







ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಡಾ|ಜೆ.ಬಿ.ಸಲ್ದಾನ್ಹ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಚಿರಋಣಿಗಳಾಗಿರಬೇಕು. ಒಳ್ಳೆಯ ಮಕ್ಕಳಾಗುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ಕೊಡುವ ಬಹುದೊಡ್ಡ ಬಹುಮಾನ ಎಂದು ಸಂದೇಶ ನೀಡಿದರು. ಮುಖ್ಯ ಅತಿಥಿ, ಸಂಸ್ಥೆಯ ಹಿರಿಯ ಶಿಕ್ಷಕಿ ಕಾರ್ಮಿನ್ ಪಾಯ್ಸ್ ಮಾತನಾಡಿ ಶುಭಹಾರೈಸಿದರು. ಶಿಕ್ಷಕಿ ಸಂಧ್ಯಾ ಕೆ.ಎನ್., ಮಾಯ್ ದೆ ದೆವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಶನ್ ಲಸ್ರಾದೊ, ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷ ಬಾಬು ಮರಿಕೆ, ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜ, ಶಾಲಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಶಾಲಾ ವಿದ್ಯಾರ್ಥಿನಾಯಕ ಅನ್ವಿತ್ ಬಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಫಾತಿಮತ್ ಮುರ್ಶೀದಾ ದಿನದ ಮಹತ್ವದ ಕುರಿತು ಮಾತನಾಡಿದರು. ಎಲ್ಲಾ ಶಿಕ್ಷಕರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಲಾಯಿತು. ವಲಯ ಮತ್ತು ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಹಾಗೂ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿಜೇತರನ್ನು ಗೌರವಿಸಲಾಯಿತು. ವಿದ್ಯಾರ್ಥಿ ಉಪನಾಯಕಿ ಕು.ಖತಿಜತ್ ಲಿಬಾ ವಂದಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ಕ್ಲೆಮೆಂಟ್ ಪಿಂಟೋ, ರೋಶನ್ ಸಿಕ್ವೇರಾ, ನರೇಶ್ ಲೋಬೋ ಮತ್ತು ರೇಷ್ಮಾ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ವರ್ಗದವರು ಸಹಕರಿಸಿದರು.













