ಕುಂಬ್ರ: ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು-ವರ್ತಕರಲ್ಲಿ ಜಾಗೃತಿ ಮೂಡಿಸಲು ಕುಂಬ್ರ `ವರ್ತಕರ ಸಂಘ’ದ ವಿನೂತನ ಅಭಿಯಾನ

0

ಪುತ್ತೂರು : ಶಾಲಾ, ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಹಾಗೂ ಇತ್ತೀಚಿನ ಆನ್‌ಲೈನ್ ಆರ್ಥಿಕ ವಂಚನೆ ತಡೆಯುವ ನಿಟ್ಟಿನಲ್ಲಿ ಕುಂಬ್ರ ವರ್ತಕರ ಸಂಘದ ವತಿಯಿಂದ ಪ್ರಮುಖ ಜಾಗೃತಿ ಹಾಗೂ ಮನವಿ ಅಭಿಯಾನವನ್ನು ಹಮ್ಮಿಕೊಂಡಿತು. ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆಯವರ ನೇತೃತ್ವದಲ್ಲಿ ಸೆ.16 ರಂದು ವರ್ತಕರ ಸಂಘದ ಪದಾಧಿಕಾರಿಗಳು ಎಲ್ಲಾ ಅಂಗಡಿ ಮಾಲಕರ ಬಳಿಗೆ ತೆರಳಿ ಈ ಮನವಿ ಹಾಗೂ ಜಾಗೃತಿ ಪತ್ರವನ್ನು ನೀಡಿ ಸಹಕಾರ ನೀಡುವಂತೆ ಕೇಳಿಕೊಂಡರು.

ಕುಂಬ್ರ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲರು ಸಂಘಕ್ಕೆ ನೀಡಿದ ಮನವಿಯಂತೆ ಕುಂಬ್ರ ವರ್ತಕರ ಸಂಘವು ಸ್ಥಳೀಯ ವ್ಯಾಪಾರಿಗಳಿಗೆ ಜಾಗೃತಿ ಮನವಿ ಪತ್ರವನ್ನು ನೀಡಿದ್ದು ಕಾಲೇಜು ವೇಳೆಯಲ್ಲಿ ವಿದ್ಯಾರ್ಥಿಗಳು ಅನಗತ್ಯವಾಗಿ ಅಂಗಡಿಗಳಲ್ಲಿ ಕುಳಿತುಕೊಳ್ಳುವುದು, ಸಮಯ ಕಳೆಯುವುದು ಮತ್ತು ಅಂಗಡಿಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಇಟ್ಟು ಹೋಗುವುದರಿಂದ ಅವರ ಶೈಕ್ಷಣಿಕ ಚಟುವಟಿಕೆ ಮತ್ತು ಶಿಸ್ತಿನ ಮೇಲೆ ಸೃಜನಶೀಲ ಪರಿಣಾಮ ಬೀರುತ್ತದೆ. ಆದ್ದರಿಂದ ಅಂಗಡಿ ಮಾಲೀಕರು ವಿದ್ಯಾರ್ಥಿಗಳು ಅನಗತ್ಯವಾಗಿ ಕುಳಿತುಕೊಳ್ಳಲು ಹಾಗೂ ಮೊಬೈಲ್ ಇಡಲು ಅವಕಾಶ ನೀಡಬಾರದು ಎಂದು ವಿನಂತಿಸಲಾಗಿದೆ.

ಅಂಗಡಿಗಳು ಕೇವಲ ವ್ಯಾಪಾರದ ಸ್ಥಳವಲ್ಲದೆ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಸ್ತಿನ ದೃಷ್ಟಿಯಿಂದ ಕಾಲೇಜು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸುವುದು ಪ್ರತಿಯೊಬ್ಬ ವ್ಯಾಪಾರಿಯ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಸಂಘ ಕರೆ ನೀಡಿದೆ. ಪ್ರಾಂಶುಪಾಲರು ಹಾಗೂ ಶಾಲಾ ಅಭಿವೃದ್ಧಿ ಕಾರ್ಯಾಚರಣೆ ಸಮಿತಿಯು ಸಹ ಈ ನಿಟ್ಟಿನಲ್ಲಿ ಕಾಲೇಜು ಸುತ್ತಮುತ್ತಲಿನ ಶಿಸ್ತು ಮತ್ತು ಸುರಕ್ಷತೆಗೆ ಸಹಕರಿಸುವಂತೆ ವರ್ತಕರ ಸಂಘಕ್ಕೆ ವಿನಂತಿಸಿಕೊಂಡಿದ್ದರು.

ವರ್ತಕರಿಗೆ ಆನ್‌ಲೈನ್ ವಂಚನೆ ತಡೆ ಕುರಿತು ಜಾಗೃತಿ ಪತ್ರ
ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕರು ಹಾಗೂ ವರ್ತಕರಿಗೆ ಆನ್‌ಲೈನ್ ಮತ್ತು ಯುಪಿಐ ಮೂಲಕ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ತಡೆಯಲು “ಕುಂಬ್ರ ವರ್ತಕರಿಗೆ ಜಾಗೃತಿ ಪತ್ರ” ಕರಪತ್ರಗಳನ್ನು ವಿತರಿಸಲಾಯಿತು. ಅಪರಿಚಿತ ಕರೆಗಳು/ಸಂದೇಶಗಳನ್ನು ನಂಬದಿರುವುದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಸ್ವೀಕರಿಸುವಾಗ ಹಣ ಖಾತೆಗೆ ಜಮೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು.ಓಟಿಪಿ, ಯುಪಿಐ, ಎಟಿಎಂ ಪಿನ್ ಹಾಗೂ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಪೋಲಿಸರಿಗೆ ಅಥವಾ ವರ್ತಕರ ಸಂಘದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಎಚ್ಚೆತ್ತುಕೊಳ್ಳಲು ವಿನಂತಿಸಲಾಗಿದೆ.

ಕಾಲೇಜು ಪ್ರಾಂಶುಪಾಲರಿಗೆ ಮನವಿ
ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ ವರ್ತಕರ ಸಂಘವು ಅನಿವರ‍್ಯವಾಗಿ ಶಾಲೆ, ಕಾಲೇಜಿಗೆ ಮೊಬೈಲ್ ಫೋನ್ ತರಬೇಕಾದಾಗ ಬೆಳಗ್ಗೆ ಕಛೇರಿಯಲ್ಲಿ ಇಟ್ಟು ಸಂಜೆ ತೆರಳುವಾಗ ಮತ್ತೆ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಶಾಲೆ,ಕಾಲೇಜು ವತಿಯಿಂದ ಮಾಡಿಕೊಡಬೇಕು, ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಪೋಷಕರು ಗಂಭೀರ ಚಿಂತನೆ ಮಾಡಬೇಕಾಗಿದೆ ಇನ್ನು ಅಂಗಡಿಗಳಲ್ಲಿ ಮೊಬೈಲ್ ಫೋನ್‌ಗಳನ್ನು ಇಟ್ಟುಕೊಳ್ಳುವ ಜವಬ್ದಾರಿ ವರ್ತಕರ ಸಂಘದ್ದು ಆಗಿರುವುದಿಲ್ಲ, ಇದಕ್ಕೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕಾಗಿದೆ, ಮಕ್ಕಳ ಸುರಕ್ಷತೆ, ಶಿಸ್ತು ಹಾಗೂ ಶಿಕ್ಷಣದ ಹಿತದೃಷ್ಟಿಯಿಂದ ಸಹಕರಿಸುವಂತೆ ಅವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ.



ಸುರಕ್ಷಿತ ವ್ಯವಹಾರ - ಸಬಲ ಕುಂಬ್ರ" ಧ್ವೇಯದೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಭದ್ರತೆಗೆ ಸಹಕರಿಸಲು ವರ್ತಕರ ಸಂಘ ಸದಾ ಸಿದ್ಧವಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.ಈ ಅಭಿಯಾನದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಮಾಜಿ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ನಾರಾಯಣ ಕುಕ್ಕುಪುಣಿ, ಅಜಿತಾ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ,ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಮೊಬೈಲ್ ಫೋನ್‌ಗಳನ್ನು ತಂದು ಅಂಗಡಿಗಳಲ್ಲಿ ಇಟ್ಟು ಹೋಗುತ್ತಾರೆ ಎಂದು ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಪೋಷಕರು ತಿಳಿಸಿದ ವಿಷಯದಲ್ಲಿ ಕಾಲೇಜು ಪ್ರಾಂಶುಪಾಲರು ನಮ್ಮ ಸಂಘಕ್ಕೆ ಮನವಿಯೊಂದನ್ನು ಮಾಡಿ ಮೊಬೈಲ್ ಫೋನ್‌ಗಳನ್ನು ತೆಗೆದುಕೊಳ್ಳದಂತೆ ಕೇಳಿಕೊಂಡಿದ್ದರು ಅದರಂತೆ ನಾವು ಕಾಲೇಜು ಪ್ರಾಂಶುಪಾಲರಿಗೂ ಮನವಿಯೊಂದನ್ನು ಸಲ್ಲಿಸಿದ್ದೇವೆ ಹಾಗೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿ ಅಂಗಡಿ ಮಾಲಕರಿಗೆ ಮನವಿ ಪತ್ರವನ್ನು ಹಂಚುವ ಕೆಲಸವನ್ನು ಮಾಡಿದ್ದೇವೆ.’ ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ

LEAVE A REPLY

Please enter your comment!
Please enter your name here