅಭ್ಯಾಸ ಮಾಡಿರುವ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ವಸುಧಾ ಜಿ.ಎನ್ ಅವರ ಭರತನಾಟ್ಯ ರಂಗಪ್ರವೇಶವು ಸೆ.13ರಕ್ಕೆ ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ. ಸುಧೀಂದ್ರ ನೃತ್ಯ ಕಲಾನಿಕೇತನ ಬೆಂಗಳೂರು ಇದರ ಕಲಾನಿರ್ದೇಶಕ ವಿದ್ವಾನ್ ಗುರುರಾಜ್ ವಿಶಿಷ್ಠ್ ಮತ್ತು ಬಿ.ಸಿ.ರೋಡ್‌ನ ಯಕ್ಷ ಕದಂಬ ಹವ್ಯಾಸಿ ಯಕ್ಷಗಾನ ಸಂಘದ ಸ್ಥಾಪಕರು ಮತ್ತು ಯಕ್ಷಗಾನ ಗುರುವಾಗಿರುವ ಯಕ್ಷರತ್ನಮಣಿ ನರಸಿಂಹ ಮಯ್ಯ ಅಲೆತ್ತೂರು ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಎಲ್ಲಾ ಗುರುವೃಂದದವರು ಸೇರಿಕೊಂಡು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಭರತನಾಟ್ಯ ಕಾರ್ಯಕ್ರಮ ಆರಂಭಗೊಂಡು ನಡುವೆ ಅತಿಥಿಗಳು ಶುಭ ಹಾರೈಸಲಿದ ನಂತರ ಮತ್ತೆ ಭರತನಾಟ್ಯ ಕಾರ್ಯಕ್ರಮ ಮುಂದುವರಿದು ಸುಮಾರು ಎರಡು ಗಂಟೆಗಳ ಭರತನಾಟ್ಯ ಪ್ರದರ್ಶನದ ಕೊನೆಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.



ಪದವರ್ಣ ಮುಖ್ಯ:
ಭರತನಾಟ್ಯ ರಂಗಪ್ರವೇಶದಲ್ಲಿ ಪದವರ್ಣ ಬಹಳ ಮುಖ್ಯ. ಇದೊಂದು ದೀರ್ಘವಾದ ನೃತ್ಯ ಭಾಗವಾಗಿದೆ. ಇದು ನೃತ್ಯ ಕಲಾವಿದರ ನೃತ್ಯ ಕೌಶಲ್ಯ ಮತ್ತು ಅಭಿನಯ ಮತ್ತು ದೈಹಿಕ ಸಹಿಷ್ಣುತೆಗೆ ಒಡ್ಡುವ ಅತಿ ದೊಡ್ಡ ಪರೀಕ್ಷೆ. ಇದರಲ್ಲಿ ಶಿವನ ರೂಪ, ಲೀಲೆ ಮತ್ತು ಕರುಣೆಯನ್ನು ಪದಗಳ ಮೂಲಕ ಅದ್ಭುತವಾಗಿ ವರ್ಣಿಸಲಾಗುತ್ತದೆ. ವಸುಧಾ ಜಿ.ಎನ್ ಅವರ ಊರು ಬಂಟ್ವಾಳ ತಾಲೂಕಿನ ಇರಾ ಸೋಮನಾಥೇಶ್ವರ ದೇವಸ್ಥಾನ ಇರುವ ಹಿನ್ನೆಲೆಯಲ್ಲಿ ಅವರು ಸೋಮನಾಥೇಶ್ವರ ದೇವರ ಮೇಲೆ ಕನ್ನಡ ಪದವರ್ಣದಲ್ಲಿ ನೃತ್ಯ ಪ್ರಸ್ತುತಿ ಮಾಡಲಿದ್ದಾರೆ. ಇದರಲ್ಲಿ ಜೋತಿರ್ಲಿಂಗಳಲ್ಲಿ ಮೊದಲನೆಯದಾದ ಗುಜರಾತಿನ ಸೋಮನಾಥೇಶ್ವರ ದೇವರ ಕುರಿತು ಕೂಡಾ ನೃತ್ಯದ ಪ್ರಸ್ತುತಿ ಇರಲಿದೆ ಎಂದು ವಿದ್ವಾನ್ ದೀಪಕ್ ಕುಮಾರ್ ತಿಳಿಸಿದರು.

ಪರಿಸರ ಪ್ರೇಮಿಯಾಗಲಿರುವ ರಂಗ ಪ್ರವೇಶ:
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮೂಲಕ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಕೂಡಾ ಪರಿಸರಕ್ಕೆ ಪೂರಕವಾಗಿ ಇರುತ್ತದೆ. ಪ್ಲಾಸ್ಟಿಕ್ ರಹಿತವಾದ ಕಾರ್ಯಕ್ರಮ ಆಗಬೇಕೆನ್ನುವ ಉದ್ದೇಶದಿಂದ ಅತಿಥಿಗಳಿಗೆ, ಹಿಮ್ಮೆಳದವರಿಗೆ ಕೊಡುವ ಸ್ಮರಣಿಕೆಗಳು ಪ್ಲಾಸ್ಟಿಕ್ ರಹಿತವಾಗಿರುತ್ತದೆ. ಪ್ರಕೃತಿ ಸ್ನೇಹಿಯಾಗಿ ಕೈ ಬಟ್ಟೆ ಚೀಲವನ್ನು ನೀಡಲಿದ್ದೇವೆ. ಸಂಸ್ಥೆಯ ಶಿಷ್ಯೆ ಸುಮಂಗಲ ಅವರು ತಯಾರಿಸಲಿದ್ದಾರೆ. ಕೈ ಚೀಲದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡುತ್ತಿರುವ ವಸುಧಾ ಜಿ.ಎನ್ ಅವರು ತುಳು ಲಿಪಿಯಲ್ಲಿ ಬರೆಯಲಿದ್ದಾರೆ ಎಂದು ವಿದ್ವಾನ್ ಬಿ ದೀಪಕ್ ಕುಮಾರ್ ತಿಳಿಸಿದರು.

ಹಿಮ್ಮೇಳ:
ನಟುವಾಂಗದಲ್ಲಿ ಗುರು ಬಿ ದೀಪಕ್ ಕುಮಾರ್ ಪುತ್ತೂರು, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ವಿ.ಜಿ.ಗುರುಮೂರ್ತಿ ಬೆಂಗಳೂರು, ಕೊಳಲು ವಿದ್ವಾನ್ ರಘುಸಿಂಹ ಎ ಹೆಚ್ ಬೆಂಗಳೂರು, ಪಿಟೀಲಿನಲ್ಲಿ ಕು.ತನ್ಮಯಿ ಉಪ್ಪಂಗಳ ಅವರು ಸಹಕರಿಸಲಿದ್ದಾರೆ ಎಂದು ದೀಪಕ್ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ಮತ್ತು ಸಂಗೀತ ಗುರು ವಿದುಷಿ ಪ್ರೀತಿಕಲಾ, ನೃತ್ಯ ಗುರು ವಿದ್ವಾನ್ ಗಿರೀಶ್ ಕುಮಾರ್, ವಸುಧಾ ಜಿ.ಎನ್ ಅವರ ತಂದೆ ನೋಣಯ್ಯ ಜಿ.ಎನ್ ಮತ್ತು ತಾಯಿ ಚಿನ್ನಮ್ಮ ಉಪಸ್ಥಿತರಿದ್ದರು.

ವಸುಧಾ ಜಿ.ಎನ್ ಅವರ ಪರಿಚಯ:
ಕಲ್ಲಡ್ಕ ಸಮೀಪದ ಬೋಳಂತೂರು ನಿವಾಸಿಗಳಾದ ನೋಣಯ್ಯ ಜಿ.ಎನ್ ಮತ್ತು ಚಿನ್ನಮ್ಮ ದಂಪತಿ ಪ್ರಥಮ ಪುತ್ರಿ ವಸುಧಾ ಜಿ. ಎನ್, ಬಾಲ್ಯದಿಂದಲೇ ಕಲೆ ಮತ್ತು ಸಂಸ್ಕೃತಿಯತ್ತ ಒಲವನ್ನು ಬೆಳೆಸಿಕೊಂಡವರು. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ, ಪದವಿ ಶಿಕ್ಷಣವನ್ನು ಬಂಟ್ವಾಳದ ಎಸ್ ವಿ ಎಸ್ ಮಹಾವಿದ್ಯಾಲಯ ದಲ್ಲಿ ಪಡೆದ ಬಳಿಕ ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ(ಎನ್.ಐ.ಟಿ.ಕೆ) ದಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಉಜಿರೆಯ ಪ್ರಸನ್ನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ – ಶಿಕ್ಷಣ ತರಬೇತಿಯನ್ನು ಪೂರ್ಣಗೊಳಿಸಿದ ಅವರು ತಮ್ಮ ಎಳವೆಯಲ್ಲಿಯೇ ವಿಟ್ಲದ ಲಲಿತ ಕಲಾಸದನದ ಗುರು ವಿದುಷಿ ನಯನ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದ ನಿರಂತರ ಅಭ್ಯಾಸಮಾಡಿ ವಿದ್ವತ್ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪ್ರಸ್ತುತ ಗುರು ವಿದ್ವಾನ್ ಬಿ. ದೀಪಕ್ ಕುಮಾರ್ ಇವರಲ್ಲಿ ಉನ್ನತ ಹಂತದ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸುತ್ತಾ ವಿದುಷಿ ಪ್ರೀತಿಕಲಾ ಮತ್ತು ವಿದ್ವಾನ್ ಬಿ ಗಿರೀಶ್ ಕುಮಾರ್ ಇವರಲ್ಲಿ ನೃತ್ಯದ ವಿವಿಧ ತಂತ್ರಗಳ ಕುರಿತು ಮಾರ್ಗದರ್ಶನವನ್ನೂ ಪಡೆಯುತ್ತಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ಡಾ. ಪದ್ಮನಿ ರಾಮಚಂದ್ರನ್, ಇಂದಿರಾ ಕಡಂಬಿ, ಭಾನುಮತಿ, ಶಿಲ್ಪಾ ನಂಜಪ್ಪ ಹಾಗೂ ವಿಜಯ್ ಕುಮಾರ್, ಚೆನೈ ಅವರ ವಿವಿಧ ಭರತನಾಟ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ‘ತ್ರಿಶಕ್ತಿ’ ಎಂಬ ವಿಷಯಾಧಾರಿತ ನೃತ್ಯರೂಪಕದಲ್ಲಿ ವಸುಧಾ ಜಿ. ಎನ್. “ಪಾರ್ವತಿ” ಪ್ರಸ್ತುತಿಯನ್ನು ಮಾಡಿದ್ದಾರೆ. ಈ ನೃತ್ಯರೂಪಕವು ನೃತ್ಯಾಂತರಂಗ, ಪುತ್ತೂರು; ಕಲಾಧಾರಾ, ಮಂಚಿ; ಆಳ್ವಾಸ್ ಕಾಲೇಜು, ಮೂಡಬಿದ್ರಿ; ಸರಿಗಮ ಭಾರತೀ, ಮಣಿಪಾಲ, ಕಲಾಭವ ಮಂಗಳೂರು ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ. ನೃತ್ಯದ ಏಕವ್ಯಕ್ತಿ ಪ್ರಸ್ತುತಿಯಲ್ಲಿ ವಸುಧಾ ಜಿ. ಎನ್. ಅವರು ‘ನೃತ್ಯಾಂತರಂಗ ವರ್ಣಿಕಾ’ ಸರಣಿಯಲ್ಲಿ ಪದವರ್ಣವನ್ನು ಏಕವ್ಯಕ್ತಿಯಾಗಿ ಪ್ರಸ್ತುತಪಡಿಸಿದ್ದಾರೆ. ಕಲಾಸೂರ್ಯ ನಾಟ್ಯಾಲಯ, ಮಂಗಳೂರು ಇವರ ಮಾಸಿಕ ಸರಣಿ ‘ಕಲಾಭವ’ ದಲ್ಲಿ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನೂ ನೀಡಿದ್ದಾರೆ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ತಂಡದೊಂದಿಗೆ, ನೃತ್ಯ ಶಂಕರದಲ್ಲಿ ಕೊಡವೂರು, ಉಡುಪಿ; ಗೋಕರ್ಣ ಚಾತುರ್ಮಾಸ್ಯ, ಎಡನೀರು ಚಾತುರ್ಮಾಸ್ಯ, ಸೇವಾ ಸದನ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ನಡೆದ ನಿರಂತರ ನೃತ್ಯೋತ್ಸವ, ಹಾಗೂ ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರಿನಲ್ಲಿ ನಡೆದ ಸಮನ್ವಯ ನೃತ್ಯೋತ್ಸವ ‘ನೃತ್ಯ ರಂಗೋಲಿ’ ಮುಂತಾದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಬಹುಮುಖ ಪ್ರತಿಭೆ:
ಭರತನಾಟ್ಯದ ಜೊತೆಗೆ ವಸುಧಾ ಜಿ. ಎನ್. ಅವರು ಕರ್ನಾಟಕ ಶಾಸ್ತಿçÃಯ ಸಂಗೀತವನ್ನು ವಿದುಷಿ ಪ್ರೀತಿಕಲಾ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ಯಕ್ಷಗಾನ ತರಬೇತಿಯನ್ನು ಪಡೆದು, ಪ್ರಮುಖ ಪಾತ್ರಗಳನ್ನು ರಂಗದಲ್ಲಿ ನಿರ್ವಹಿಸಿದ್ದಾರೆ. “ಯಕ್ಷಗಾನದಲ್ಲಿ ರಸಾನುಭವ”, “ಯಕ್ಷಗಾನ ಪೂರ್ವರಂಗ”, “ಯಕ್ಷ ಶಿಕ್ಷಕರ ಶಿಬಿರ” ಹೀಗೆ ವಿವಿಧ ಯಕ್ಷಗಾನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಶ್ರೀ ಸೋಮನಾಥೇಶ್ವರ ದೇವಸ್ಥಾನ ಇರಾ ಇಲ್ಲಿನ ತಾಳಮದ್ದಳೆ ತಂಡದ ಖಾಯಂ ಅರ್ಥಧಾರಿಯಾಗಿಯೂ ಆಗಿದ್ದಾರೆ. ಉಮೇಶ್ ಮಾರ್ನಬೈಲು ಅವರಲ್ಲಿ ಹಾರ್ಮೋನಿಯಂ ತರಬೇತಿ, ಮಂಜುಳಾ ಸುಬ್ರಮಣ್ಯ ಭಟ್ ಅವರಲ್ಲಿ ಗಮಕವಾಚನ ಹಾಗೂ ವ್ಯಾಖ್ಯಾನ ತರಬೇತಿ ಮತ್ತು ವಸುಧಾರಾ ಮಹಿಳಾ ಕುಣಿತ ಭಜನಾ ತಂಡಗಳ ಮೂಲಕ ವಿವಿಧ ಕಡೆಗಳಲ್ಲಿ ಭಜನಾ ಸೇವೆ ನೀಡಿರುವುದು ಇವರ ಬಹುಮುಖ ಪ್ರತಿಭೆಯ ದ್ಯೋತಕವಾಗಿದೆ.


ಶ್ರೀ ಮೂಕಾಂಬಿಕಾ 30ರ ಮಾರ್ದನಿ
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಕಳೆದ ಮೂರು ದಶಕಗಳಿಂದ ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣ, ಪ್ರದರ್ಶನ ಮತ್ತು ಪ್ರಸಾರದ ಮೂಲಕ ಭಾರತೀಯ ಶಾಸ್ತ್ರೀಯ ಕಲಾಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿರುವ ಸಾಂಸ್ಕೃತಿಕ ಸಂಸ್ಥೆಯಾಗಿದೆ. ಆರಂಭಿಕ ಹಂತದಿಂದ ಉನ್ನತ ಹಂತದವರೆಗೆ ಭರತನಾಟ್ಯದ ತರಬೇತಿ, ರಂಗಪ್ರವೇಶ ತರಬೇತಿ, ಏಕವ್ಯಕ್ತಿ ಪ್ರದರ್ಶನ ತರಬೇತಿ, ವಿವಿಧ ನೃತ್ಯ ಸ್ಪರ್ಧೆಗಳಿಗೆ ತರಬೇತಿ, ನೃತ್ಯ ಪರೀಕ್ಷೆಗಳ ಮಾರ್ಗದರ್ಶನ, ವಾರ್ಷಿಕೋತ್ಸವಗಳು ಈ ಸಂಸ್ಥೆಯ ಪ್ರಮುಖ ತರಬೇತಿಗಳಾಗಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆರಂಭಿಕ ಹಂತದಿಂದ ಉನ್ನತ ಹಂತದವರೆಗೆ ತರಬೇತಿ ನೀಡುವುದರೊಂದಿಗೆ ವೇದಿಕಾ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಿಕೊಡುವ ಈ ಸಂಸ್ಥೆ ಕ್ರಿಯಾಶೀಲವಾಗಿರುತ್ತದೆ. ಪುತ್ತೂರನ್ನು ಕೇಂದ್ರವಾಗಿಸಿಕೊಂಡ ಈ ಸಂಸ್ಥೆಯ ಪ್ರಮುಖ ಶಾಖೆಗಳಾಗಿ ಕಾವು, ನೆಲ್ಯಾಡಿ, ಕೊಕ್ಕಡ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮತ್ತು ಸಿ.ಬಿ.ಎಸ್.ಇ. ಶಾಲೆ ಪುತ್ತೂರು, ಸುಧಾನ ಶಾಲೆ ಪುತ್ತೂರು, ಬೆಟ್ಟಂಪಾಡಿ, ಮಾಣಿ, ಬಿ.ಸಿ.ರೋಡ್, ಕಲ್ಲಡ್ಕದ ಶ್ರೀ ರಾಮ ಶಾಲೆ ಇತ್ಯಾದಿ ಶಾಖೆಗಳಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ನೃತ್ಯಾಂತರಂಗ, ನರ್ತನಾವರ್ತನ, ನೃತ್ಯೋತ್ಮಮಣ, ಪ್ರಕೃತಿ-ಸಂಸ್ಕೃತಿ, ಪರಂಪರಾಧಾರೆ ಇವು ಸಂಸ್ಥೆಯ ಪ್ರಮುಖ ಕಲಾ ಉಪಕ್ರಮಗಳು. ಶ್ರೀ ಮೂಕಾಂಬಿಕಾ ಕಲ್ಕರಲ್ ಅಕಾಡೆಮಿಯ ಕಲಾವಿದರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ “ಫೆಸ್ಟಿವಲ್ಸ್ ಆಫ್ ಇಂಡಿಯಾ ಅಬ್ರೋಡ್” ಕಾರ್ಯಕ್ರಮಕ್ಕೆ ಎಂಪ್ಯಾನೆಲ್ಡ್ ಕಲಾವಿದರಾಗಿದ್ದಾರೆ. ಪ್ರಸ್ತುತ ಶ್ರೀ ಮೂಕಾಂಬಿಕಾ ಕಲ್ಕರಲ್ ಅಕಾಡೆಮಿ ಪುತ್ತೂರು ತನ್ನ 30ನೇ ವರ್ಷದ ಕಲಾಸೇವೆಯ ಸಂತೋಷವನ್ನು ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎಂಬ ಹೆಸರಲ್ಲಿ ಸಂಭ್ರಮಿಸುತ್ತಿದೆ. 2026ರ ಅಕ್ಟೋಬರ್ 2 ಮತ್ತು 3ರಂದು ನಡೆಯಲಿರುವ ಮಹೋತ್ಸವವು ಸಂಸ್ಥೆಯ ಮೂರು ದಶಕಗಳ ಕಲಾಯಾನ ಗಾಥೆಯಾಗಿದೆ.


ತುಳು ಭಾಷೆಗೂ ಮಹತ್ವ
ತುಳು ಭಾಷೆಯಲ್ಲಿನ ಸಾಹಿತ್ಯಕ್ಕೆ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯದ ಸ್ಪರ್ಶ ನೀಡುವ ಮೂಲಕ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗವೊಂದು ನಡೆಯಲಿದೆ. ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಅವರು ರಚಿಸಿರುವ ಜನಪ್ರಿಯ ತುಳು ಕೃಷ್ಣ ಭಕ್ತಿಗೀತೆಗೆ ಶಾಸ್ತ್ರೀಯ ರೂಪ ನೀಡಿ, `ಪದಂ’ ರೂಪದಲ್ಲಿ ಭರತನಾಟ್ಯ ಪ್ರಸ್ತುತಿ ಮಾಡಲಾಗುತ್ತಿದೆ. ವಿದ್ವಾನ್ ಬಿ. ದೀಪಕ್ ಕುಮಾರ್ ನೃತ್ಯ ಸಂಯೋಜನೆ ಮಾಡಿದ್ದು, ವಿದುಷಿ ಪ್ರೀತಿಕಲಾ ಅವರು ಹಾಡಿಗೆ ರಾಗ ಸಂಯೋಜನೆ ಮಾಡಿದ್ದು, ಗೀತೆಯನ್ನು ಶಾಸ್ತ್ರೀಯ ರೂಪದಲ್ಲಿ ಹಾಡಲಿದ್ದಾರೆ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ಈ ಪ್ರಯೋಗವನ್ನು ಈ ಹಿಂದೆ ಮಂಗಳೂರಿನಲ್ಲಿ ನಡೆಸಲಾಗಿದ್ದು, ಇದೀಗ ಪುತ್ತೂರಿನಲ್ಲಿ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಪ್ರಸ್ತುತಪಡಿಸಲಾಗುತ್ತಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆ ಸ್ವತಂತ್ರ ಲಿಪಿಯನ್ನೂ ಹೊಂದಿದ್ದು, ಪಂಚದ್ರಾವಿಡ ಭಾಷೆಗಳಲ್ಲಿ ಸಂಪದ್ಭರಿತವಾದ ಶ್ರೇಷ್ಠ ಭಾಷೆಯಾಗಿದೆ. ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಇಂತಹ ಕಲಾತ್ಮಕ ಹಾಗೂ ಸಾಂಸ್ಕೃತಿಕ ಪ್ರಯೋಗಗಳು ಮಹತ್ವದ ಪಾತ್ರ ವಹಿಸಲಿವೆ.

LEAVE A REPLY

Please enter your comment!
Please enter your name here