







ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಆಗಿ ಸುದೀರ್ಘ ಸುಮಾರು ಐದಾರು ವರ್ಷಗಳ ಕಾಲ ವಿದ್ಯುಕ್ತ ನೆಲೆಯಲ್ಲಿ ಮತ್ತು ಕೆಲ ಕಾಲ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ, ಪ್ರಸ್ತು ಆರ್ಯಾಪು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಯಾಗಿದ್ದ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ವಿವಿಧ ಆರೋಪಗಳಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.


ಕಳೆದ ಸೆ.9ರಂದು ಉಪ್ಪಿನಂಗಡಿ ಗ್ರಾ.ಪಂ. ಕಚೇರಿಗೆ ಕಡತ ಪರಿಶೀಲನೆಗೆಂದು ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಹಲವು ಮಂದಿ ಸಾರ್ವಜನಿಕರು ಪಿಡಿಒ ವಿರುದ್ಧ ದೂರು ಸಲ್ಲಿಸಿದ್ದರು. ಈ ಪೈಕಿ ದಾಖಲಾತ್ಮಕವಾದ ದೂರು ಸಲ್ಲಿಸಿದ್ದ ಅಬ್ದುಲ್ ರಹಿಮಾನ್ ಪಿ.ಎ., ಸಂಜೀವ ಪೂಜಾರಿ, ಅಶ್ರಫ್ ಪೆರಿಯಡ್ಕ, ಶ್ರೀಮತಿ ಖೈಜಮ್ಮ, ಅತುಲ್ ಕಶ್ಯಪ್ ಟಿ., ವಿನಾಯಕ ಪೈ, ಶ್ರೀಮತಿ ಲಲಿತಾ, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಎಸ್. ರವಿ ಹಿರ್ತಡ್ಕ, ಅನಿಲ್ ಕುಮಾರ್ ಜೈನ್, ಶಾಂತ ಕುಮಾರಿ, ಸಂದೇಶ್ ಕೆ., ಮೊಯ್ದೀನ್ ಕುಟ್ಟಿ ಹಿರೇಬಂಡಾಡಿ, ಅಬ್ದುಲ್ಲಾ ಇಬ್ನು ಮುಬಾರಕ್ ಹಾಗೂ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳನ್ನು ಆಧರಿಸಿ ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಅವರಿಗೆ ದ.ಕ. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಲಿಖಿತ ಉತ್ತರ ಕೇಳಿ ನೊಟೀಸ್ ಮಾಡಿದ್ದರಲ್ಲದೆ, ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಪ್ರಭಾರ ನೆಲೆಯಲ್ಲಿದ್ದ ಅವರನ್ನು ಇಲ್ಲಿಂದ ಕರ್ತವ್ಯದಿಂದ ವಿಮುಕ್ತಿಗೊಳಿಸಿದ್ದರು.



ಇದೀಗ ಆರೋಪಿತ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನಾಗರಿಕರಿಗೆ ನೀಡಬೇಕಾದ ಸೇವೆಯಲ್ಲಿ ವಿಳಂಬ, ಭ್ರಷ್ಠಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ, ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಮುಂತಾದ ಆರೋಪಗಳ ಬಗ್ಗೆ ದೂರುಗಳು ಸ್ವೀಕೃತವಾಗಿ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದೂ, ಆರೋಪಿತ ಅಧಿಕಾರಿಯು ಕರ್ತವ್ಯ ಲೋಪವೆಸಗಿ ಕರ್ನಾಟಕ ನಾಗರಿಕ ಸೇವಾ ( ನಡತೆ ) ನಿಯಮಾವಳಿಗಳು- 2021ರ ನಿಯಮ (3)ನ್ನು ಉಲ್ಲಂಘಿಸಿರುವುದು ಕಂಡು ಬಂದ ಕಾರಣಕ್ಕೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅವರನ್ನು ಅಮಾನತುಗೊಳಿಸಲು ಶಿಸ್ತು ಪ್ರಾಧಿಕಾರವು ಸೂಚಿಸಿರುವುದರಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಪ್ರಸ್ತುತ ಆರ್ಯಾಪು ಗ್ರಾ.ಪಂ.ನ ಪಿಡಿಒ ಆಗಿದ್ದ ವಿಲ್ಪ್ರೆಡ್ ಲಾರೆನ್ಸ್ ರೊಡ್ರೀಗಸ್ ರವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಮಧ್ಯೆ ಅಮಾನತು ಆದೇಶ ಪ್ರತಿ ಹೊರಬಿದ್ದಂತೆಯೇ ಉಪ್ಪಿನಂಗಡಿಯಲ್ಲಿ ಪಿಡಿಒ ರವರಿಂದ ಶೋಷಣೆಗೆ ತುತ್ತಾದ ಮಂದಿ ಸಂಭ್ರಮದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತಾನೊರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಥಾನದಲ್ಲಿದ್ದು ಪಂಚಾಯತ್ ಅಧೀನದ ಬಸ್ ನಿಲ್ದಾಣದೊಳಗೆ ಕೆಎಸ್ಸಾರ್ಟಿಸಿ ಸಂಸ್ಥೆಯ ಅಧಿಕಾರಿಗಳ, ಪೊಲೀಸ್ ಅಧಿಕಾರಿಗಳ ಇಲಾಖಾ ವಾಹನ ನಿಲ್ಲಿಸಲಾಗಿದೆಯೆಂದು ಅವರ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ಅಧಿಕಾರಿಗಳಿಗೆ ಮುಜುಗರವನ್ನು ಮೂಡಿಸಿದ್ದ, ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸರಿಗೆ ಬೇಕಾದ ಪಂಚಾಯತ್ ಅಧೀನದ ಸಿಸಿ ಕ್ಯಾಮರಾದ ಮಾಹಿತಿಯನ್ನು ನೀಡದೆ ಅಸಹಕಾರ ತೋರಿದ, ಊರಿನ ಎಲ್ಲರನ್ನೂ ನಿರ್ಲಕ್ಷಿಸಿ ಅವಮಾನಿಸಿ ಧಾರ್ಷ್ಯತನದ ವರ್ತನೆ ತೋರುತ್ತಿದ್ದ ಆಪಾದನೆಗಳೂ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರ ಮೇಲಿತ್ತು.
ಈ ಮಧ್ಯೆ ಈ ಪಿಡಿಒ ರವರ ಈ ಎಲ್ಲಾ ಅವಾಂತರಗಳಿಗೆ ಪರೋಕ್ಷ ಬೆಂಬಲ ನೀಡುತ್ತಾ , ವರ್ಗಾವಣೆಗೊಂಡರೂ ಮತ್ತೆ ಅವರನ್ನೇ ಉಪ್ಪಿನಂಗಡಿಯಲ್ಲಿ ಪ್ರಭಾರ ನೆಲೆಯಲ್ಲಿ ಉಳಿಸಿ ಅವರ ಅನುಚಿತ ವರ್ತನೆ ಹಾಗೂ ಭ್ರಷ್ಠಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದರೆಂದು ಆರೋಪಕ್ಕೆ ಒಳಗಾಗಿರುವ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ದವೂ ಸರಕಾರದ ಮಟ್ಟದಲ್ಲಿ ದೂರು ಸಲ್ಲಿಕೆಯಾಗಿದೆ ಎಂಬ ಸಾರ್ವಜನಿಕ ಮಾಹಿತಿ ಲಭಿಸಿದೆ.











He is a strong PDO who did follow rules properly,now croupt people are targeting him,he will over come this suspension
ಇವರ ಎಲ್ಲಾ ಭ್ರಷ್ಟಾಚಾರಕ್ಕೆ ಸಹಕಾರವನ್ನು ಕೊಟ್ಟಿದ್ದ ಇವರ ಅವಧಿಯ ಎಲ್ಲಾ ಜನಪ್ರತಿನಿಧಿಗಳ ಮನೆಗೂ ಲೋಕಾಯುಕ್ತ ದಾಳಿ ಆಗಬೇಕು.
ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲು ಅನುಮತಿಯನ್ನು ನೀಡಬಾರದು.
ಜನ ಪ್ರತಿನಿಧಿಗಳ ಸಹಕಾರ ಇಲ್ಲದೆ ಯಾವುದೇ ಅಧಕಾರಿಗೂ ಭ್ರಷ್ಟಾಚಾರ ಮಾಡಲು ಸಾಧ್ಯವೇ ಇರುವುದಿಲ್ಲ