ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನ : ಸೆ.20ರಂದು ಸುವರ್ಣ ಸಂಭ್ರಮ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನ(ರಿ) ವು ಯಕ್ಷಗಾನ ಕಲಾ ಸೇವೆಯಲ್ಲಿ ಸತತ 50 ವರ್ಷಗಳನ್ನು ಪೂರ್ಣೈಸಿದ್ದು, ಅದರ ಅಂಗವಾಗಿ ಸುವರ್ಣ ಸಂಭ್ರಮ- 2026 ಕಾರ್ಯಕ್ರಮವನ್ನು ಸೆ.20ರಂದು ಉಪ್ಪಿನಂಗಡಿಯ ಸಂಗಮ ಕೃಪಾ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಚಂದಪ್ಪ ಮೂಲ್ಯ ತಿಳಿಸಿದರು.


ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವೈದ್ಯ ಕೆ. ಎಸ್.ಶೆಟ್ಟಿಯವರ ಮಾರ್ಗದರ್ಶನದಲ್ಲಿ 28.04.1974ರಂದು ಸ್ಥಾಪನೆಗೊಂಡ ಈ ಶ್ರೀ ಕಾಳಿಕಾಂಬಾ ಯಕ್ಷಕಲಾ ಸಂಘವು ಹೆಚ್. ನಾರಾಯಣ ರಾವ್ (ಅಧ್ಯಕ್ಷ) ಬಿ .ಶಿವರಾಮ ಶೆಟ್ಟಿ (ಕಾರ್ಯದರ್ಶಿ) ಪಿ. ಹರಿಶ್ಚಂದ್ರ ಆಚಾರ್ಯ (ಉಪಾಧ್ಯಕ್ಷ) ಚಂದ್ರಶೇಖರ ಟೈಲರ್ (ಜೊತೆಕಾರ್ಯದರ್ಶಿ) ಸಂಘದ ಸ್ಥಾಪಕ ಪದಾಧಿಕಾರಿಗಳಾಗಿದ್ದರು .ಪ್ರತಿ ಶುಕ್ರವಾರ ಸದಸ್ಯರು ತಾಳಮದ್ದಳೆ ಕೂಟಗಳನ್ನು ಆಸುಪಾಸಿನ ಕಲಾವಿದರೊಂದಿಗೆ ನಿರಂತರವಾಗಿ ನಡೆಸುತ್ತಾ ಬಂದು ಪರಿಸರದಲ್ಲಿ ಯಕ್ಷಗಾನದ ಕಲಾ ಪ್ರಸಾರಕ್ಕೆ ಕಾರಣರಾಗಿದ್ದರು. 2025 ರಲ್ಲಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಹೆಸರಿನಲ್ಲಿ ಸಂಘವನ್ನು ನೋಂದಾಯಿಸಲಾಗಿದ್ದು, ಗೌರವ ಅಧ್ಯಕ್ಷರಾಗಿ ಎನ್. ಉಮೇಶ ಶೆಣೈ ರಾಮನಗರ ,ಅಧ್ಯಕ್ಷರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಉಪಾಧ್ಯಕ್ಷರಾಗಿ ಅಂಬಾ ಪ್ರಸಾದ್ ಪಾತಾಳ ಹಾಗೂ ಕೆ. ಮಹಾಲಿಂಗೇಶ್ವರ ಭಟ್, ಕಾರ್ಯದರ್ಶಿಯಾಗಿ ಶ್ರೀಪತಿ ಭಟ್ ಕೆ. ಬಿ ಉಪ್ಪಿನಂಗಡಿ , ಸಹ ಕಾರ್ಯದರ್ಶಿಯಾಗಿ ಪದ್ಮನಾಭ ಕುಲಾಲ್ ಇಳಂತಿಲ, ಖಜಾಂಚಿಯಾಗಿ ಶ್ರೀಮತಿ ಶ್ರುತಿ, ಸದಸ್ಯರಾಗಿ ಬಿ. ಸುಬ್ರಹ್ಮಣ್ಯ ರಾವ್ , ಬಿ. ಸುರೇಶ ರಾವ್ ಮತ್ತಿತರರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.


ಸಂಕಲ್ಪಿಸಿದ್ದು 50 ತಾಳಮದ್ದಳೆ. ನಡೆದದ್ದು 128 !:
ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ಶ್ರೀ ಕಾಳಿಕಾಂಬಾ ಯಕ್ಷಕಲಾ ಸಂಘ ತನ್ನ ಸುವರ್ಣ ಮಹೋತ್ಸವದ ನಿಮಿತ್ತ ಮಹಾಭಾರತದ ಕಥನವನ್ನು ಒಳಗೊಂಡ 50 ತಾಳಮದ್ದಳೆಯನ್ನು ನಡೆಸುವ ಸಂಕಲ್ಪ ತಾಳಿತ್ತು. ಆದರೆ ಯಕ್ಷಾಭಿಮಾನಿಗಳ ಪ್ರೋತ್ಸಾಹದಿಂದಾಗಿ ಈವರೆಗೆ ಜಿಲ್ಲೆಯಾದ್ಯಂತ 128 ತಾಳಮದ್ದಳೆಗಳು ಜರಗುವಂತಾಗಿದೆ ಎಂದವರು ವಿವರಿಸಿದರು.


ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಶ್ರೀ ಮಹಾಭಾರತದ ರಸ ಪ್ರಶ್ನೆ ನಡೆಸಿ ಬಹುಮಾನಗಳನ್ನು ನೀಡಲಾಗಿದೆ. ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವು ಉಪ್ಪಿನಂಗಡಿ ಸಂಗಮ ಕೃಪಾ ಸಭಾ ಭವನದಲ್ಲಿ ಸೆ.20 ರಂದು ಪೂರ್ವಾಹ್ನ ಗಂಟೆ 9 ರಿಂದ ಪ್ರಾರಂಭವಾಗಲಿದ್ದು, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್, ಉದ್ಘಾಟಿಸಲಿದ್ದಾರೆ. ಇಂದ್ರ ಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಹರೀಶ್ ಆಚಾರ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.


ಪೂರ್ವಾಹ್ನ 10ರಿಂದ ಶ್ರೀ ಮಹಾಭಾರತ ಯಕ್ಷನವರಸ ಆಶುವೈಭವ ನಡೆಯಲಿದ್ದು, ಮಧ್ಯಾಹ್ನ 12ರಿಂದ ಯಕ್ಷಗಾನ ವಿದ್ವಾಂಸ ತಾಳ್ತಜೆ ಕೃಷ್ಣ ಭಟ್ಟ ಸಂಸ್ಮರಣೆ ಕಾರ್ಯಕ್ರಮವು ಡಾ. ವಸಂತ ಕುಮಾರ ತಾಳ್ತಜೆ ಅದ್ಯಕ್ಷತೆಯಲ್ಲಿ ಜರಗಲಿದೆ. ಅಪರಾಹ್ನ ಗಂಟೆ 2 ರಿಂದ ಪ್ರಸಿದ್ಧ ಕಲಾವಿದರಿಂದ ಗೀತೋಪದೇಶ ತಾಳಮದ್ದಳೆ, ಸಾಯಂಕಾಲ 4 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ಕ್ಷೇತ್ರದ ಹರಿನಾರಾಯಣದಾಸ ಅಸ್ರಣ್ಣ ಆಶೀರ್ವಚನ ನೀಡಲಿದ್ದು, ಅತಿಥಿಗಳಾಗಿ ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ ಸುವರ್ಣ, ಮಂಗಳೂರು ಎಸ್. ಕೆ. ಜಿ. ಐ. ಸೊಸೈಟಿಯ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ದಂತ ವೈದ್ಯ ಡಾ.ರಾಜಾರಾಮ ಕೆ. ಬಿ. ಭಾಗವಹಿಸಲಿದ್ದಾರೆ. ಈ ಸಂದರ್ಭ ‘ಸ್ವರ್ಣ ಕಾಯಕ’ ಸ್ಮರಣ ಸಂಚಿಕೆಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಲಿದ್ದು, ‘ಸ್ವರ್ಣ ಸ್ಮೃತಿ’ ಗೌರವವನ್ನು ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರಿಗೆ ಪ್ರಧಾನ ಮಾಡಲಾಗುವುದು. ಅಲ್ಲದೇ, ಯಕ್ಷ ಸಂಘಟಕ ಬಿ.ಭುಜಬಲಿ ಧರ್ಮಸ್ಥಳ, ಕಲಾವಿದ ಗಣರಾಜ ಕುಂಬ್ಳೆ, ಸಂಘದ ಸ್ಥಾಪಕ ಸದಸ್ಯ ದುಗ್ಗಪ್ಪ ಗೌಡ ಪೆದಮಲೆ, ಕಲಾ ಪೋಷಕರಾದ ಉಮೇಶ ಶೆಣೈ ರಾಮನಗರ ,ಸುರೇಶ ಪುತ್ತೂರಾಯ, ಕಲಾವಿದ, ಲೇಖಕ ನಾ.ಕಾರಂತ ಪೆರಾಜೆ, ಶ್ರೀಮತಿ ಶೃತಿಯವರನ್ನು ಮತ್ತು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘವನ್ನು ಗೌರವಿಸಲಾಗುವುದು. ಬಳಿಕ ಪ್ರಸಿದ್ಧ ಕಲಾವಿದರಿಂದ ಶಲ್ಯ ಸಾರಥ್ಯ ತಾಳಮದ್ದಳೆ ಜರಗಲಿದೆ. ಎಂದು ಅವರು ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಸುಬ್ರಹ್ಮಣ್ಯ ರಾವ್ ಬನ್ನೆಂಗಳ, ಕೆ. ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಸಂಚಾಲಕ ರವೀಂದ್ರ ದರ್ಬೆ, ಸಹ ಸಂಚಾಲಕ ಶ್ರೀಧರ ಎಸ್.ಪಿ. ಕೃಷ್ಣಾಪುರ ಇದ್ದರು.

LEAVE A REPLY

Please enter your comment!
Please enter your name here