







ರೂ.9.39 ಲಕ್ಷ ನಿವ್ವಳ ಲಾಭ | ಶೇ.12 ಡಿವಿಡೆಂಡ್ | ಸಹಾಯಧನ/ಪ್ರೋತ್ಸಾಹಧನ ವಿತರಣೆ


ಪುತ್ತೂರು: ಉಪ್ಪಿನಂಗಡಿ ಕಾಮತ್ ಕಟ್ಟಡದ ಪಥಮ ಮಹಡಿಯಲ್ಲಿ ವ್ಯವಹರಿಸುತ್ತಿರುವ ಉಪ್ಪಿನಂಗಡಿ ಕಥೊಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜೋಸೆಫ್ ವಿ.ಎಂರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸದಸ್ಯತನ, ಪಾಲು ಬಂಡವಾಳ:
ಸಂಘವು ವರದಿ ಸಾಲಿನ ಆರಂಭದಲ್ಲಿ 3174 ಮಂದಿ ಸದಸ್ಯರು ಇದ್ದು, 108 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿ, 10 ಸದಸ್ಯರು ಸದಸ್ಯತ್ವವನ್ನು ತ್ಯಜಿಸಿದ್ದು ಮಾರ್ಚ್ ವರ್ಷಾಂತ್ಯಕ್ಕೆ ರೂ.18,81,050 ಪಾಲು ಬಂಡವಾಳವಿರುತ್ತದೆ. ಮಾರ್ಚ್ ವರ್ಷಾಂತ್ಯಕ್ಕೆ ದೈನಿಕ ಠೇವಣಿ, ನಿರಖು ಠೇವಣಿ, ಆವರ್ತ ಠೇವಣಿ, ಸಂಚಯ ಠೇವಣಿ, ಆದರ್ಶ ಕ್ಯಾಶ್ ಸರ್ಟಿಫಿಕೇಟ್ ಸೇರಿದಂತೆ ಒಟ್ಟು ರೂ.5,58,27,552.18 ಠೇವಣಿಯಿರುತ್ತದೆ. ತಾವು ಸಂಘದ ಮೇಲೆ ವಿಶ್ವಾಸವಿಟ್ಟು, ಠೇವಣಿಯಿರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ ಸಂಘದ ಅಧ್ಯಕ್ಷರಾದ ಜೋಸೆಫ್ ವಿ.ಎಂರವರು ಅಭಿನಂದನೆ ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನು ಹೆಚ್ಚಿನ ವ್ಯವಹಾರವನ್ನು ನಡೆಸುವಂತೆ ಅವರು ಸಹಕಾರವನ್ನು ಕೋರಿದರು.
ರೂ.9.39 ಲಕ್ಷ ನಿವ್ವಳ ಲಾಭ, ಶೇ.12 ಡಿವಿಡೆಂಡ್:
ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಸಾಲಗಳನ್ನು ನೀಡಿದ್ದು ಈ ಪೈಕಿ ಮಾರ್ಚ್ ವರ್ಷಾಂತ್ಯಕ್ಕೆ ಅಡವು ಸಾಲ, ವ್ಯಾಪಾರ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ, ಠೇವಣಾತಿ ಸಾಲ, ಗೃಹ ಸಾಲ, ಗೃಹ ಬಳಕೆ ಸಾಲ, ಜಾಮೀನು ಸಾಲ ಸೇರಿದಂತೆ ರೂ.4,81,86,695 ಹೊರ ಬಾಕಿ ಇರುತ್ತದೆ. ಸಂಘದ 2025-2026ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆಯನ್ನು ಲೆಕ್ಕ ಪರಿಶೋಧಕರು ನಡೆಸಿದ್ದು ಸಂಘವು ರೂ.9,39,936.31 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರಾದ ಜೋಸೆಫ್ ವಿ.ಎಂರವರು ಸಭೆಯಲ್ಲಿ ಘೋಷಿಸಿದರು.
ಸಂಘದಿಂದ ಅನಾರೋಗ್ಯ ಪೀಡಿತ ಸಂಘದ ಮೂವರು ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಸಂಘದ ಸದಸ್ಯರ 26 ಮಕ್ಕಳ ಶೈಕ್ಷಣಿಕ ಸಾಲಿಗೆ ಪ್ರೋತ್ಸಾಹಧನ, ಮೂವರು ಪಿಗ್ಮಿ ಸಂಗ್ರಾಹಕರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜ ಸಹಿತ ಹಲವರು ಸಂಘದ ಸದಸ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ನಿರ್ದೇಶಕರಾದ ಜೋನ್ ಫೆರ್ನಾಂಡೀಸ್, ಜೊಸ್ಸಿ ಸ್ಟೀವನ್ ಮೋಂತೆರೋ, ರಾಬರ್ಟ್ ಡಿ’ಸೋಜ, ವಿನ್ಸೆಂಟ್ ಬ್ರ್ಯಾಗ್ಸ್ ಸುನಿಲ್ಬ್ರ್ಯಾಗ್ಸ್, ಪ್ರೆಸಿಲ್ಲ ಡಿ’ಸೋಜ, ಸವಿತ ಡಿ’ಸೋಜರವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜೋಸೆಫ್ ವಿ.ಎಂ ಸ್ವಾಗತಿಸಿ, ಉಪಾಧ್ಯಕ್ಷ ಜೆರಾಲ್ಡ್ ಮಸ್ಕರೇನ್ಹಸ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲ್ಯಾನ್ಸಿ ಡಿ’ಸೋಜಾರವರು ವಾರ್ಷಿಕ ವರದಿಯನ್ನು ಓದಿದರು. ಸಂಸ್ಥೆಯ ಲೆಕ್ಕಿಗ ಕು|ಸಪ್ನಾ ರೋಜ್ ಮಿನೇಜಸ್ ಪ್ರಾರ್ಥಿಸಿದರು. ಗುಮಾಸ್ತೆ ಸ್ಫೂರ್ತಿ, ನೆಲ್ಯಾಡಿ ಶಾಖೆಯ ಅಶ್ವಿತ, ಪಿಗ್ಮಿ ಸಂಗ್ರಾಹಕರಾದ ಮ್ಯಾಕ್ಸಿಂ ಪ್ರಕಾಶ್ ಪ್ಯಾಸ್ , ಅಬ್ದುಲ್ ಬಾತೀಶ ಯು.ಎಂ, ಹಿಲಾರಿ ಪ್ಯಾಸ್ ರವರು ಸಹಕರಿಸಿದರು. ನಿರ್ದೇಶಕ ಇನಾಸ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
ಸಹಕಾರವೇ ಸಂಘದ ವ್ಯವಹಾರ ವೃದ್ಧಿಗೆ ಸಹಕಾರಿ.
ನಮ್ಮ ಸಂಘವು ಕಳೆದ 17 ವರ್ಷಗಳಿಂದ ಹಿರಿಯ ಸಹಕಾರಿಗಳ ಮಾರ್ಗದರ್ಶನ ಹಾಗೂ ಎಲ್ಲರ ಸಹಕಾರದಿಂದ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಂಘದ ಮೇಲೆ ವಿಶ್ವಾಸವಿಟ್ಟು ಠೇವಣಿಯಿರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ, ಅಲ್ಲದೆ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಹಕರಿಸಿದ ಸದಸ್ಯರೆಲ್ಲರಿಗೂ ನಮ್ಮ ಸಂಘದ ಕಾರ್ಯಕಲಾಪಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ ಎಲ್ಲರಿಗೂ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳು. ಸದಸ್ಯರುಗಳ ಸಹಕಾರವೇ ನಮ್ಮ ಸಂಘದ ವ್ಯವಹಾರ ವೃದ್ಧಿಯಾಗಲು ಕಾರಣವಾಗಿದೆ. ಇದೇ ರೀತಿ ನಿಮ್ಮೆಲ್ಲರ ನಂಬಿಕೆ, ಉತ್ತೇಜನ ಹಾಗೂ ಪ್ರೋತ್ಸಾಹದಿಂದ ಈ ಸಹಕಾರ ಸಂಘವು ಮುಂದೆ ಅಭಿವೃದ್ಧಿ ಸಾಧಿಸಬೇಕಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಈ ಸಹಕಾರ ಸಂಘವು ಸದಾ ಸಿದ್ಧವಿದೆ.
-ಜೋಸೆಫ್ ವಿ.ಎಂ. ಅಧ್ಯಕ್ಷರು, ಉಪ್ಪಿನಂಗಡಿ ಕಥೊಲಿಕ್ ವಿವಿಧೋದ್ದೇಶ ಸಹಕಾರ ಸಂಘ ನಿ.













