







ನೆಲ್ಯಾಡಿ: ಕೆಎಸ್‌ಆರ್‌ಟಿಸಿ, ರಾಷ್ಟ್ರೀಯ ಹೆದ್ದಾರಿ, ಆಹಾರ, ಸರ್ವೆ ಸೇರಿದಂತೆ ಪ್ರಮುಖ ಇಲಾಖಾಧಿಕಾರಿಗಳ ಗೈರು ಹಾಜರಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮಸಭೆ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೌಕ್ರಾಡಿ ಗ್ರಾಮಸಭೆ ಮುಂದೂಡಿಕೆ ಮಾಡಲಾಗಿದೆ. ಆರ್‌ಎಫ್‌ಒ, ಸಿಡಿಪಿಒ ಅವರೇ ಸಭೆಗೆ ಬರಬೇಕೆಂದೂ ಗ್ರಾಮಸ್ಥರು ಈ ವೇಳೆ ಒತ್ತಾಯಿಸಿದರು.


ಗ್ರಾಮಸಭೆ ಸೆ.19ರಂದು ಬೆಳಗ್ಗೆ 11.30ಕ್ಕೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆರಂಭಗೊಂಡಿತು. ಗ್ರಾ.ಪಂ.ಆಡಳಿತಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಕೆಎಸ್ಸಾರ್ಟಿಸಿ, ರಾಷ್ಟ್ರೀಯ ಹೆದ್ದಾರಿ, ಆಹಾರ, ಸರ್ವೆ, ಲೋಕೋಪಯೋಗಿ ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಪ್ರಸ್ತಾಪಿಸಿದ ಗ್ರಾಮಸ್ಥರು ಸಭೆಗೆ ಎಲ್ಲಾ ಅಧಿಕಾರಿಗಳು ಬರಬೇಕು, ಗ್ರಾಮಸ್ಥರ ಸಮಸ್ಯೆ ಪರಿಹಾರ ಆಗಬೇಕು. ಕಾಟಾಚಾರಕ್ಕೆ ಸಭೆ ನಡೆಸುವುದು ಬೇಡ. ಕಳೆದ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಅವುಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸಭೆಗೆ ಆಗಮಿಸಿ ಕಾರಣ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.



ಆಡಳಿತಾಧಿಕಾರಿ ಸುರೇಶ್ ಅವರು ಮಾತನಾಡಿ, ಗ್ರಾಮ ಮಟ್ಟದ ಅಧಿಕಾರಿಗಳು ಇಲ್ಲಿ ಇದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇರುವುದರಿಂದ ಸಭೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಎಸ್‌ಐಆರ್ ಪ್ರಕ್ರಿಯೆ ಮುಗಿದ ಬಳಿಕ ಸಭೆ ನಡೆಸುವಂತೆ ಆಗ್ರಹಿಸಿ, ಅಧಿಕಾರಿಗಳು ಕೌಕ್ರಾಡಿ, ಇಚ್ಲಂಪಾಡಿ ಗ್ರಾಮವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಮೋಹನ್ ಕುಮಾರ್ ಅವರು ಮಾತನಾಡಿ, ಅ.28ರ ತನಕ ಎಸ್‌ಐಆರ್ ಪ್ರಕ್ರಿಯೆ ಇದೆ. ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಗ್ರಾಮಸ್ಥರ ಅಭಿಪ್ರಾಯ ಪಡೆದು ಸೆ.24ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಬೇಕಾಗಿದೆ. ಆದ್ದರಿಂದ ಸಭೆ ಮುಂದುವರೆಸುವ ಎಂದರು.

ಆದರೂ ಕೇಳದ ಗ್ರಾಮಸ್ಥರು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ವಿಶೇಷ ಗ್ರಾಮ ಸಭೆ ಮಾಡಿ. ಆ ಬಳಿಕ ಗ್ರಾಮ ಸಭೆ ಮಾಡಿ ಎಂದು ಪಟ್ಟು ಹಿಡಿದು ಎರಡು ಸಭೆಗೂ ಇಂದೇ ದಿನ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು. ಕೊನೆಗೂ ಗ್ರಾಮಸ್ಥರ ಬೇಡಿಕೆಗೆ ಮಣಿದು ಸೆ. 24ರಂದು ಕಸ್ತೂರಿ ರಂಗನ್‌ಗೆ ಸಂಬಂಧಿಸಿದ ವಿಶೇಷ ಗ್ರಾಮ ಸಭೆ ಹಾಗೂ ಅ.6ರಂದು ಗ್ರಾಮ ಸಭೆ ನಡೆಸಲು ನಿರ್ಣಯಿಸಿ ಗ್ರಾಮ ಸಭೆ ಮುಂದೂಡಲಾಯಿತು. ಅ.6ರ ಗ್ರಾಮಸಭೆಗೆ ಅಧಿಕಾರಿಗಳು ಬಾರದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ಕೆ.ಇ.ಅಬೂಬಕ್ಕರ್, ವರ್ಗೀಸ್ ಅಬ್ರಹಾಂ, ರಫೀಕ್ ಬೈಲು, ಇಸ್ಮಾಯಿಲ್, ಜಿ. ತೋಮಸ್, ಸುಜಿತ್ ಸಿ ಫಿಲಿಪ್, ಜಾನ್ಸನ್ ಇಚ್ಲಂಪಾಡಿ, ಜಾನ್ಸನ್ ಕಾಪಿನಬಾಗಿಲು, ಅಬೂಬಕ್ಕರ್ ಸಿದ್ದೀಕ್ ಮತ್ತಿತರರು ಅಧಿಕಾರಿಗಳ ಗೈರು ಹಾಜರಿ ಪ್ರಸ್ತಾಪಿಸಿ ಸಭೆ ಮುಂದೂಡುವಂತೆ ಒತ್ತಾಯಿಸಿದರು.
ಆರ್‌ಎಫ್‌ಒ, ಸಿಡಿಪಿಒ ಬರಬೇಕು:
ಗ್ರಾಮಸ್ಥ ಜಾನ್ಸನ್ ಇಚ್ಲಂಪಾಡಿ ಮಾತನಾಡಿ, ಪೆರಿಯಶಾಂತಿಯಲ್ಲಿನ ಅಪಾಯಕಾರಿ ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ನಾಲ್ಕೈದು ಸಲ ಮನವಿ ಕೊಟ್ಟಿದ್ದೇವೆ. ಗ್ರಾಮಸಭೆಯಲ್ಲೂ ನಿರ್ಣಯ ಕೈಗೊಂಡು ಕಳಿಸಿಕೊಡಲಾಗಿದೆ. ಆದರೂ ಮರ ತೆರವುಗೊಳಿಸಿಲ್ಲ. ಈ ಬಗ್ಗೆ ನಮಗೆ ಉತ್ತರ ಬೇಕಿದೆ. ಗ್ರಾಮಸಭೆಗೆ ಆರ್‌ಎಫ್‌ಒ ಬರಬೇಕೆಂದು ವಾಡ್೯ ಸಭೆಯಲ್ಲಿ ಹೇಳಿದ್ದೇವೆ. ಆದರೂ ಅವರು ಈ ಸಭೆಗೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ದೇವಿಕಾ ಅವರು, ಈ ವಿಚಾರವನ್ನು ಆರ್‌ಎಫ್‌ಒ ಅವರಿಗೆ ಫೋನ್ ಮಾಡಿ ತಿಳಿಸಿ ಸಭೆಗೆ ಬರುವಂತೆ ತಿಳಿಸಿದ್ದೇವು ಎಂದರು. ಅವರು ಸಭೆಗೆ ಬಾರದೇ ಸಭೆ ನಡೆಸುವುದು ಬೇಡ ಎಂದು ಜಾನ್ಸನ್ ಇಚ್ಲಂಪಾಡಿ ಆಕ್ರೋಶದಿಂದ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಬದಲು ಸಿಡಿಪಿಒ ಅವರೇ ಸಭೆಗೆ ಬರಬೇಕೆಂದು ಜಾನ್ಸನ್ ಕಾಪಿನಬಾಗಿಲು ಆಗ್ರಹಿಸಿದರು. ಮುಂದಿನ ಸಭೆಗೆ ಬರುವಂತೆ ಅವರನ್ನು ಕೇಳಿಕೊಳ್ಳಲು ನಿರ್ಣಯಿಸಲಾಯಿತು.
ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಉದಯ ಕುಮಾರ್, ಎಂ.ಕೆ.ಇಬ್ರಾಹಿಂ, ಮಾಜಿ ಉಪಾಧ್ಯಕ್ಷೆ ಭವಾನಿ ಜಿ., ಮಾಜಿ ಸದಸ್ಯ ಹನೀಫ್, ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಪಳಿಕೆ ಮತ್ತಿತರರು ವಿವಿಧ ವಿಚಾರ ಪ್ರಸ್ತಾಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಲಯ ಮೇಲ್ವಿಚಾರಕಿ ಪುಷ್ಪಾವತಿ, ಸಿಹೆಚ್‌ಒ ಶ್ಯಾಮಲಾ, ಅರಣ್ಯ ಇಲಾಖೆಯ ವಿನಯಕುಮಾರ್, ದೀಕ್ಷಾ, ಸುಶಾಂತ್, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಮೆಸ್ಕಾಂ ಜೆಇ ರಾಮಣ್ಣ, ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ವಿಖ್ಯಾತ್, ಸಿಆರ್‌ಪಿ ದೇವಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮೋಹನ್‌ಕುಮಾರ್ ಜಿ.ಸ್ವಾಗತಿಸಿ, ಕಾರ್ಯದರ್ಶಿ ದೇವಿಕಾ ಎಂ.ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು










