







ಪುತ್ತೂರು : 14 /09/ 1949 ರಂದು ಭಾರತದ ಸಂವಿಧಾನದಲ್ಲಿ ಹಿಂದಿ ಭಾಷೆಗೆ ಕೇಂದ್ರ ಸರಕಾರಿ ಕಛೇರಿಗಳಲ್ಲಿ ಸಂಪರ್ಕ/ ಆಡಳಿತ ಭಾಷೆಯ ಸ್ನಾನಮಾನ ನೀಡಲಾಗಿದ್ದು, ಆ ದಿನವನ್ನು ‘ಹಿಂದಿ ದಿವಸ್” ಎಂದು ಆಚರಿಸಲಾಗುತ್ತದೆ. ಅದರ ಸಲುವಾಗಿ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸೆ 14 ರಿಂದ 21 ರ ವರೆಗೆ ಹಿಂದಿ ಸಪ್ತಾಹ ಆಚರಿಸಲಾಯಿತು.


ಈ ಸಪ್ತಾಹದ ಸಂದರ್ಭದಲ್ಲಿ ಸಂಸ್ಥೆಯ ಉದ್ಯೋಗಿಗಳಿಗಾಗಿ ಹಿಂದಿ ನಿಬಂಧ ಲೇಖನ, ಭಾಷಣ, ಸಾಮಾನ್ಯ ಜ್ಞಾನ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಲ್ಲಿ ಈ ಭಾಷೆಯ ಕುರಿತು ಜಾಗೃತಿ, ಆಸಕ್ತಿ ಮೂಡಿಸಲು ಹಿಂದಿ ನಿಬಂಧ ಬರಹ ಸ್ಪರ್ಧೆ ನಡೆಸಲಾಯಿತು.




ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿ. ಪಿ.ಸಿ.ಆರ್. ಐ. ವಿಟ್ಟಲ ಕೇಂದ್ರದ ಪ್ರಧಾನರಾದ ಡಾ. ರಾಜೇಶ ಎಮ್ ಕೆ ಉಪಸ್ಥಿತರಿದ್ದರು. ಹಿಂದಿ ಭಾಷೆಯನ್ನು ಸರ್ಕಾರಿ ಕಛೇರಿಗಳಲ್ಲಿ ಬಳಸುವುದು, ಬೆಳೆಸುವುದು ನಮ್ಮ ಸಂವಿಧಾನಿಕ ಕರ್ತವ್ಯವಾಗಿದೆ.ಆ ನಿಟ್ಟಿನಲ್ಲಿ ಒಟ್ಟಾಗಿ ಮುಂದುವರಿಯೋಣ ಎಂದರು.
ಸಂಸ್ಥೆಯ ನಿರ್ದೇಶಕರಾದ ಡಾ. ದಿನಕರ ಅಡಿಗ ಸಭಾಧ್ಯಕ್ಷತೆ ವಹಿಸಿದ್ದರು. ದೇಶದ ಬಹುತೇಕ ಭಾಗಗಳಲ್ಲಿ ಪ್ರಚಲಿತದಲ್ಲಿರುವ ಹಿಂದಿ ಭಾಷೆಯನ್ನು ವ್ಯಾವಾಹಾರಿಕೆ ದೃಷ್ಟಿಯಿಂದಲೂ ನಾವೂ ಕಲಿತಿರಬೇಕಾದುದು ಅವಶ್ಯ. ಹಾಗೆಂದು, ಪ್ರಾದೇಶಿಕ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಲು ಪ್ರಾದೇಶಿಕ ಭಾಷೆಗಳನ್ನು ಬೆಳೆಸುವುದೂ ಅಷ್ಟೆ ಮುಖ್ಯ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ನಿರ್ದೇಶನಾಲಯದ ಉದ್ಯೋಗಿಗಳಿಗೆ ಪುರಸ್ಕಾರ ನೀಡಲಾಯಿತು. ಆಫೀಸಿನ ಕೆಲಸಗಳನ್ನು ಹಿಂದಿ ಭಾಷೆಯಲ್ಲಿ ನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.










