ವಿಶ್ವಕರ್ಮ ಸಭಾಭವನದಲ್ಲಿ ವಿಶ್ವಕರ್ಮ ಪೂಜೆ-ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

0

ಪುತ್ತೂರು: ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಶ್ವಕರ್ಮ ಯುವ ಸಮಾಜದ ಸಾರಥ್ಯದಲ್ಲಿ ವಿಶ್ವಬ್ರಾಹ್ಮಣ ಸೇವಾ ಸಂಘದ ಸಹಕಾರದೊಂದಿಗೆ ವಿಶ್ವಕರ್ಮ ಪೂಜೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಸೆ.17ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನೆರವೇರಿತು.

ಬೆಳಿಗ್ಗೆ ಕೆ.ರಮೇಶ ಗೇರುಕಟ್ಟೆ ಅವರ ಆಚಾರ್ಯತ್ವದಲ್ಲಿ ವಿಶ್ವಕರ್ಮ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ನಂತರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ವಿಶ್ವಕರ್ಮ ದೇವರ ಮೆರವಣಿಗೆ ಪ್ರಾರಂಭಗೊಂಡಿತು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಕಾಷ್ಠಶಿಲ್ಪಿ ನಾರಾಯಣ ಆಚಾರ್ಯ ಪರ್ಪುಂಜ ಮೆರವಣಿಗೆಗೆ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಬೊಳುವಾರು ವಿಶ್ವಕರ್ಮ ಸಭಾಭವನದ ಬಳಿ ಸಮಾಪನಗೊಂಡಿತು.



ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ದ.ಕ. ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಹಲೆಜ್ಜಿ ಮಾತನಾಡಿ, ವಿಶ್ವಕರ್ಮ ದೇವರನ್ನು ವಿಶ್ವಕರ್ಮ ಸಮುದಾಯದವರು ಮಾತ್ರವಲ್ಲ ಇತರರು ಪೂಜಿಸುತ್ತಾರೆ. ಕನಿಷ್ಠ ಪಕ್ಷ ವಿಶ್ವಕರ್ಮ ಸಮುದಾಯದವರ ಮನೆಯಲ್ಲಿ ನಮ್ಮ ಕುಲದೇವಿಯ ಫೊಟೋ ಇಲ್ಲ. ಆದರೆ ಇತ್ತೀಚೆಗೆ ಸ್ವಲ್ಪ ಸುಧಾರಿಸುತ್ತಿದೆ. ಇನ್ನಷ್ಟು ಒಗ್ಗಟ್ಟು ಅಗತ್ಯವಿದೆ. ನಮ್ಮ ಸಮುದಾಯದ ಕಾರ್ಯಕ್ರಮಗಳಿಗೆ ಆಮಂತ್ರಣಕ್ಕೆ ಕಾಯಬೇಡಿ. ನಮ್ಮ ಕಾರ್ಯಕ್ರಮ ಎಂಬ ಭಾವನೆಯಿಂದ ಪಾಲ್ಗೊಂಡು, ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿ ಎಂದು ಹೇಳಿದ ಅವರು ಸಮಾಜ ಬಾಂಧವರು ಸರಕಾರಿ ಯೋಜನೆ, ಸಾಮಾಜಿಕ ಜಾಲತಾಣಗಳ ಸದುಪಯೋಗ ಪಡೆದುಕೊಳ್ಳಿ. ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ಸಹಕರಿಸಿ ಎಂದು ಮನವಿ ಮಾಡಿದರು.



ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ ಕೆ. ಮಾತನಾಡಿ, ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ಮೆರವಣಿಗೆ ಯಶಸ್ವಿಯಾಗಿ ನಡೆದಿದೆ. ಸಂಘದ ಕಾರ್ಯಕ್ರಮಗಳಿಗೆ ಹಲವು ದಾನಿಗಳು ಕೊಡುಗೆಯನ್ನು ನೀಡಿದ್ದು ಸಹಕರಿಸಿದ ಪ್ರತಿಯೊಬ್ಬರ ಸೇವೆಯನ್ನು ಸ್ಮರಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ವಿಶ್ವಕರ್ಮ ಪೂಜೆಯ ಜೊತೆಗೆ ವಿಶ್ವಕರ್ಮ ದೇವರ ಮೆರವಣಿಗೆ ನಡೆಸಿಕೊಂಡು ಬರುತ್ತಿದ್ದು ಸಮಾಜ ಬಾಂಧವರೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ದಿವ್ಯಾಂಗ ಚೇತನ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪ್ರಥಮ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಶ್ವಕರ್ಮ ಯುವ ಸಮಾಜಕ್ಕೆ ಸದಸ್ಯರಾಗಿ ಸೇರ್ಪಡೆಯಾದವರನ್ನು ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ಶಾಲು ಹಾಕಿ ಸ್ವಾಗತಿಸಿದರು. ವಿಶ್ವಕರ್ಮ ದೇವರ ಮೆರವಣಿಗೆಯಲ್ಲಿ ಪಾಲ್ಗೊಂಡ ಸಂಘ ಸಂಸ್ಥೆಗಳ ಪ್ರಮುಖರನ್ನು ಗೌರವಿಸಲಾಯಿತು.

ಪುರೋಹಿತ್ ರಮೇಶ್ ಆಚಾರ್ಯ ಗೇರುಕಟ್ಟೆ ಪ್ರಾರ್ಥಿಸಿದರು. ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ದೀಕ್ಷಿತ್ ಆಚಾರ್ಯ ಅತಿಥಿಗಳ ಪರಿಚಯ ಮಾಡಿದರು. ಗೋಪಾಲ ಆಚಾರ್ಯ ವಂದಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಆನಂದ ಆಚಾರ್ಯ ಅಜ್ಜಿನಡ್ಕ ಹಾಗೂ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಶಾಂತಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರದ ಬಳಿಕ ಭೋಜನ ನೆರವೇರಿತು.

ಪ್ರತಿಭಾ ಪುರಸ್ಕಾರ:
ಕಾರ್ಯಕ್ರಮದಲ್ಲಿ ಅಪರಾಹ್ನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಮಾಡಿದ ಸವಣೂರು ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ಕಿಶನ್ ಮಾತನಾಡಿ, ಪ್ರಸ್ತುತ ಯಾಂತ್ರಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಜ್ಞಾನದೊಂದಿಗೆ ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕು. ಪ್ರತಿಯೊಬ್ಬರು ಶಿಕ್ಷಣದ ಮಹತ್ವ ಅರಿತು ಕೊಂಡು ಶಿಕ್ಷಣ ಪಡೆದಾಗ ಉನ್ನತ ಸ್ಥಾನಮನ ಪಡೆಯಲು ಸಾಧ್ಯ, ಶಿಕ್ಷಣದ ಜೊತೆಗೆ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀಧರ ಆಚಾರ್ಯ ಮಾತನಾಡಿ, ವಿದ್ಯೆಯೊಂದಿಗೆ ವಿದ್ಯಾರ್ಥಿಗಳು ವಿನಯ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಮಹಿಳಾ ಮಂಡಳಿ ಸದಸ್ಯೆ ಸುನೀತಾ ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಎನ್. ಪ್ರಸ್ತಾವಣೆಗೈದರು. ಮಹಿಳಾ ಮಂಡಳಿಯ ಉಷಾ ಸದಾನಂದ ಆಚಾರ್ಯ ಹಾಗೂ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಳಿಯ ಅಧ್ಯಕ್ಷೆ ಶಾಂತಿ ಸತೀಶ್ ವಂದಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ವಸಂತ ಆಚಾರ್ಯ, ಆನಂದ ಆಚಾರ್ಯ, ಮಹಿಳಾ ಮಂಡಳಿ ಕಾರ್ಯದರ್ಶಿ ಭವಾನಿ ಆಚಾರ್ಯ, ಉಪಾಧ್ಯಕ್ಷೆ ಶಾಂತಾ ಉಪೇಂದ್ರ ಆಚಾರ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here