







ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಆವರಣದಲ್ಲಿ ಸಕಲ ಸಿದ್ದತೆ


ಬೆಟ್ಟಂಪಾಡಿ: ಕರ್ನಾಟ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಮೈಸೂರು ವಿಭಾಗದಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಹಕಾರಿ ಧುರೀಣ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ, ಎಸ್ಸಿಡಿಸಿಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರೂ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಹುಟ್ಟೂರ ಅಭಿನಂದನಾ ಸಮಾರಂಭವು ಸೆ.20 ರಂದು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆಯಲಿದೆ.



ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಊರ ನಾಗರಿಕರಿಂದ ನಡೆಯುವ ಈ ಸನ್ಮಾನ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಶಶಿಕುಮಾರ್ ರೈ ಯವರಿಗೆ ಸ್ವಾಗತ ನಡೆಯಲಿದೆ. ಬಳಿಕ ನಡೆಯಲಿರುವ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಕರ್ನಾಟಕ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ, ಬೆಂಗಳೂರು ಚುನಾವಣಾ ಪ್ರಾಧಿಕಾರದ ಜಂಟಿ ನಿಭಂದಕ ಬಿ.ಕೆ. ಸಲೀಂ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಭಾಗವಹಿಸಲಿದ್ದಾರೆ.
ಸಹಕಾರ ಕ್ಷೇತ್ರದ ಸಕ್ರೀಯ ನಾಯಕ – ಶಶಿಕುಮಾರ್ ರೈ ಬಾಲ್ಯೊಟ್ಟು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬಾಲ್ಯೊಟ್ಟು ನಿವಾಸಿ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ, ಪುತ್ತೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ, ಜವಾಬ್ದಾರಿಯುತ ನಿರ್ವಹಣೆ ಮತ್ತು ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡುವ ಅಗತ್ಯವನ್ನು ಅವರು ವಿವಿಧ ಸಂದರ್ಭಗಳಲ್ಲಿ ಪ್ರತಿಪಾದಿಸಿದ್ದಾರೆ. 2024ರ ಡಿಸೆಂಬರ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಪುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು. ಬಳಿಕ 2025ರ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಹಕಾರ ಕ್ಷೇತ್ರದಲ್ಲಿ ಸಾಧನೆ ತೋರಿದ ವ್ಯಕ್ತಿ ರಾಜ್ಯ, ರಾಷ್ಟ್ರಮಟ್ಟದ ಪ್ರಭಾವೀ ನಾಯಕನಾಗಿಯೂ ಬೆಳೆಯಲು ಸಾಧ್ಯ ಎಂಬುದಕ್ಕೆ ಶಶಿಕುಮಾರ್ ರೈ ಉತ್ತಮ ನಿದರ್ಶನ. ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಯ ಮೈಸೂರು ವಿಭಾಗದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು 18 ಮತಗಳನ್ನೂ ಪಡೆದು ಆಯ್ಕೆಯಾಗಿರುವುದು ಹಾಗೂ 62 ವರ್ಷಗಳ ಇತಿಹಾಸದಲ್ಲಿ ಸಹಕಾರ ಮಹಾಮಂಡಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ನಿರ್ದೇಶಕರಾಗಿರುವುದು ಇವರ ಸಹಕಾರಿ ಕ್ಷೇತ್ರದ ಸಾಧನೆಯ ಹಾದಿಯಲ್ಲಿ ಅಜಾತ ಶತ್ರುವಿನಂತೆ ಬೆಳೆದಿರುವುದು ವೇದ್ಯವಾಗುತ್ತದೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ, ಬೆಂದ್ರ್ತೀರ್ಥ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ, ಪೇರ್ಲತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ, ಪಾಣಾಜೆ ಶ್ರೀ ಪೂಮಾಣಿ ಕಿನ್ನಿಮಾಣಿ, ಹುಲಿಭೂತ ದೈವಸ್ಥಾನ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಂಚಾಲಕರಾಗಿ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾಗಿಯೂ ಯಶಸ್ವೀ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಜೀರ್ಣೋದ್ಧಾರ ಕಾರ್ಯ ಪ್ರಗತಿಪಥದಲ್ಲಿ ಸಾಗುತ್ತಿದೆ.
ಅಪಾರ ಸಂತೋಷ ಹಾಗೂ ಹೆಮ್ಮೆಯ ಸಂಗತಿ – ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷರು, ಹುಟ್ಟೂರ ಅಭಿನಂದನಾ ಸಮಿತಿ
ಸಹಕಾರ ವಲಯದಲ್ಲಿ ಅಪಾರ ಅನುಭವ ಹೊಂದಿರುವ ಶಶಿಕುಮಾರ್ ರೈಯವರ ಸೇವೆ ರಾಜ್ಯದ ಸಹಕಾರ ಕ್ಷೇತ್ರದ ಅಭಿವೃದ್ಧಿಯೊಂದಿಗೆ ನಾಡಿನ ಜನತೆಗೆ, ವಿಶೇಷವಾಗಿ ಕೃಷಿ ಅವಲಂಬಿತ ಸಮುದಾಯಕ್ಕೆ ಮತ್ತಷ್ಟು ಪ್ರಯೋಜನಕಾರಿಯಾಗಲಿ ಎಂಬ ಆಶಯ ನಮ್ಮದು. ಸರಳತೆ, ಸ್ನೇಹಶೀಲತೆ ಹಾಗೂ ಜನಸಾಮಾನ್ಯರೊಂದಿಗೆ ಆತ್ಮೀಯವಾಗಿ ಬೆರೆಯುವ ಅವರ ಗುಣಗಳು ನೂತನ ಜವಾಬ್ದಾರಿಯಲ್ಲಿಯೂ ಮುಂದುವರಿಯಲಿ. ಸಹಕಾರ ಸಂಸ್ಥೆಗಳ ಬಲವರ್ಧನೆ ಮತ್ತು ಜನಪರ ಸೇವೆಗೆ ಅವರ ಅನುಭವ ಪರಿಣಾಮಕಾರಿಯಾಗಿ ಬಳಕೆಯಾಗಲಿ. ಶಶಿಕುಮಾರ್ ರೈ ಬಾಲ್ಯೊಟ್ಟು ರವರನ್ನು ಅವರ ಹುಟ್ಟೂರಿನಲ್ಲಿಯೇ ಅಭಿನಂದಿಸುವ ಅವಕಾಶ ದೊರೆತಿರುವುದು ನಮಗೆ ಅಪಾರ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಅಭೂತಪೂರ್ವ ಕಾರ್ಯಕ್ರಮವಾಗಲಿದೆ – ಪ್ರಕಾಶ್ ರೈ ಬೈಲಾಡಿ ಕಾರ್ಯದರ್ಶಿ, ಹುಟ್ಟೂರ ಅಭಿನಂದನಾ ಸಮಿತಿ
ಬೆಳಿಗ್ಗೆ ಶ್ರೀರಾಮನಗರ ಅಯ್ಯಪ್ಪ ಭಜನಾ ಮಂದಿರದಲ್ಲಿ ಮೆರವಣಿಗೆ ಉದ್ಘಾಟನೆ ನಡೆದು, ಚೆಂಡೆ, ಟ್ಯಾಬ್ಲೋ, ವಾದ್ಯ ಬ್ಯಾಂಡ್ಸೆಟ್, ಸುಡುಮದ್ದು ಪ್ರದರ್ಶನದೊಂದಿಗೆ, ಕಲಶ ಹಿಡಿದ ಮಹಿಳೆಯರ ಸಾಲಿನೊಂದಿಗೆ ತೆರೆದ ಜೀಪಿನಲ್ಲಿ ರೈಯವರ ಸ್ವಾಗತ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಸಹಭೋಜನ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನವೋದಯ ಸ್ವ-ಸಹಾಯ ಗುಂಪಿನ ಸದಸ್ಯರು ವಿಶೇಷ ಸಹಕಾರ ನೀಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರ ಭಾಷಣದ ಬಳಿಕ ನಾಗರಿಕರಿಗೆ ಪ್ರತ್ಯೇಕ ಅಭಿನಂದನೆಗೆ ಅವಕಾಶ ಇರಲಿದೆ. ನಮ್ಮೂರಿನ ಕೀರ್ತಿಯನ್ನು ರಾಜ್ಯದೆತ್ತರಕ್ಕೆ ಪಸರಿಸಿದ ಶಶಿಕುಮಾರ್ ರೈಯವರಿಗೆ ಹುಟ್ಟೂರ ಅಭಿನಂದನೆ ಅಭೂತಪೂರ್ವವಾಗಿ ನಡೆಸಲಿದ್ದೇವೆ.










