ಅ.2ರಂದು ಗಾಂಧಿ ನಡಿಗೆ, ಗಾಂಧಿ ಚಿಂತನ ಕಾರ್ಯಕ್ರಮ : ಡಾ.ಯು.ಪಿ.ಶಿವಾನಂದರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ

0

ಪುತ್ತೂರು: ಸುಳ್ಯದ ಗಾಂಧಿ ಚಿಂತನ ವೇದಿಕೆ ವತಿಯಿಂದ ಅಕ್ಟೋಬರ್ 2 ರಂದು ಗಾಂಧಿ ನಡಿಗೆ ಹಾಗೂ ಗಾಂಧಿ ಚಿಂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವೇದಿಕೆಯ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ‘ಗಾಂಧಿ ಸ್ಮೃತಿ’ ಪ್ರಶಸ್ತಿ ಯನ್ನು ಈ ಬಾರಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ವೈದ್ಯ, ಪತ್ರಕರ್ತ, ಪ್ರಖರ ಗಾಂಧಿವಾದಿ, ಹೋರಾಟಗಾರರಾದ ಡಾ.ಯು.ಪಿ.ಶಿವಾನಂದರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ತಿಳಿಸಿದ್ದಾರೆ.ಸೆ.19ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.


2000 ಅಕ್ಟೋಬರ್ 2ರಂದು ಸ್ಥಾಪನೆಯಾದ ಸುಳ್ಯದ ಗಾಂಧಿ ಚಿಂತನ ವೇದಿಕೆ ಕಳೆದ 26 ವರ್ಷಗಳಿಂದ ಗಾಂಧಿ ತತ್ವ ಚಿಂತನೆಯ ಆಧಾರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಮತ್ತು ಗಾಂಽ ನಡಿಗೆಯನ್ನು ಸಂಘಟಿಸುತ್ತಾ ಬಂದಿದೆ. ಕಳೆದ ವರ್ಷ ತನ್ನ 25 ನೇ ವರ್ಷದ ಸಂದರ್ಭ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ನೀಡಲು ಆರಂಭಿಸಿದೆವು. ಕಳೆದ ವರ್ಷ ಸಹಕಾರಿ ಧುರೀಣ ಕೆ.ಸೀತಾರಾಮ ರೈ ಸವಣೂರು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೆವು. ಈ ಬಾರಿ ಡಾ.ಯು.ಪಿ.ಶಿವಾನಂದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.


ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಯು.ಪಿ.ಶಿವಾನಂದರು ಕಳೆದ ನಲವತ್ತು ವರ್ಷಗಳಿಂದ ಗಾಂಧಿ ಚಿಂತನೆಯ ಆಧಾರದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ, ಮಾಹಿತಿ ಕ್ರಾಂತಿ ಹಾಗೂ ಗ್ರಾಮೀಣ ಪತ್ರಿಕೋದ್ಯಮದ ಮೂಲಕ ಜನರಲ್ಲಿ ಗ್ರಾಮ ಸ್ವರಾಜ್ಯ, ರಾಜಕೀಯ ಪ್ರಜ್ಞೆ, ಶಿಕ್ಷಣ, ಸಾಹಿತ್ಯ ಹಾಗೂ ಆಧುನಿಕತೆ ಇವುಗಳಿಗೆ ಜನ ತೆರೆಯುವಂತೆ ಮಾಡಿದ್ದಾರೆ. ತನ್ನ ಸಹಸ್ರಾರು ಜನಜಾಗೃತಿಯ ಬರಹ ಹಾಗೂ ಮಾತುಗಳ ಮೂಲಕ ಕರಾವಳಿ ಭಾಗದ ಅಭಿವೃದ್ಧಿಗೆ ನೇರ ಕಾರಣರಾಗಿದ್ದಾರೆ. ಬಲಾತ್ಕಾರದ ಬಂದ್ ಗಳ ವಿರುದ್ಧ ಜನಜಾಗೃತಿ ಮೂಡಿಸಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಆಂದೋಲನವನ್ನೇ ನಡೆಸಿದ್ದಾರೆ. ಯುವ ಜನಾಂಗದ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದ್ದಾರೆ. ಹಾಗೂ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಹತ್ತಾರು ಪತ್ರಕರ್ತರನ್ನು ಸೃಷ್ಟಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಗಾಂಧಿಜಿಯವರ ಆಶಯಕ್ಕೆ ಪೂರಕವಾದ ಜನಜಾಗೃತಿಯ ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಇಂದಿಗೂ ಈ 76ರ ಹರೆಯದಲ್ಲೂ ಹೋರಾಟ ಪ್ರವೃತ್ತಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಈ ಎಲ್ಲಾ ಕಾರ್ಯಗಳನ್ನು ಪರಿಗಣಿಸಿ ಡಾ.ಯು.ಪಿ.ಶಿವಾನಂದರನ್ನು ಈ ಬಾರಿಯ ಪ್ರಶಸ್ತಿಗೆ ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. 10,೦೦೦ ಸಾವಿರ ರೂ. ನಗದು, ಖಾದಿ ಶಾಲು, ಖಾದಿ ಹಾರ, ಗಾಂಧಿ ಟೋಪಿ, ಪ್ರಶಸ್ತಿ ಫಲಕ ಹಾಗೂ ಫಲಪುಷ್ಪ ಕಾಣಿಕೆಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಅಕ್ಟೋಬರ್ 2 ರಂದು ಅಪರಾಹ್ನ ಸುಳ್ಯದ ರಂಗ ಮಯೂರಿಯಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಅದಕ್ಕಿಂತ ಮೊದಲು ಸುಳ್ಯದ ಗಾಂಧಿನಗರದಲ್ಲಿ ಗಾಂಧಿ ಚಿಂತನ ವೇದಿಕೆಯ ಸಹಭಾಗೀತ್ವದೊಂದಿಗೆ ಸ್ಥಾಪಿಸಲಾದ ಮಹಾತ್ಮ ಗಾಂಧಿ ಪ್ರತಿಮೆಯ ಬಳಿಯಿಂದ ರಂಗಮಯೂರಿಯ ವರೆಗೆ ಗಾಂಧಿ ನಡಿಗೆ ನಡೆಯಲಿದೆ. ವೇದಿಕೆಯ ನಿಯಮದಂತೆ ನಡೆಯುವ ಸರಳ ಸಮಾರಂಭದಲ್ಲಿ ಈ ಬಾರಿ ಕಳೆದ ಬಾರಿಯ ಗಾಂಧಿ ಸ್ಮೃತಿ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ.ಸೀತಾರಾಮ ರೈಯವರು ಡಾ.ಯು.ಪಿ.ಶಿವಾನಂದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವೇದಿಕೆಯ ಸ್ಥಾಪಕ ಸಂಚಾಲಕರೂ ಆಗಿರುವ ಡಾ| ಸುಂದರ ಕೇನಾಜೆಯವರು ಗಾಂಧಿ ಚಿಂತನ ನಡೆಸಿಕೊಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮುಖ್ಯ ಅತಿಥಿಗಳಾಗಿರುವರು. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಾಫ ಸೇರಿದಂತೆ ತಾಲೂಕಿನ ಹಲವು ಪ್ರಮುಖರು ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ಚಿಂತನ ವೇದಿಕೆಯ ಸಂಚಾಲಕರುಗಳಾದ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ಶಂಕರ ಪೆರಾಜೆ, ಚಂದ್ರಾವತಿ ಬಡ್ಡಡ್ಕ, ದುರ್ಗಾಕುಮಾರ್ ನಾಯರ್ ಕೆರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here