







ಉಪ್ಪಿನಂಗಡಿ: ಮನುಕುಲಕ್ಕೆ ಮಾತೃ ಸ್ವರೂಪಿಯಾಗಿರುವ ಗೋವಿನ ರಕ್ಷಣೆಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೈಗೊಂಡಿರುವ ಗೋ ಸನ್ಮಾನ ಅಭಿಯಾನದ ಸಹಿ ಸಂಗ್ರಹಣಾ ಕಾರ್ಯಕ್ಕೆ ಇಲ್ಲಿನ 50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಚಾಲನೆ ನೀಡಿದರು.


ಉತ್ಸವಕ್ಕೆ ಆಗಮಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶ್ರೀ ಮಹಾಗಣಪತಿಯ ದರ್ಶನ ಪಡೆದು, ಮಹಾಪೂಜಾ ಕೈಂಕರ್ಯಗಳಲ್ಲಿ ಭಕ್ತಿಯಿಂದ ಪಾಲ್ಗೊಂಡ ಬಳಿಕ ಸಮಿತಿಯ ಪ್ರಮುಖರೊಂದಿಗೆ ಸೇರಿ ಅಭಿಯಾನದ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿ, ಹಬ್ಬ-ಹರಿದಿನಗಳ ಧಾರ್ಮಿಕ ಆಚರಣೆಗಳ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾದ ಗೋವಂಶ ರಕ್ಷಣೆ ಹಾಗೂ ಗೋಸೇವೆಯಂತಹ ಸತ್ಕಾರ್ಯಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಕೈಜೋಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗೋವಿನ ಮಹತ್ವ ಹಾಗೂ ಸಂರಕ್ಷಣೆಯ ಕುರಿತು ನಿರಂತರವಾಗಿ ಜನಜಾಗೃತಿ ಮೂಡಿಸಲಾಗುವುದು,” ಎಂದು ತಿಳಿಸಿದರು.



?ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೋ ಸನ್ಮಾನ ಅಭಿಯಾನ ಸಮಿತಿಯ ಸಹ ಪ್ರಭಾರಿ ಅಶೋಕ್ ಇಳಂತಿಲ, ವ್ಯವಸ್ಥಾ ಪ್ರಮುಖರಾದ ಹೇರಂಭ ಶಾಸ್ತ್ರಿ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ವಿದ್ಯಾಧರ ಜೈನ್, ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಬಿಜೆಪಿ ಯು ಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ ಉಪ್ಪಿನಂಗಡಿ, ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಪದಾಧಿಕಾರಿಗಳಾದ ವಿಜಯಕುಮಾರ್ ಕಲ್ಲಳಿಕೆ, ಕೀರ್ತನ್ ಕುಮಾರ್ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಕೆ. ಜಗದೀಶ್ ಶೆಟ್ಟಿ, ಸದಾನಂದ ಪೂಜಾರಿ, ಸಂತೋಷ್ ಕುಮಾರ್ ಪಂರ್ದಾಜೆ ಮತ್ತಿತರರು ಉಪಸ್ಥಿತರಿದ್ದರು.
ಸಹಸ್ರ ಮೋದಕ ಗಣಯಾಗ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗೆ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಮೋದಕ ಗಣಯಾಗ ನಡೆಯಿತು. ಸಂಜೆ ಶ್ರೀ ಮಧೂರು ಮಾಧವ ಮಯ್ಯ ಮತ್ತು ಬಳಗದವರಿಂದ ಭಜನ್ ಸಂಧ್ಯಾ, ಹಾಗೂ ದೋಸೆ ಕ್ಯಾಂಪ್ ನಡೆಯಿತು. ರಾತ್ರಿ ರತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.










