






ಪುತ್ತೂರು: ಶಿಸ್ತು, ಸಮಯ ಪಾಲನೆ, ಕರ್ತವ್ಯ ನಿಷ್ಟೆಗೆ ಮಾದರಿ ಆಗಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿಂತನೆ ಮತ್ತು ಕಾರ್ಯಕ್ಷಮತೆ ಇಂದಿನ ಸಿವಿಲ್ ಇಂಜಿನಿಯರ್‌ಗಳಿಗೆ ಸದಾ ಪ್ರೇರಣೆ. ಈ ನಿಟ್ಟಿನಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್ ವತಿಯಿಂದ ಎಂಜಿನಿಯರ್ಸ್ ಡೇ ಸಮಾರಂಭ ಸೆ.20ರಂದು ಸಂಜೆ 5 ಗಂಟೆಗೆ ಪುತ್ತೂರು ದರ್ಬೆಯ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಎಸಿಸಿಇ(ಐ) ಅಧ್ಯಕ್ಷ ಶಿವರಾಮ ಎಂ.ಎಸ್. ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ನಮ್ಮ ಅಸೋಸಿಯೇಶನ್‌ನ ಮುಖ್ಯ ಉದ್ದೇಶ ಇಂಜಿನಿಯರ್ಸ್ ಗಳ ವೃತ್ತಿಪರ ಗೌರವರಗಳನ್ನು ಕಾಪಾಡುವ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರವನ್ನು ಇನ್ನಷ್ಟು ಬಲಪಡಿಸುವುದಾಗಿದೆ. ಹಾಗಾಗಿ ಸದಸ್ಯರ ಕಾರ್ಯ ಕೌಶಲ್ಯಗಳಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಸಿಸಿಇ(ಐ) ಪುತ್ತೂರು ಸೆಂಟರ್‌ನಲ್ಲಿ 170 ಮಂದಿ ಸದಸ್ಯರಿದ್ದು, ಈ ಬಾರಿಯ ಸಮಾರಂಭವನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಭಟ್ ಉದ್ಘಾಟಿಸಲಿದ್ದಾರೆ. ಮಂಗಳೂರು ಎನ್‌ಎಂಪಿಟಿಯ ತಾಂತ್ರಿಕ ಸಲಹೆಗಾರ ಡಾ. ದಯಾನಂದ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಹಿರಿಯ ಇಂಜಿನಿಯರ್‌ಗಳಾದ ಕೇಶವ ಭಟ್ ಹಾಗೂ ಆಲಿ ಕುಂಞ ಅವರನ್ನು ಸನ್ಮಾನಿಸಲಾಗುವುದು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದಲ್ಲಿ ಹೆಚ್ಚಿನ ಅಂಕ ಗಳಿಸಿದ ಇಬ್ಬರು ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಸಂಸ್ಥೆಯ ಸದಸ್ಯರಿಗೆ `ಇನ್‌ಸ್ಟಾ ಎಂಜಿನಿಯರ್ ಅವಾರ್ಡ್’ ನೀಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್‌ನ ಕೋಶಾಧಿಕಾರಿ ಕಾವ್ಯಶ್ರೀ, ಆಡಳಿತ ಮಂಡಳಿ ನಿರ್ದೇಶಕ ಶಿವಪ್ರಸಾದ್ ಟಿ, ಸಮಿತಿ ಸದಸ್ಯ ನಮಿತ ಉಪಸ್ಥಿತರಿದ್ದರು.
ಮಕ್ಕಳಿಗೆ ವಿವಿಧ ಸ್ಪರ್ಧೆ:
ಸೆ.15ರಂದು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ 3ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಅಂತರ್ ಶಾಲಾ ಸ್ಪರ್ಧೆಗಳನ್ನು ನಡೆಸಲಾಗುವುದು. ಎಂಜಿನಿಯರ್ಸ್ ಡೇ ಅಂಗವಾಗಿ ಸಂಸ್ಥೆಯ ಸದಸ್ಯರು ಹಾಗೂ ಮಕ್ಕಳಿಗಾಗಿ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಆಯೋಜಿಸಲಾಗಿದೆ.
ಶಿವರಾಮ ಎಂ.ಎಸ್
ಅಧ್ಯಕ್ಷರು ಎಸಿಸಿಇ(ಐ) ಪುತ್ತೂರು ಸೆಂಟರ್












