ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ : 9.06 ಕೋಟಿ ವ್ಯವಹಾರ, 5.42 ಲಕ್ಷ ನಿವ್ವಳ ಲಾಭ, ಶೇ.13 ಡಿವಿಡೆಂಡ್

0

ರಾಮಕುಂಜ: ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘ ಗೋಕುಲನಗರ ಕೊಯಿಲ ಇದರ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.23ರಂದು ಕೊಯಿಲ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಕೆ.ಮುರಳೀಕೃಷ್ಣ ಬಡಿಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವರದಿ ಸಾಲಿನಲ್ಲಿ ಸಂಘವು ಒಟ್ಟು 9,06,92,536 ರೂ. ವ್ಯವಹಾರ ನಡೆಸಿದ್ದು, 16,58,659 ರೂ. ವ್ಯಾಪಾರ ಲಾಭ ಗಳಿಸಿದೆ. ಹೂಡಿಕೆಗಳ ಮೇಲಿನ ಬಡ್ಡಿ, ಡಿವಿಡೆಂಡ್, ಒಕ್ಕೂಟದಿಂದ ಬೋನಸ್, ಕೊಠಡಿ ಬಾಡಿಗೆ ಇತ್ಯಾದಿಗಳಿಂದ ಒಟ್ಟು 54,40,063 ರೂ. ಆದಾಯ ಬಂದಿದ್ದು, 5,42,580 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.13 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ 2,39,277 ರೂ. ಬೋನಸ್ ನೀಡಲಾಗುವುದು ಎಂದರು.

ಸದ್ಯ ಸಂಘದಲ್ಲಿ ದಿನಂಪ್ರತಿ 1600 ಲೀ. ಹಾಲು ಸಂಗ್ರಹವಾಗುತ್ತಿದೆ. ಆತೂರು ಉಪಕೇಂದ್ರದಲ್ಲಿ 270 ಲೀ., ಖಂಡಿಗ ಕೇಂದ್ರದಲ್ಲಿ 180 ಲೀ. ಸಂಗ್ರಹವಾಗುತ್ತಿದೆ. ಬಿಎಂಸಿಯಲ್ಲಿ 3000 ಲೀ. ಹಾಲು ಶೀತಲೀಕರಿಸಿ ಒಕ್ಕೂಟಕ್ಕೆ ಕಳುಹಿಸಲಾಗುತ್ತಿದೆ. ಕಾಲು-ಬಾಯಿ ಜ್ವರ, ಚರ್ಮಗಂಟು ರೋಗ ನಿರೋಧಕ ಲಸಿಕೆ, ಜಂತುಹುಳ ನಿವಾರಣ ಔಷಧಿ ವಿತರಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ, ಗುಣಮಟ್ಟ, ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ.

ಸದಸ್ಯರು ಹಾಲು ತರುವಾಗ ಅಪಘಾತಕ್ಕೀಡಾಗಿ ಹಾಲು ಚೆಲ್ಲಿ ಹೋದರೆ ಅದರ ಮೊತ್ತವನ್ನು ಸಂಘದಿಂದ ನೀಡುವ ಯೋಜನೆ, 100% ನಗದು ರಹಿತ ವ್ಯವಹಾರ ಗುರಿ, ನಂದಿನಿ ಡೀಲರ್‌ಶಿಪ್ ಮಾದರಿಯಲ್ಲಿ ಮಾರಾಟ ಮಳಿಗೆ ಆರಂಭದ ಯೋಜನೆ ಇದೆ ಎಂದು ಅವರು ತಿಳಿಸಿದರು.

ನಿರ್ದೇಶಕರ ಗೈರು ಹಾಜರಿ ಚರ್ಚೆ:
ಪ್ರತಿ ತಿಂಗಳು ಆಡಳಿತ ಮಂಡಳಿ ಸಭೆ ನಡೆಯುತ್ತಿದೆ. ಗೈರು ಹಾಜರಾಗುತ್ತಿರುವ ನಿರ್ದೇಶಕರ ರಾಜೀನಾಮೆ ಪಡೆದು ಸಕ್ರಿಯ ಸದಸ್ಯರನ್ನು ಸೇರ್ಪಡೆಗೊಳಿಸಿ ಸಹಕಾರ ಇಲಾಖೆ ಒಪ್ಪಿಗೆ ಪಡೆಯಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಕಾನೂನಾತ್ಮಕವಾಗಿ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಸದಸ್ಯ ಉದಯ ಕಶ್ಯಪ್ ಪೂರಿಂಗ ಸಲಹೆ ನೀಡಿದರು.

ಅಂಗಡಿ ತೆರವು ಚರ್ಚೆ:
ಸಂಘದ ಕಟ್ಟಡದಲ್ಲಿದ್ದ ಅಂಗಡಿಯನ್ನು ಸಂಘದ ಸ್ವಂತ ಉದ್ದೇಶಕ್ಕೆ ಅಗತ್ಯವಿದ್ದ ಕಾರಣ 1 ವರ್ಷ ಮೊದಲೇ ಸೂಚನೆ ನೀಡಿ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮತ್ತೊಂದು ಅಂಗಡಿ ಬಾಡಿಗೆದಾರರು ಜಗಲಿಯಲ್ಲಿ ಮೆಸ್ ಹಾಕಿ ಬಂದ್ ಮಾಡಿರುವುದಕ್ಕೂ ಆಕ್ಷೇಪ ವ್ಯಕ್ತವಾಯಿತು.

ದ.ಕ. ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಜಿತೇಂದ್ರ ಪ್ರಸಾದ್, ವಿಸ್ತರಣಾಧಿಕಾರಿ ಮಾಲತಿ ಅವರು ಒಕ್ಕೂಟದ ಸವಲತ್ತು, ಜಾನುವಾರು ವಿಮೆ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಎನ್. ಸುಬ್ರಹ್ಮಣ್ಯ ಭಟ್ ಬರೆಂಪಾಡಿ, ಬಾಲಕೃಷ್ಣ ಗೌಡ ಬಿ.ಬೇಂಗದಪಡ್ಪು, ಸುರೇಶ್ ನಾಯ್ಕ್ ಕೆ.ಕೊಯಿಲ, ಪ್ರಕಾಶ್ ಕೆ.ಆರ್. ಕೆಮ್ಮಾರ, ರತ್ನಾವತಿ ಎಸ್. ಗೌಡ ಬಟ್ಟೋಡಿ, ರೇಖಾ ಶೆಟ್ಟಿ ಬರೆಂಬಾಡಿ, ರವಿಪ್ರಸನ್ನ ಸಿ.ಕೆ. ಕುಂಡಡ್ಕ ಉಪಸ್ಥಿತರಿದ್ದರು. ಸದಸ್ಯರಾದ ಉದಯ ಕಶ್ಯಪ್ ಪೂರಿಂಗ, ದೇವಿಪ್ರಸಾದ್ ನೀರಾಜೆ, ಝುನೈದ್ ಕೆಮ್ಮಾರ, ದಾಸಪ್ಪ ಕುಲಾಲ್, ತೇಜಕುಮಾರ್ ರೈ, ಚಿತ್ತರಂಜನ್ ರಾವ್, ಸುದರ್ಶನ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿನವ್ ವೈ.ಟಿ. ವರದಿ ಮಂಡಿಸಿದರು. ಬಾಲಕೃಷ್ಣ ಗೌಡ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ವಂದಿಸಿದರು.

ಬಹುಮಾನ ವಿತರಣೆ:
ಅತೀ ಹೆಚ್ಚು ಹಾಲು ಪೂರೈಸಿದ 5 ಸದಸ್ಯರಿಗೆ ಬಹುಮಾನ ನೀಡಲಾಯಿತು – ಪ್ರಥಮ ವಾಸಪ್ಪ ಗೌಡ ಕೇದಗೆದಡಿ, ದ್ವಿತೀಯ ನಳಿನಿ ಕಾಯರಕಟ್ಟ, ತೃತೀಯ ಸತ್ಯಸುಂದರ ರಾವ್, ಚತುರ್ಥ ಸೇಸಪ್ಪ ಗೌಡ ವರ್ಣಡ್ಕ, 5ನೇ ಬಹುಮಾನ ದಿನೇಶ್ ಕೇದಗೆದಡಿ.

ಎಸ್‌ಎಸ್‌ಎಲ್‌ಸಿ – ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ತುಷಾರ್ ಎಸ್., ಭೌತಿಕ್ ಎಸ್., ಕಾರ್ತಿಕ್ (ಕಲಾ), ಫಾತಿಮಾ ಕೌಸರ್ (ವಿಜ್ಞಾನ), ಸ್ಪರ್ಶ ಜೆ. ಶೆಟ್ಟಿ (ವಾಣಿಜ್ಯ) ಹಾಗೂ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಎನ್‌ಸಿಸಿ ನೇವಿ ಕೆಡೆಟ್ ನಿಶ್ಚಿತ್ ಬಿ.ಸಿ. ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here