







ಸಾಮೂಹಿಕ ಗಣಪತಿ ಹವನ, ಭಜನಾ ಸಂಕೀರ್ತನೆ, ಸನ್ಮಾನ- ಸೇವಾ ಕಾರ್ಯಕ್ಕೆ ಮೆರುಗು


ಪುತ್ತೂರು: ಧಾರ್ಮಿಕ ಜಾಗೃತಿ, ಸಂಘಟನಾ ಬದ್ಧತೆ ಹಾಗೂ ಸಮಾಜಮುಖಿ ಸೇವೆಯ ಸಂಕಲ್ಪದೊಂದಿಗೆ ಕೆದಂಬಾಡಿ ಗ್ರಾಮದ ತ್ಯಾಗರಾಜ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯ 24ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.



ಸೆ.14ರಂದು ಬೆಳಗ್ಗೆ ಸಾಮೂಹಿಕ ಗಣಪತಿ ಹವನ ನಡೆಯಿತು. ಬಳಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ನಂತರ ಊರಿನ ಜನರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಥಳೀಯರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು.
ಸೆ.16ರಂದು ಸಂಜೆ ಸ್ವಾಮಿನಗರದ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತಿಭಾವದ ವಾತಾವರಣದಲ್ಲಿ ನಡೆದ ಸಂಕೀರ್ತನೆಯ ಬಳಿಕ ಅವಿನಾಶ್ ಕೊಡೆಂಕೀರಿ ಧಾರ್ಮಿಕ ಉಪನ್ಯಾಸ ನೀಡಿದರು. ನಂತರ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೋಡಿಯ ತ್ಯಾಗರಾಜ ನಗರ ಹಾಗೂ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ರವಿ ಸ್ವಾಮಿನಗರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸೇವೆಗೆ ಬೆನ್ನೆಲುಬಾದ ಕುಟುಂಬಕ್ಕೆ ಗೌರವ
ಸಂಘಟನೆಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಒಲೆಮುಂಡೋವಿನ ಮೋಹನ್ ರೈ ಅವರ ಪತ್ನಿ ಮೀರಾ ಮೋಹನ್ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘಟನಾ ಚಟುವಟಿಕೆಗಳ ಹಿಂದೆ ನಿಂತು ಸಹಕಾರ ನೀಡುತ್ತಿರುವ ಕುಟುಂಬದ ಕೊಡುಗೆಯನ್ನು ಈ ಸಂದರ್ಭ ಸ್ಮರಿಸಲಾಯಿತು.
ಗಾಯಗೊಂಡ ಕಾರ್ಯಕರ್ತನ ಚಿಕಿತ್ಸೆಗೆ ನೆರವು
ಇತ್ತೀಚೆಗೆ ಕೆಲಸದ ಸಂದರ್ಭದಲ್ಲಿ ಯಂತ್ರಕ್ಕೆ ಕೈ ಸಿಲುಕಿ ತೀವ್ರವಾಗಿ ಗಾಯಗೊಂಡ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಮಹಾಲಿಂಗ ಪಾಟಾಲಿ ಅಮೈ ಅವರ ಚಿಕಿತ್ಸೆಗೆ ಸಂಘಟನೆಯ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಸಂಕಷ್ಟದಲ್ಲಿರುವ ಕಾರ್ಯಕರ್ತನ ಕುಟುಂಬದೊಂದಿಗೆ ಸಂಘಟನೆ ನಿಂತಿರುವ ಸಂದೇಶವನ್ನು ಈ ಸೇವಾ ಕಾರ್ಯ ಸಾರಿತು.

ಅಗಲಿದವರ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥನೆ
ಇತ್ತೀಚೆಗೆ ಅಗಲಿದ ನಾರಾಯಣ ಪಾಟಾಳಿ ಪಾಪೇಜಾಲು ಹಾಗೂ ಮೋನಪ್ಪ ರೈ ಮಾಡದಗುಡ್ಡೆ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಯಶ್ ಮತ್ತು ಆಯುಷ್ ಸ್ವಾಮಿನಗರ ಪ್ರಾರ್ಥಿಸಿದರು. ಪ್ರಶಾಂತ್ ತ್ಯಾಗರಾಜ ನಗರ ಸ್ವಾಗತಿಸಿದರು. ಅಶೋಕ್ ತ್ಯಾಗರಾಜ ನಗರ ವಂದಿಸಿದರು. ಸೌಮ್ಯ ವಿನಯ್ ಕಡಮಜಲು ಹಾಗೂ ದಿವ್ಯಾ ವಜ್ರದುಂಬಿ ತ್ಯಾಗರಾಜ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್.ಎನ್.ಎಲ್.ನ ನಿವೃತ್ತ ಅಧಿಕಾರಿ ದಿ. ಎಸ್. ನಾರಾಯಣ ಅವರ ಸ್ಮರಣಾರ್ಥ ಅವರ ಪತ್ನಿ ಸುಂದರಿ ಹಾಗೂ ಮಕ್ಕಳು ಅನ್ನದಾನದ ಸೇವಾರ್ಥಿಗಳಾಗಿ ಪಾಲ್ಗೊಂಡರು.










