







ರೂ.2.04ಕೋಟಿ ವ್ಯವಹಾರ, ರೂ.2.50ಲಕ್ಷ ಲಾಭ, ಶೇ.15 ಡಿವಿಡೆಂಡ್, ರೂ.1.10ಬೋನಸ್


ಪುತ್ತೂರು: ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರ ಸಂಘವು 2025-26ಸಾಲಿನಲ್ಲಿ ರೂ.2,04,52,531 ವ್ಯವಹಾರ ನಡೆಸಿ ರೂ.2,50,635.06 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.1.10 ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಆ.11ರಂದು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ 142 ಮಂದಿ ಸದಸ್ಯರಿಂದ ರೂ.32,400 ಪಾಲು ಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ಸಂಘು 1,08,650ಲೀಟರ್ ಹಾಲು ಖರೀದಿಸಿ, 14,329 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಇದರಿಂದ ಸಂಘಕ್ಕೆ ರೂ.8,59,598 ಆದಾಯ ಬಂದಿರುತ್ತದೆ. 94,321 ಲೀಟರ್ ಹಾಲನ್ನು ಒಕ್ಕೂಟಕ್ಕೆ ನೀಡಿದ್ದು ರೂ.41,43,142.53 ಆದಾಯ ಬಂದಿದೆ. 962 ಚೀಲ ಪಶು ಆಹಾರ ಹಾಗೂ 520ಕೆ.ಜಿ ಲವಣ ಮಿಶ್ರಣ ಮಾರಾಟ ಹಾಗೂ 265ಕೆಜಿ ಸವೃದ್ದಿ ಮಾರಾಟ ಮಾಡಲಾಗಿದೆ. ಒಟ್ಟು ಸಂಘವು ಒಟ್ಟು ರೂ.2,04,52,531ಗಳ ವ್ಯವಹಾರ ನಡೆಸಿ ಸಂಘವು ರೂ.2,50,63506 ನಿವ್ವಳ ಲಾಭ ಗಳಿಸಿದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಮಾತನಾಡಿ, ಸರಕಾರ ಹಾಗೂ ದ.ಕ ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ ಹೈನುಗಾರರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಂಘದ ಹಿರಿಯ ಸದಸ್ಯ ವೆಂಕಪ್ಪ ಗೌಡ ಮತ್ತು ಪುಷ್ಪಾ ವೆಂಕಪ್ಪ ಗೌಡ ದಂಪತಿ ಪಡ್ಡಾಯೂರು ಇವರನ್ನು ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಗಂಗಾಧರ ಸಪಲ್ಯ(ಪ್ರ), ಲೂಯಿಸ್ ಲಸ್ರಾದೋ(ದ್ವಿ), ಫೆಲ್ಸಿ ಲಸ್ರಾದೋ(ತೃ) ಬಹುಮಾನ ವಿತರಿಸಲಾಯಿತು. 5000 ಲೀ.ಹಾಲಿಗಿಂತ ಅಧಿಕ ಪೂರೈಕೆ ಮಾಡಿದ ಸುಗಂಧಿ ಮತ್ತು ವಸಂತ ಗೌಡ ಅವರನ್ನು ಗೌರವಿಸಲಾಯಿತು. ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತೀಕ್ಷಾ ಹಾಗೂ ದೀಕ್ಷಾ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ವೆಂಕಪ್ಪ ಗೌಡ, ಕುಶಾಲಪ್ಪ ಗೌಡ ನೆಲಪ್ಪಾಲು, ಫೆಲ್ಸಿ ಲಸ್ರಾದೋ ನೆಲಪ್ಪಾಲು, ಶಶಿಧರ ರಾವ್ ಬಿರಾವು, ವೀಣಾ ಮತಾವು, ತನಿಯಾರು ಗುರುಂಪುನಾರ್, ತಿರುಮಲೇಶ್ವರ ಗೌಡ ಕುಂಜಾರು, ಧನಂಜಯ ಗೌಡ ಕೊಡಂಗೆ, ಸೂರಪ್ಪ ಪೂಜಾರಿ ನೆಲಪ್ಪಾಲು, ನೀತಾ ಎನ್ ಮಾಲ್ತೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮೀಳಾ ಮತ್ತು ಶ್ವೇತಾ ಪ್ರಾರ್ಥಿಸಿದರು. ಅಧ್ಯಕ್ಷ ಆನಂದ ಗೌಡ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಪಿ.ಆರ್ ವಂದಿಸಿದರು. ಕಾರ್ಯದರ್ಶಿ ಕುಸುಮಾವತಿ ಕಲ್ಲೇಗ ವರದಿ, ಆವ-ವ್ಯಯ ಮಂಡಿಸಿದರು. ಗಣೇಶ್ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ರಾಜೀವಿ ಮುರ ಸಹಕರಿಸಿದರು.



ಹೈನುಗಾರಿಕೆಗೆ ಸರಕಾರ ಹಾಗೂ ಒಕ್ಕೂಟದವಿಂದ ಹಲವು ರೀತಿಯ ಸೌಲಭ್ಯಗಳು ದೊರೆಯುತ್ತಿದ್ದು ಸದಸ್ಯರು ಅವುಗಳನ್ನು ಸದುಪಯೋಗಪಡಿಸಿಕೊಂಡು ಸಂಘಕ್ಕೆ ಇನ್ನೂ ಹೆಚ್ಚು ಹಾಲು ಪೂರೈಸಬೇಕು.
ಮುಂದೆ ಈಗ ಇರುವ ಸಂಘದ ಕಚೇರಿ ಇರುವ ನಿವೇಶನದಲ್ಲಿಯೇ ಹೊಸ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಹೊಸದಾಗಿ ಕಟ್ಟಡ ನಿರ್ಮಿಸಿ, ಅದರಲ್ಲಿ ಸಭಾ ಭವನ ನಿರ್ಮಿಸಿ ಮುಂದೆ ಅಲ್ಲಿಯೇ ವಾರ್ಷಿಕ ಸಾಮಾನ್ಯ ಸಭೆ ನಡೆಸುವ ಯೋಜನೆಗಳಿದ್ದು ಇದಕ್ಕೆಲ್ಲಾ ಸದಸ್ಯರ ಸಹಕರಿಸುವಂತೆ ವಿನಂತಿ.
-ಆನಂದ ಗೌಡ, ಅಧ್ಯಕ್ಷರು, ಪಡ್ಡಾಯೂರು ಹಾ.ಉ. ಸಹಕಾರ ಸಂಘ










