ಕಾಲಮಿತಿ ಆದೇಶದ ಹಿನ್ನೆಲೆ: ಸ್ತಬ್ಧಚಿತ್ರಗಳ ಸೌಂಡ್ಸ್ ಸ್ಥಗಿತ – ಟ್ಯಾಬ್ಲೋ ವೀಕ್ಷಣೆಗೆ ಕಾದಿದ್ದ ಸಾವಿರಾರು ಪ್ರೇಕ್ಷಕರಿಗೆ ನಿರಾಶೆ

0

ಪುತ್ತೂರು:ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಆದೇಶದ ಹಿನ್ನೆಲೆಯಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯಲ್ಲಿದ್ದ ಸ್ತಬ್ಧಚಿತ್ರಗಳಲ್ಲಿ ಧ್ವನಿ ಬಳಕೆಗೆ ಪೊಲೀಸರು ನಿರ್ಬಂಧಿಸಿದ ಘಟನೆ ಪುತ್ತೂರು ಗಾಂಧಿಕಟ್ಟೆ ಬಳಿ ನಡೆಯಿತು.ಗಾಂಧಿಕಟ್ಟೆಯಿಂದ ದರ್ಬೆಯವರೆಗೆ ಸ್ತಬ್ಧಚಿತ್ರಗಳ ಪ್ರದರ್ಶನ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದ ಸಾವಿರಾರು ಮಂದಿ ಪ್ರೇಕ್ಷಕರು ನಿರಾಶೆಗೊಳ್ಳುವಂತಾಯಿತು.


ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕರಥದ ಮುಂಭಾಗದಲ್ಲಿ 12ಕ್ಕೂ ಅಧಿಕ ಸ್ತಬ್ಧಚಿತ್ರಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಒಂದೊಂದಾಗಿ ಪ್ರದರ್ಶನ ನೀಡುತ್ತಾ ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದವು.ವಿಭಿನ್ನ ಪರಿಕಲ್ಪನೆ, ಕಲಾತ್ಮಕ ವಿನ್ಯಾಸ ಹಾಗೂ ಸೌಂಡ್ಸ್‌ನೊಂದಿಗೆ ಸ್ತಬ್ಧಚಿತ್ರಗಳ ಪ್ರದರ್ಶನ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.ಈ ನಡುವೆ ಶೋಭಾಯಾತ್ರೆಯು ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆ ಬಳಿಗೆ ತಲುಪುವ ವೇಳೆಗೆ ರಾತ್ರಿ 10 ಗಂಟೆ ಆದ್ದರಿಂದ ಪೊಲೀಸರು ಸ್ತಬ್ಧಚಿತ್ರಗಳಲ್ಲಿದ್ದ ಧ್ವನಿವರ್ಧಕ ಬಳಸದಂತೆ ಸೂಚಿಸಿದರು.ಪ್ರದರ್ಶನ ಆರಂಭಗೊಂಡ ಬಳಿಕ ಅದನ್ನು ಅರ್ಧದಲ್ಲೇ ಸ್ಥಗಿತಗೊಳಿಸುವುದು ಸೂಕ್ತವಲ್ಲ ಎಂದು ಸಂಘಟಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಪೊಲೀಸರು ಹಾಗೂ ಸಂಘಟಕರ ನಡುವೆ ಚರ್ಚೆ ನಡೆಯಿತು.ನಂತರ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ಮಧ್ಯಪ್ರವೇಶಿಸಿ,ನಡೆಯುತ್ತಿದ್ದ ಒಂದು ಪ್ರದರ್ಶನವನ್ನು ಪೂರ್ಣಗೊಳಿಸಲು ಅವಕಾಶ ನೀಡಿದರು.ಅದರಂತೆ ಆ ಸ್ತಬ್ಧಚಿತ್ರದ ಪ್ರದರ್ಶನ ಪೂರ್ಣಗೊಳಿಸಿದ ಬಳಿಕ ಸೌಂಡ್ಸ್ ಸ್ಥಗಿತಗೊಳಿಸಲಾಯಿತು.ಸೌಂಡ್ಸ್ ರಹಿತ ಸ್ತಬ್ಧಚಿತ್ರ ಪ್ರದರ್ಶನ ನೀರಸವೆನ್ನುವ ಕಾರಣಕ್ಕೆ ಬಸ್ ನಿಲ್ದಾಣದ ಬಳಿಯಿಂದ ಸ್ತಬ್ಧಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.ಶ್ರೀಗಣೇಶನ ವಿಗ್ರಹ ಹೊತ್ತ ಮೂಷಿಕರಥದೊಂದಿಗೆ ಭಕ್ತರು ಸಾಗಿದರು.ಸ್ತಬ್ಧಚಿತ್ರಗಳ ವೀಕ್ಷಣೆಗೆಂದೇ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಪ್ರೇಕ್ಷಕರು ಕಾದು ಕುಳಿತಿದ್ದರೂ,ನಿರೀಕ್ಷಿತ ಪ್ರದರ್ಶನ ಕಾಣದೆ ನಿರಾಶೆಯಿಂದ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಯಿತು.

LEAVE A REPLY

Please enter your comment!
Please enter your name here