







ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪನಿರ್ದೇಶಕರು ಆಡಳಿತ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಳೆನೇರಂಕಿ ಇದರ ಆಶ್ರಯದಲ್ಲಿ 14ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ಸೆ. 21 ರಂದು ಕಡಬ ತಾಲೂಕಿನ ಹಳೆನೇರೆಂಕಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.


ಪಂದ್ಯಾಟ ಉದ್ಘಾಟಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರೂ ಆದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು, ಖೋ ಖೋ ಹಾಗೂ ಕಬಡ್ಡಿ ಈ ಮಣ್ಣಿನ ಆಟಗಳು. ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು. ಸಮಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪಂದ್ಯಾಟದಲ್ಲಿ ಒಳ್ಳೆಯ ತೀರ್ಪು ಬರಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಅವರು, 23 ಪಂದ್ಯಾಟಗಳ ಪೈಕಿ 16ನೇ ಪಂದ್ಯಾಟ ಇದಾಗಿದ್ದು ಹಳ್ಳಿ ಪ್ರದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಈ ಪಂದ್ಯಾಟದ ಯಶಸ್ವಿಗೆ ಊರಿನವರು ತೊಡಗಿಕೊಂಡಿರುವುದು ಅಭಿನಂದನೀಯ. ಈ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ತಲಾ 7 ತಂಡಗಳು ಭಾಗವಹಿಸುತ್ತೀವೆ. ಇದರಲ್ಲಿ ಪ್ರಥಮ ಸ್ಥಾನ ಪಡೆದ ತಂಡದ 7 ಆಟಗಾರರು ಹಾಗೂ ದ್ವಿತೀಯ ಸ್ಥಾನ ಪಡೆದ ೫ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಖೋ ಖೋ ಮಣ್ಣಿನ ಆಟ. ಇದರಲ್ಲಿ ಸರಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕೆಂದು ಹೇಳಿದರು.



ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಶುಭಹಾರೈಸಿದರು. ಕ್ರೀಡಾ ಸಮಿತಿ ಅಧ್ಯಕ್ಷ ಮಹೇಶ್ ಪಾತೃಮಾಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಹರಿನಾರಾಯಣ ಆಚಾರ್, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲಿವಿಯಾ ಆರ್.ಕ್ಯಾಸ್ತಲಿನೊ, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಕಾರ್ಯದರ್ಶಿ ಚೆಲುವಮ್ಮ, ಗ್ರೇಡ್ ೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದ.ಕ.ಜಿಲ್ಲಾಧ್ಯಕ್ಷ ರವಿರಾಜ್ ಗೇರುಕಟ್ಟೆ, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪುತ್ತೂರು-ಕಡಬ ತಾಲೂಕು ಅಧ್ಯಕ್ಷ ಚಕ್ರಪಾಣಿ ಎ.ವಿ., ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್ಕುಮಾರ್, ಕಾರ್ಯದರ್ಶಿ ಲಲಿತಾ ಜಿ.ಡಿ., ನಿವೃತ್ತ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ, ಎಸ್ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತ್ತಡ್ಡ, ಉಪಾಧ್ಯಕ್ಷೆ ಸುಲೋಚನಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಅಲೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಉದ್ಯಮಿಯೂ ಆದ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್ಕುಮಾರ್, ಕಾರ್ಯದರ್ಶಿ ಲಲಿತಾ ಜಿ.ಡಿ.ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಧರ್ಣಪ್ಪ ಗೌಡ ಅಲೆಪ್ಪಾಡಿ, ದಿನೇಶ್ ಡೆಂಬಳೆ, ದಿವಾಕರ ರೈ, ಸುರೇಶ್ ತಾರಿಪಡ್ಪು, ಗಣೇಶ್ ಮರಂಕಾಡಿ, ಸುಚೇತಾ ಬಿ., ಪುರಂದರ ಪೂಜಾರಿ ಕೆಮ್ಮಿಂಜೆ, ಪೂವಪ್ಪ ಗೌಡ, ರಜಾಕ್, ಜನಾರ್ದನ ಪೂಜಾರಿ ಕದ್ರ ಮತ್ತಿತರರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಮುಖ್ಯಶಿಕ್ಷಕ ಪ್ರಕಾಶ್ ಬಾಕಿಲ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ವಂದಿಸಿದರು. ಸಹಶಿಕ್ಷಕರಾದ ಗೀತಾಕುಮಾರಿ, ಶಶಿಕಲಾ ಎಂ.ನಿರೂಪಿಸಿದರು. ಸಹಶಿಕ್ಷಕರಾದ ದಯಾನಂದ ಓಡ್ಲ, ನವೀನ ಆನ, ಚೈತ್ರಾ, ಅಕ್ಷಿತಾ, ಸರೋಜಿನಿ ಹಾಗೂ ಎಸ್ಡಿಸಿಎಂಸಿ ಸದಸ್ಯರು, ಪೂರ್ವವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಬಾಲಕ, ಬಾಲಕಿಯರ ವಿಭಾಗದಲ್ಲಿ ಹಳೆನೇರೆಂಕಿ ಚಾಂಪಿಯನ್;
ಪಂದ್ಯಾಟದಲ್ಲಿ ದ.ಕ.ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ, ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ತಾಲೂಕಿನ ತಂಡಗಳು ಭಾಗವಹಿಸಿದ್ದವು. ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರತಿನಿಧಿಸಿದ್ದ ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಮಂಗಳೂರು ಉತ್ತರ ತಾಲೂಕು ಪ್ರತಿನಿಧಿಸಿದ್ದ ಕಾಟಿಪಳ್ಳ ಇನ್ಫೆಂಟ್ ಮೇರಿ ಆಂಗ್ಲಮಾಧ್ಯಮ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಬಂಟ್ವಾಳ ತಾಲೂಕು ಪ್ರತಿನಿಧಿಸಿದ್ದ ಶ್ರೀ ಗುರುನಾರಾಯಣ ವಸತಿ ಶಾಲೆ ಪಡೆದುಕೊಂಡಿದೆ. ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ತಲಾ 7 ತಂಡಗಳು ಭಾಗವಹಿಸಿದ್ದವು.










